ಬಳ್ಳಾರಿ: ಜಿಂದಾಲ್ ಸೌತ್‌ವೆಸ್ಟ್ (ಜೆಎಸ್‌ಡಬ್ಲ್ಯು) ಉಕ್ಕು ಕಂಪನಿಗೆ ಸಂಡೂರು ತಾಲ್ಲೂಕಿನ ತೋರಣಗಲ್ ಹೋಬಳಿಯಲ್ಲಿ 3,677 ಎಕರೆ ಜಮೀನನ್ನು ಕ್ರಯಕ್ಕೆ ನೀಡುವುದನ್ನು ಪ್ರಶ್ನಿಸಿ ಹೈಕೋರ್ಟ್‌ನ ಧಾರವಾಡ ಪೀಠದಲ್ಲಿ ರಿಟ್ ಅರ್ಜಿ ಸಲ್ಲಿಕೆಯಾಗಿದೆ.
ಕುಡುತಿನಿಯ ಮಂಜುನಾಥ್ ಮತ್ತು ಇತರ 30 ಮಂದಿ ಬುಧವಾರ ರಿಟ್ ಅರ್ಜಿ ಸಲ್ಲಿಸಿದ್ದು, ನ್ಯಾ. ಸಿ.ಎಂ ಪೂಣಚ್ಚ ಅವರಿದ್ದ ಪೀಠ ಗುರುವಾರ ವಿಚಾರಣೆ ನಡೆಸಿತು. ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿರುವ ನ್ಯಾಯಾಲಯ, ಜೆಎಸ್‌ಡಬ್ಲ್ಯುಗೂ ತುರ್ತು ನೋಟಿಸ್ ನೀಡಿದೆ. ಒಟ್ಟು 10 ಮಂದಿಯನ್ನು ಇದರಲ್ಲಿ ಪ್ರತಿವಾದಿಗಳನ್ನು ಮಾಡಲಾಗಿದೆ. ಮುಂದಿನ ವಿಚಾರಣೆಯನ್ನು ಜನವರಿ 16ಕ್ಕೆ ನಿಗದಿ ಮಾಡಲಾಗಿದೆ.
ಜಮೀನನ್ನು ಅತ್ಯಂತ ಕಡಿಮೆ ಬೆಲೆಗೆ ಖಾಸಗಿ ಕಂಪನಿಗೆ ಮಾರಲಾಗುತ್ತಿದೆ. ಇದೇ ಜಮೀನನಲ್ಲಿನ ಖನಿಜ ಸಂಪನ್ಮೂಲವನ್ನು ಸರ್ಕಾರ ಬಳಸಿಕೊಳ್ಳಲು ಅವಕಾಶವಿದೆ ಎಂದೂ ವಾದಿಸಲಾಗಿದೆ. ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ನ್ಯಾ. ಸಂತೋಷ ಹೆಗ್ಡೆ ಅವರ ವರದಿಯಲ್ಲಿ ಜೆಎಸ್‌ಡಬ್ಲ್ಯು ಹೆಸರು ಉಲ್ಲೇಖಿಸಿರುವುದನ್ನೂ ಅರ್ಜಿದಾರರು ಕೋರ್ಟ್ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದಾರೆ.
ಜಿಂದಾಲ್ ಕಂಪನಿಗೆ 3,677 ಎಕರೆ ಭೂಮಿಯನ್ನು ಮಾರಲು ಆಗಸ್ಟ್ 22ರ ಸಂಪುಟ ಸಭೆಯಲ್ಲಿ ತೀರ್ಮಾನಿಸಿದ್ದ ರಾಜ್ಯ ಸರ್ಕಾರ, ತೋರಣಗಲ್ಲು ಮತ್ತು ಕುರೇಕುಪ್ಪ ಗ್ರಾಮದ 2000.58 ಎಕರೆ ಜಮೀನನ್ನು ತಲಾ ಎಕರೆಗೆ ₹1.22 ಲಕ್ಷ ಮತ್ತು ಮುಸೇನಾಯಕನಹಳ್ಳಿ ಮತ್ತು ಯರಬನಹಳ್ಳಿಯ 1666.75 ಎಕರೆ ಜಮೀನನ್ನು ತಲಾ ಎಕರೆಗೆ ₹ 1.50 ಲಕ್ಷ ಅಂತಿಮ ಬೆಲೆ ನಿಗದಿ ಮಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.