
ಸಿರುಗುಪ್ಪ: ತಂದೆ ಆರೋಗ್ಯ ಸುಧಾರಿಸಿಕೊಳ್ಳುವ ಉದ್ದೇಶದಿಂದ ನಿತ್ಯ ಮನೆಯಲ್ಲಿ ವ್ಯಾಯಾಮ, ಯೋಗಾಭ್ಯಾಸ ಮಾಡುವಾಗ ನೋಡುತ್ತ ತಂದೆ ಮಾಡಿದಂತೆ ಯೋಗ ಮಾಡುವುದನ್ನು ಕಲಿತ ಏಳು ವರ್ಷದ ಬಾಲಕಿ, ಕೇವಲ 32 ಸೆಕೆಂಡ್‌ಗಳಲ್ಲಿ ಸೂರ್ಯನಮಸ್ಕಾರದ 12 ಭಂಗಿ ಸೇರಿದಂತೆ 70ಕ್ಕೂ ಹೆಚ್ಚು ಆಸನಗಳನ್ನು ಮಾಡಿ ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ ದಾಖಲೆ ತನ್ನದಾಗಿಸಿಕೊಂಡಿದ್ದಾಳೆ.
ಇಲ್ಲಿನ ಸದಾಶಿವನಗರದ ನಿವಾಸಿ ಮಂಜುನಾಥಶೆಟ್ಟಿ– ಗೀತಾ ದಂಪತಿಯ ಮಗಳಾದ ಕೃತಿಕಾಳ ಸಾಧನೆ ಇದು. ಮೂರು ವರ್ಷ ಐದು ತಿಂಗಳಲ್ಲೇ ದೇಶ, ವಿದೇಶಗಳ ಒಟ್ಟು ಆರು ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿದ್ದಾಳೆ.
ಮಂಜುನಾಥಶೆಟ್ಟಿ ವ್ಯಾಪಾರಿಯಾಗಿದ್ದು, ನಿತ್ಯ ಯೋಗಾಭ್ಯಾಸ ಮಾಡುತ್ತಾರೆ. ಇದು ಕೃತಿಕಾಗೆ ಪ್ರೇರಣೆ ಆಗಿದೆ. ಮಗಳ ಆಸಕ್ತಿ ಕಂಡ ಪಾಲಕರು ಮಗುವಿಗೆ ಮೂರು ವರ್ಷದವರೆಗೂ ನಿರಂತರ ಅಭ್ಯಾಸ ಮಾಡಿಸುತ್ತಿದ್ದಾರೆ. ಮಗಳ ಪ್ರತಿಭೆ ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣ ಬಳಕೆ ಮಾಡಿಕೊಂಡು ಯೋಗಾಭ್ಯಾಸದಲ್ಲಿನ ಪ್ರಾರಂಭಿಕ ದಾಖಲೆಗಳನ್ನು ವೀಕ್ಷಿಸಿ, ನಂತರ ಮಗಳು ಕೂಡ ಸಾಧನೆಯತ್ತ ಮುನ್ನುಗ್ಗಲು ಪ್ರೇರೇಪಿಸಿದ್ದಾರೆ.
ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿನ ಈ ಹಿಂದಿನ ದಾಖಲೆಗಳನ್ನು ಬದಿಗೊತ್ತಿ 2021ರ ಸೆ.14ರಂದು 64 ಯೋಗಾಸನಗಳ ಮೂಲಕ ಮತ್ತೊಂದು ದಾಖಲೆ ಮಾಡಿದ್ದಾಳೆ. 2021 ಸೆ.15ರಂದು ಏಷ್ಯಾಬುಕ್ ಆಫ್ ರೆಕಾರ್ಡ್‌ಗಳಲ್ಲಿ ಬಾಲಕಿಯ ಹೆಸರು ದಾಖಲಾಗಿದೆ. ಸೆ.16ರಂದು ಒಂದೇ ದಿನ ಚಾಂಪಿಯನ್‌ಷಿಪ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಹಾಗೂ ಪ್ರತಿಷ್ಠಿತ ಅಬ್ದುಲ್ ಕಲಾಂ ವರ್ಲ್ಡ್ ರೆಕಾರ್ಡ್ ತನ್ನದಾಗಿಸಿಕೊಂಡಿದ್ದಾಳೆ.
ಚಿಕ್ಕ ವಯಸ್ಸಿನಲ್ಲಿಯೇ ಮಗಳ ಪ್ರತಿಭೆ ಗುರುತಿಸಿ ಯೋಗಾಭ್ಯಾಸಕ್ಕೆ ಪ್ರೋತ್ಸಾಹ ನೀಡಿದೆ. 6 ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿರುವ ಮಗಳ ಪ್ರತಿಭೆಯನ್ನು ಗಿನ್ನಿಸ್ ಬುಕ್‌ಗೆ ಸೇರಿಸುವುದೇ ಗುರಿಮಂಜುನಾಥಶೆಟ್ಟಿ, ಕೃತಿಕಾ ತಂದೆ