ADVERTISEMENT

’ಕನ್ನಡ ವಿ.ವಿ.ಯಲ್ಲಿ ಯೋಗ ಕೇಂದ್ರ ಆರಂಭ‘

ಐದು ದಿನಗಳ ಯೋಗ ಶಿಬಿರಕ್ಕೆ ಕುಲಪತಿ ಚಾಲನೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2019, 14:24 IST
Last Updated 17 ಜೂನ್ 2019, 14:24 IST
ಕಾರ್ಯಕ್ರಮದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸ.ಚಿ. ರಮೇಶ ಮಾತನಾಡಿದರು
ಕಾರ್ಯಕ್ರಮದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸ.ಚಿ. ರಮೇಶ ಮಾತನಾಡಿದರು   

ಹೊಸಪೇಟೆ: ವಿಶ್ವ ಯೋಗ ದಿನದ ನಿಮಿತ್ತ ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿರುವ ಐದು ದಿನಗಳ ಯೋಗ ತರಬೇತಿ ಶಿಬಿರ ಸೋಮವಾರ ಆರಂಭಗೊಂಡಿತು.

ಸಸಿಗೆ ನೀರೆರೆದು ಕಾರ್ಯಕ್ರಮ ಉದ್ಘಾಟಿಸಿದ ವಿ.ವಿ. ಕುಲಪತಿ ಪ್ರೊ.ಸ.ಚಿ. ರಮೇಶ, ’ಈ ಶೈಕ್ಷಣಿಕ ವರ್ಷದಿಂದ ಕನ್ನಡ ವಿಶ್ವವಿದ್ಯಾಲಯದಲ್ಲಿ ಯೋಗ ಕೇಂದ್ರವನ್ನು ಆರಂಭಿಸಿ ಯೋಗ ಡಿಪ್ಲೋಮಾ ಮತ್ತು ಸರ್ಟಿಫಿಕೇಟ್ ಕೋರ್ಸ್‍ಗಳನ್ನು ಆರಂಭಿಸಲಾಗುವುದು‘ ಎಂದು ಹೇಳಿದರು.

’ಯೋಗವು ಎಲ್ಲಾ ಒತ್ತಡಗಳನ್ನು ಸಮತೋಲನಗೊಳಿಸಿ ವ್ಯಕ್ತಿಯನ್ನು ಆರೋಗ್ಯವಂತನಾಗಿಸುತ್ತದೆ. ಯೋಗದ ಅಭ್ಯಾಸವು ನರಮಂಡಲ, ಹಾರ್ಮೋನುಗಳು ಹಾಗೂ ಮನಸ್ಸನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುವುದರಿಂದ ದೇಹದ ಮೇಲೆ ಉಂಟಾಗುವ ವ್ಯಾಧಿಯನ್ನು ಬರದಂತೆ ರಕ್ಷಿಸುತ್ತದೆ‘ ಎಂದರು.

ADVERTISEMENT

’ಯೋಗದ ಎಂಟು ಅಂಗಗಳಾದ ಯಮ, ನಿಯಮ, ಆಸನ, ಪ್ರಾಣಾಯಾಮ, ಪತ್ಯಾಹಾರ, ಧಾರಣ, ಧ್ಯಾನ ಮತ್ತು ಸಮಾಧಿ ಇವು ನಮ್ಮ ಜೀವನ ಕ್ರಮದ ಮೇಲೆ ಮಹತ್ತರವಾದ ಪರಿಣಾಮವನ್ನು ಬೀರುತ್ತವೆ. ಹಾಗಾಗಿ ಯೋಗ ಬಹಳ ಮಹತ್ವದ್ದಾಗಿದೆ. ದೈಹಿಕ, ಮಾನಸಿಕ, ಭಾವನಾತ್ಮಕ, ಸಾಮಾಜಿಕ ಮತ್ತು ಆಧ್ಯಾತ್ಮಿಕವಾಗಿ ಸಮತೋಲನ ಸ್ಥಿತಿ ಉಂಟು ಮಾಡುವ ಯೋಗವನ್ನು ವಿಶ್ವದ ಜನರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿರುವುದರಿಂದ ವಿಶ್ವಮಾನ್ಯತೆ ಪಡೆದುಕೊಂಡಿದೆ‘ ಎಂದು ಹೇಳಿದರು.

ಪತಂಜಲಿ ಯೋಗ ಸಮಿತಿಯ ರಾಜ್ಯ ಪ್ರಭಾರಿ ಭವರಲಾಲ್ ಆರ್ಯ, ’ಯೋಗ ಮಾಡುವುದರಿಂದ ಯಾವುದೇ ಕಾಯಿಲೆಗಳು ಬರಲಿಕ್ಕೆ ಸಾಧ್ಯವಿಲ್ಲ. ಹೀಗಾಗಿ ನಿತ್ಯ ಯೋಗ ಮಾಡಬೇಕು‘ ಎಂದರು.

ಯೋಗ ಶಿಬಿರದ ಸಂಯೋಜನಾಧಿಕಾರಿ ಎಫ್.ಟಿ.ಹಳ್ಳಿಕೇರಿ, ಉಪಕುಲಸಚಿವ ಎ.ವೆಂಕಟೇಶ, ಪತಂಜಲಿ ಯೋಗ ಸಮಿತಿಯ ದಾಕ್ಷಾಯಿಣಿ ಶಿವಕುಮಾರ, ಕಿಸಾನ್ ಸಮಿತಿಯ ಕೃಷ್ಣ ನಾಯ್ಕ, ವೀರೇಶ್‍ ಬಾಬು, ವೈದ್ಯ ಸಂಪತ್‍ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.