ADVERTISEMENT

ಮಹಿಳಾ ದಿನ ಸಂಕಲ್ಪ ದಿನವಾಗಿ ಆಚರಣೆ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2023, 14:34 IST
Last Updated 11 ಮಾರ್ಚ್ 2023, 14:34 IST
ಹೊಸಪೇಟೆಯಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಡಾ.ಪ್ರಮೋದ್ ಮಾತನಾಡಿದರು
ಹೊಸಪೇಟೆಯಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಡಾ.ಪ್ರಮೋದ್ ಮಾತನಾಡಿದರು   

ಹೊಸಪೇಟೆ (ವಿಜಯನಗರ): ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ (ಎಐಯುಟಿಯುಸಿ) ನಗರದ ರೈತ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಸಂಕಲ್ಪ ದಿನವಾಗಿ ಆಚರಿಸಲಾಯಿತು.

ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಡಾ.ಪ್ರಮೋದ್ ಮಾತನಾಡಿ, ಬಂಡವಾಳಶಾಹಿ ವ್ಯವಸ್ಥೆಯಲ್ಲಿ ವೇತನದ ಕೂಲಿಗಳಾಗಿ ಮಹಿಳೆಯರು ಬದಲಾಗುತ್ತಿದ್ದಾರೆ. ದೇಶದಲ್ಲಿ ಕೋಟ್ಯಂತರ ದುಡಿಯುವ ಹೆಣ್ಣು ಮಕ್ಕಳು ಜೀವನ ಯೋಗ್ಯ ವೇತನವಿಲ್ಲದೆ ಪರಿತಪಿಸುತ್ತಿದ್ದಾರೆ. ಆಳುವ ಸರ್ಕಾರಗಳ ಅಮಾನವೀಯ ಧೋರಣೆಯಿಂದಾಗಿ ದುಡಿಮೆಗೆ ತಕ್ಕ ಪ್ರತಿಫಲವಿಲ್ಲದೆ ಶ್ರಮಿಕ ಹೆಣ್ಣು ಮಕ್ಕಳ ಪರಿಸ್ಥಿತಿ ಶೋಚನೀಯವಾಗಿದೆ ಎಂದು ಹೇಳಿದರು.

ಹೆಣ್ಣುಮಕ್ಕಳಿಗೆ ನ್ಯಾಯಬದ್ಧವಾಗಿ ಸಿಗಬೇಕಾದ ಹಕ್ಕುಗಳಿಗೆ ಹೋರಾಡುತ್ತಲೇ, ಕಾರ್ಮಿಕ ಮಹಿಳೆಯರು ವಿಶಾಲ ಶೋಷಿತ ಜನಸಮೂಹವಾದ ಕಾರ್ಮಿಕ ವರ್ಗದೊಂದಿಗೆ ಜೊತೆಗೂಡಿ ಬಂಡವಾಳಶಾಹಿ ವಿರೋಧಿ ಸಮಾಜವಾದಿ ಕ್ರಾಂತಿಗೆ ಸಜ್ಜಾಗಬೇಕಿದೆ ಎಂದರು.

ADVERTISEMENT

ಎಐಯುಟಿಯುಸಿ ರಾಜ್ಯ ಸಮಿತಿ ಸದಸ್ಯೆ ಶಾಂತಾ ಮಾತನಾಡಿ, 1908 ರ ಮಾರ್ಚ್ 8ರಂದು ಉತ್ತಮ ವೇತನ ಹಾಗೂ ಉತ್ತಮ ಕೆಲಸದ ಸ್ಥಳಕ್ಕಾಗಿ ಆಗ್ರಹಿಸಿ 20 ಸಾವಿರಕ್ಕೂ ಹೆಚ್ಚು ಹೆಣ್ಣು ಮಕ್ಕಳು ಬೀದಿಗಿಳಿದು ಪ್ರತಿಭಟನೆ ನಡೆಸಿ ಪೊಲೀಸರ ದೌರ್ಜನ್ಯಕ್ಕೆ ತುತ್ತಾಗಿದ್ದರು. ಅದರ ನೆನಪಿನಲ್ಲಿ ಮಹಿಳಾ ದಿನ ಆಚರಿಸಲಾಗುತ್ತದೆ ಎಂದು ನೆನಪಿಸಿದರು.

ಸಂಘದ ತಾಲ್ಲೂಕು ಅಧ್ಯಕ್ಷೆ ನೇತ್ರಾವತಿ, ಮುಖಂಡರಾದ ಅನ್ನಪೂರ್ಣ, ಮಾರೆಕ್ಕ, ನಾಗರತ್ನ, ಸುನಿತಾ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.