ADVERTISEMENT

ಮಕ್ಕಳ ಸಾಹಿತ್ಯಕ್ಕೆ ಮಹತ್ವ ದೊರಕಲಿ: ವೈದ್ಯ ಅರವಿಂದ ಪಟೇಲ್‌

‘ದಿ ಯಂಗ್‌ ಸೈಂಟಿಸ್ಟ್‌’ ಕೃತಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 1 ಜನವರಿ 2019, 13:37 IST
Last Updated 1 ಜನವರಿ 2019, 13:37 IST
ಶಿವಲಿಂಗಪ್ಪ ಹಂದಿಹಾಳು (ಬಲದಿಂದ ಎರಡನೆಯರು) ಅವರ ‘ದಿ ಯಂಗ್ ಸೈಂಟಿಸ್ಟ್‌’ ಅನುವಾದ ಕೃತಿಯನ್ನು ವೈದ್ಯ ಅರವಿಂದ ಪಟೇಲ್‌ (ಎಡತುದಿ) ಬಿಡುಗಡೆ ಮಾಡಿದರು. 
ಶಿವಲಿಂಗಪ್ಪ ಹಂದಿಹಾಳು (ಬಲದಿಂದ ಎರಡನೆಯರು) ಅವರ ‘ದಿ ಯಂಗ್ ಸೈಂಟಿಸ್ಟ್‌’ ಅನುವಾದ ಕೃತಿಯನ್ನು ವೈದ್ಯ ಅರವಿಂದ ಪಟೇಲ್‌ (ಎಡತುದಿ) ಬಿಡುಗಡೆ ಮಾಡಿದರು.    

ಬಳ್ಳಾರಿ: ‘ಸಾಹಿತ್ಯಧಾರೆಯಲ್ಲಿ ಮಕ್ಕಳ ಸಾಹಿತ್ಯಕ್ಕೆ ಮಹತ್ವ ದೊರಕಬೇಕು’ ಎಂದು ವೈದ್ಯ ಅರವಿಂದ ಪಟೇಲ್‌ ಪ್ರತಿಪಾದಿಸಿದರು.

ನಗರದ ಅಲ್ಲಂ ಸುಮಂಗಳಮ್ಮ ಮಹಿಳೆಯರ ಕಾಲೇಜಿನಲ್ಲಿ ಮಂಗಳವಾರ ಅಭಿನವ ಪ್ರಕಾಶನವು ಏರ್ಪಡಿಸಿದ್ದ,ಕೆ.ಶಿವಲಿಂಗಪ್ಪ ಹಂದಿಹಾಳು ಅವರು ತೆಲುಗಿನಿಂದ ಅನುವಾದಿಸಿರುವ ’ದಿ ಯಂಗ್ ಸೈಂಟಿಸ್ಟ್‌’ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ‘ವೈದ್ಯಕೀಯ ವಿಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯಗಳನ್ನು ಶಾಲಾ ಮಕ್ಕಳಿಗೆ ಪರಿಣಾಮಕಾರಿಯಾಗಿ ಹೇಗೆ ಬೋಧಿಸಬಹುದು ಎಂಬ ಕುರಿತು ಕೃತಿ ಗಮನ ಸೆಳೆಯುತ್ತದೆ. ಭಿನ್ನ ಕಥನಗಳ ನೆಲೆಯಲ್ಲಿ ಪಠ್ಯಗಳನ್ನು ಬೋಧಿಸುವ ನಿಟ್ಟಿನಲ್ಲಿ ಶಿಕ್ಷಕರು ಇಂಥ ಕೃತಿಗಳನ್ನು ಓದಿ ಪ್ರಯೋಗಶೀಲರಾಗಬೇಕು ’ ಎಂದರು.

‘ಮಕ್ಕಳಲ್ಲಿರುವ ಹುಡುಕಾಟದ ಗುಣಕ್ಕೆ ಶಿಕ್ಷಕರು ಮತ್ತು ಪೋಷಕರು ನೀರೆರೆಯಬೇಕು.ಮಕ್ಕಳ ಭಾಷಾ ಕೌಶಲ, ಸಂಶೋಧನೆ ಪ್ರವೃತ್ತಿಯನ್ನು ಉನ್ನತಮಟ್ಟಕ್ಕೆ ಕೊಂಡೊಯ್ಯಲು ಇದು ಸಹಕಾರಿಯಾಗುತ್ತದೆ’ ಎಂದರು.

ADVERTISEMENT

‘ಮಕ್ಕಳಿಗಾಗಿ ಮಂಜುಲೂರಿ ಅವರು ಬರೆದ ಕಾದಂಬರಿಯನ್ನು ಅನುವಾದಿಸಲು ಅವಕಾಶ ನೀಡಿ ಪ್ರಕಟಿಸಿದ ಅಭಿನವ ಪ್ರಕಾಶನವು ಮೇವುಂಡಿ ಮಲ್ಲಾರಿಮಕ್ಕಳ ಕಾದಂಬರಿ ಸುಗ್ಗಿ ಮಾಲೆ ಅಡಿ ಪ್ರಕಟಿಸಿರುವುದು ಸಂತಸ ತಂದಿದೆ’ ಎಂದು ಅನುವಾದಕ ಶಿವಲಿಂಗಪ್ಪ ಹೇಳಿದರು.

ಕಾರ್ಯಕ್ರಮವನ್ನು ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಉಡೇದ ಬಸವರಾಜಉದ್ಘಾಟಿಸಿದರು. ಲೇಖಕ ನಿಷ್ಠಿ ರುದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಲೇಖಕ ಪರಮೇಶ್ವರಯ್ಯ ಸೊಪ್ಪಿನಮಠ, ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷೆ ಶಶಿಕಲಾ ಅಂಗಡಿ, ಪ್ರಾಂಶುಪಾಲ ಎಸ್‌.ವೈ.ತಿಮ್ಮಾರೆಡ್ಡಿ, ಕರ್ನಾಟಕ ಯುವಕ ಸಂಘದ ಅಧ್ಯಕ್ಷ ಬಸವರಾಜ, ದೈಹಿಕ ಶಿಕ್ಷಣ ಶಿಕ್ಷಕ ಕಟ್ಟೇಸ್ವಾಮಿ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.