ADVERTISEMENT

15ರಿಂದ ಯಕ್ಷಗಾನ ಬಯಲಾಟ ಸಾಹಿತ್ಯ ಸಮ್ಮೇಳನ

12 ಯಕ್ಷಗಾನ ಪ್ರದರ್ಶನ; 150ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗಿ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2019, 9:29 IST
Last Updated 13 ಮಾರ್ಚ್ 2019, 9:29 IST

ಹೊಸಪೇಟೆ: ‘ಇದೇ 15ರಿಂದ 17ರ ವರೆಗೆ ನಗರದ ಪಂಪ ಕಲಾ ಮಂದಿರದಲ್ಲಿ 14ನೇ ಅಖಿಲ ಭಾರತ ಯಕ್ಷಗಾನ ಬಯಲಾಟ ಸಾಹಿತ್ಯ ಸಮ್ಮೇಳನ ಆಯೋಜಿಸಿದ್ದು, ಈ ಅವಧಿಯಲ್ಲಿ ತಾಳ ಮದ್ದಳೆ ಸೇರಿದಂತೆ 12 ಯಕ್ಷಗಾನ ಪ್ರದರ್ಶನಗಳು ನಡೆಯಲಿವೆ’ ಎಂದು ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಮೋಹನ ಕುಂಟಾರ್‌ ತಿಳಿಸಿದರು.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದ ವಿವಿಧ ಭಾಗದ 150ಕ್ಕೂ ಹೆಚ್ಚು ಪ್ರತಿನಿಧಿಗಳು ಪಾಲ್ಗೊಳ್ಳುವರು. ಸ್ಥಳೀಯರು ಕೂಡ ಭಾಗವಹಿಸುತ್ತಾರೆ. ಈಗಾಗಲೇ ಈ ಕುರಿತು ಶಾಲಾ–ಕಾಲೇಜಿನ ಮುಖ್ಯಸ್ಥರಿಗೆ ವಿಷಯ ತಿಳಿಸಲಾಗಿದೆ’ ಎಂದರು.

‘ಕುಂದಾಪುರ, ಮೈಸೂರು, ಕಾಸರಗೋಡು, ಬೆಳಗಾವಿ, ಗದಗ ಸೇರಿದಂತೆ ಇದುವರೆಗೆ ರಾಜ್ಯದ ವಿವಿಧ ಕಡೆಗಳಲ್ಲಿ 13 ಸಮ್ಮೇಳನಗಳು ಯಶಸ್ವಿಯಾಗಿ ನಡೆದಿವೆ. ಯಕ್ಷಗಾನ–ಬಯಲಾಟ ಪ್ರೇಮಿಗಳ ಕೋರಿಕೆಯ ಮೇರೆಗೆ ಈ ಸಲ ನಗರದಲ್ಲಿ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.

ADVERTISEMENT

‘ಮಾ. 15ರಂದು ಬೆಳಿಗ್ಗೆ 10ಕ್ಕೆ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎ. ಹೆಗಡೆ ಉದ್ಘಾಟಿಸುವರು. ಅದಕ್ಕೂ ಪೂರ್ವದಲ್ಲಿ ಸಮ್ಮೇಳನಾಧ್ಯಕ್ಷ ಪ್ರೊ.ಬಿ.ಆರ್‌. ಪೊಲೀಸ್‌ ಪಾಟೀಲ ಅವರನ್ನು ರೋಟರಿ ವೃತ್ತದಿಂದ ಕಾರ್ಯಕ್ರಮ ನಡೆಯಲಿರುವ ಸ್ಥಳದ ವರೆಗೆ ಮೆರವಣಿಗೆಯಲ್ಲಿ ಕರೆ ತರಲಾಗುವುದು’ ಎಂದು ಮಾಹಿತಿ ನೀಡಿದರು.

