ತೆಕ್ಕಲಕೋಟೆ: ಪಟ್ಟಣದ ಶ್ರೀಮತಿ ಹೊನ್ನೂರಮ್ಮ ದಿವಂಗತ ಸಿದ್ದಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ ವಿಭಾಗ ವತಿಯಿಂದ ಮಂಗಳವಾರ 'ಪತ್ರಿಕೋದ್ಯಮ, ಐಚ್ಛಿಕ ಇಂಗ್ಲಿಷ್ ವಿಭಾಗ' ಮತ್ತು ಕಾಲೇಜಿನ 'ಯುವ ಸ್ಪೂರ್ತಿ' ಪತ್ರಿಕೆ ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಖಾಸಗಿ ಟಿವಿ ವಾಹಿನಿಯ ಹಿರಿಯ ನಿರೂಪಕಿ ನವಿತಾ ಜೈನ್, 'ಪತ್ರಿಕೋದ್ಯಮದಲ್ಲಿ ಇರುವವರು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಆಗ ಮಾತ್ರ ಮಾಧ್ಯಮ ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದು ಕರೆಸಿಕೊಳ್ಳುತ್ತದೆ' ಎಂದರು.
'ಯಾವುದೋ ವ್ಯಕ್ತಿ ಅಥವಾ ಪಕ್ಷದ ಪರವಾಗಿ ಕೆಲಸ ಮಾಡಿ 'ಗೋದಿ ಮೀಡಿಯಾ' ಎಂದು ಕರೆಸಿಕೊಳ್ಳಬೇಡಿ' ಎಂದು ಕಿವಿಮಾತು ಹೇಳಿದರು.
ಪ್ರಾಚಾರ್ಯ ಡಾ.ಮಲ್ಲಿಕಾರ್ಜುನ ಮೋಕ ಮಾತನಾಡಿ,'ಪತ್ರಿಕೋದ್ಯಮ ಹಾಗೂ ಇಂಗ್ಲಿಷ್ ಕೋರ್ಸ್ ಆರಂಭಿಸಿದ್ದು, ವಿದ್ಯಾರ್ಥಿಗಳು ಇವರ ಪ್ರಯೋಜನ ಪಡೆಯಬೇಕು' ಎಂದು ತಿಳಿಸಿದರು.
ಪತ್ರಕರ್ತ ಸಿ.ಮಂಜುನಾಥ ಬಳ್ಳಾರಿ ಮತ್ತು ಪತ್ರಿಕೋದ್ಯಮದ ನಂಟು ಕುರಿತು ಮಾತನಾಡಿದರು. ಇದೇ ಸಂದರ್ಭದಲ್ಲಿ ಕಾಲೇಜಿನ 'ಯುವ ಸ್ಪೂರ್ತಿ' ಪತ್ರಿಕೆ ಲೋಕಾರ್ಪಣೆ ಮಾಡಲಾಯಿತು.
ಬಳ್ಳಾರಿ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಎಂ.ಎಸ್.ಸಿದ್ದಪ್ಪ ಮಾತನಾಡಿದರು. ಪ್ರಮುಖ ದಿನಪತ್ರಿಕೆಯ ಉಪ ಸಂಪಾದಕ ವೀರೆಂದ್ರ ಕೆಲಗಡೆ ಇದ್ದರು.
ಕಾರ್ಯಕ್ರಮದಲ್ಲಿ ರಾಜ್ಯಶಾಸ್ತ್ರ ವಿಭಾಗದ ಡಾ.ಜಗದೀಶ, ಅರ್ಥಶಾಸ್ತ್ರ ವಿಭಾಗ ಮುಖ್ಯಸ್ಥೆ ಡಾ ತೇಜಸ್ವಿನಿ, ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಡಾ. ವೈ. ಜನಾರ್ದನರೆಡ್ಡಿ, ಐಕ್ಯೂಎಸಿ ಸಂಚಾಲಕ ಡಾ.ಬಿ.ವಿರೇಶ್, ಪ್ರಾಧ್ಯಾಪಕರಾದ ಲಕ್ಷ್ಮಣ, ಸಿದ್ದೇಶ, ಮಾರಪ್ಪ ಎ.ಕೆ, ವರಲಕ್ಷ್ಮಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.