‘ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸ.ಚಿ. ರಮೇಶ ‘ಕಿರೀಟ’ ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವರು. ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಟಿ. ಶ್ಯಾಮ್‌ ಭಟ್‌ ಯಕ್ಷಗಾನಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಬಿಡುಗಡೆಗೊಳಿಸುವರು. ಮಧ್ಯಾಹ್ನ 2ಕ್ಕೆ ಬೆಟ್ಟದ ಮಲ್ಲೇಶ್ವರ ಸಾಂಸ್ಕೃತಿಕ ಜಾನಪದ ದೊಡ್ಡಾಟ ಸಂಘವು ‘ಸಾಂಬನ ಕಥೆ’ ಪ್ರಸ್ತುತಪಡಿಸಲಿದೆ. 3ರಿಂದ 5ರ ವರೆಗೆ ‘ಪಡುವಲಪಾಯ’ ಯಕ್ಷಗಾನ ಗೋಷ್ಠಿ ಜರುಗುವುದು’ ಎಂದು ತಿಳಿಸಿದರು.

‘ಅಂದು ಸಂಜೆ 5ಕ್ಕೆ ಹೊಸೂರಿನ ಭಾರತಿ ಕಲಾ ಪ್ರತಿಷ್ಠಾನವು ‘ಸಂಗ್ರಾಮ ಪೀಠಿಕೆ’, ಸಂಜೆ 6.30ಕ್ಕೆ ಬಳ್ಳಾರಿಯ ಹುಲಿಕುಂಟೆರಾಯ ತೊಗಲು ಬೊಂಬೆ ಕಲಾ ತಂಡವು ‘ಬಸವಬೆಳೆ’, ಸಂಜೆ 7ಕ್ಕೆ ಶಿವಮೊಗ್ಗದ ಸಾಯಿಕಲಾ ಪ್ರತಿಷ್ಠಾನವು ‘ತೀರ್ಥಯಾತ್ರೆ’ ಪ್ರಸಂಗ ನಡೆಸಿಕೊಡಲಿದೆ’ ಎಂದು ಹೇಳಿದರು.

‘ಮಾ. 16ರಂದು ಮಧ್ಯಾಹ್ನ 12ಕ್ಕೆ ‘ಸುದರ್ಶನ ವಿಜಯ’, 2ಕ್ಕೆ ‘ಕೃಷ್ಣ ಪಾರಿಜಾತ, 3ಕ್ಕೆ ‘ವೀರ ಅಭಿಮನ್ಯು’, 4ಕ್ಕೆ ‘ಮನ್ಮಥ ವಿಜಯ’, 5ಕ್ಕೆ ‘ಸತ್ಯಹರಿಶ್ಚಂದ್ರ’, 6.30ಕ್ಕೆ ‘ಜಾಂಬವತಿ ಕಲ್ಯಾಣ‘ ಯಕ್ಷಗಾನ ನಡೆಸಿಕೊಟ್ಟರೆ, 17ರಂದು ಬೆಳಿಗ್ಗೆ 10ಕ್ಕೆ ಯಕ್ಷಗಾನ ತಾಳಮದ್ದಲೆ, ಮಧ್ಯಾಹ್ನ 2.30ಕ್ಕೆ ‘ವೀರ ಬಬ್ರುವಾಹನ’, 3.30ಕ್ಕೆ ‘ಶ್ಯಮಂತಕ ಮಣಿ’ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಸಂಜೆ 6ಕ್ಕೆ ಸಮಾರೋಪ ಸಮಾರಂಭ ಜರುಗುವುದು’ ಎಂದು ವಿವರಿಸಿದರು.

ಕರ್ನಾಟಕ ಸಾಂಸ್ಕೃತಿಕ ಕಲಾ ಪ್ರತಿಷ್ಠಾನ, ಕರ್ನಾಟಕ ಕಲಾಭಿಮಾನ ಸಂಘದ ಸಹಭಾಗಿತ್ವದಲ್ಲಿ ಸಮ್ಮೇಳನ ಆಯೋಜಿಸಲಾಗಿದೆ. ಸಮ್ಮೇಳನದ ಸಂಚಾಲಕ ಎಸ್‌.ಎನ್‌. ಪಂಜಾಜೆ, ಸ್ವಾಗತ ಸಮಿತಿ ಕಾರ್ಯದರ್ಶಿ ಬಿ.ವಿ. ಭಟ್‌, ಉಪಾಧ್ಯಕ್ಷ ಆರ್‌.ಪಿ. ಗುರುರಾಜ, ಸದಸ್ಯರಾದ ಶ್ರೀಪತಿ ಆಚಾರ್ಯ, ಗೋಪಾಲಾಚಾರ್‌, ಎಂ.ಎಂ. ಶ್ರೀರಾಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.