ADVERTISEMENT

ಬಳ್ಳಾರಿ | ಎಲ್ಲಿದೆ ನಿನ್ನ ಖಡ್ಗ, ಬಂದಿದ್ದೀನಿ ಬಾರೋ: ರೆಡ್ಡಿಗೆ ಜಮೀರ್ ಸವಾಲು

ಪೊಲೀಸರ ವಶಕ್ಕೆ ಜಮೀರ್

​ಪ್ರಜಾವಾಣಿ ವಾರ್ತೆ
Published 13 ಜನವರಿ 2020, 6:44 IST
Last Updated 13 ಜನವರಿ 2020, 6:44 IST
ಜಮೀರ್ ಅಹ್ಮದ್ ಖಾನ್
ಜಮೀರ್ ಅಹ್ಮದ್ ಖಾನ್   
""
""
""

ಬಳ್ಳಾರಿ:‘ಉಫ್ ಅಂದ್ರೆ ಯಾರೋ ಹಾರೋಗ್ತರೆ ಎಂದು ಶಾಸಕ ಜಿ.ಸೋಮಶೇಖರರೆಡ್ಡಿ ಹೇಳಿದ್ದರು. ಖಡ್ಗ ತಂದರೆ ಏನಾಗುತ್ತದೆ ಎಂದಿದ್ದರು. ಈಗ ಬಂದಿದ್ದೀನಿ ಬಾರೋ. ಎಲ್ಲಿದೆ ನಿನ್ನ ಖಡ್ಗ’ಎಂದು ಶಾಸಕ ಜಮೀರ್ ಅಹ್ಮದ್ ಸವಾಲು ಹಾಕಿದರು.

ನಗರಕ್ಕೆ ಸೋಮವಾರ ಬೆಂಬಲಿಗರೊಂದಿಗೆ ಬಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾವು ಶಾಂತಿ ಭಂಗ ಮಾಡುವುದಿಲ್ಲ. ನಮಗೆ ಪೊಲೀಸೆಂದರೆ ಗೌರವವಿದೆ. ನಮ್ಮನ್ನು ಬಂಧಿಸುವುದಾದರೆ ಬಂಧಿಸಲಿ. ಗುಂಡು ಹೊಡೆಯುವುದಾದರೆ ಹೊಡೆಯಲಿ’ಎಂದರು.

‘ನಾವೇನೂ ಸುಮ್ಮನೇ ನಮ್ಮಷ್ಟಕ್ಕೇ ಬಂದಿಲ್ಲ. ರೆಡ್ಡಿ ಅವರ ಹೇಳಿಕೆ ಹಿನ್ನೆಲೆಯಲ್ಲಿ ಬಂದಿರೋದು. ಕಾಂಗ್ರೆಸ್ ಪಕ್ಷದ ವತಿಯಿಂದ ‌ಬಂದಿಲ್ಲ. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಇಡೀ ದೇಶದಲ್ಲೇ ಪ್ರತಿಭಟನೆ ನಡೆದಿದೆ. ಅದಕ್ಕೆ ಕಾಂಗ್ರೆಸ್ ಪಕ್ಷದ ಅನುಮತಿ ತಗೋಬೇಕಾಗಿಲ್ಲ’ಎಂದು ಪ್ರತಿಪಾದಿಸಿದರು.

ADVERTISEMENT

ನಗರದ ಕಂಟ್ರಿ ಕ್ಲಬ್ ಬಳಿಯೇ ಪೊಲೀಸರು ಜಮೀರ್ ಅವರನ್ನು ಪೊಲೀಸರು ವಶಕ್ಕೆ ಪಡೆದರು. ಅಹಂಬಾವಿ ಪ್ರದೇಶದಲ್ಲಿರುವ ರೆಡ್ಡಿ ಅವರ ಮನೆ ಮುಂದೆ ಧರಣಿ ನಡೆಸುವ ಜಮೀರ್ ಅಹ್ಮದ್ ಅವರ ಉದ್ದೇಶ ಈಡೇರಲಿಲ್ಲ. ಸ್ಥಳೀಯ ಕಾಂಗ್ರೆಸ್ ಮುಖಂಡರ ಬೆಂಬಲ ಇಲ್ಲದಿದ್ದುದರಿಂದ ಜಮೀರ್ ಅವರ ಬೆಂಬಲಿಗರು ಬೇರೆ ಊರುಗಳಿಂದ ಬಂದಿದ್ದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ಸ್ಥಳದಲ್ಲಿದ್ದು ಪರಿಸ್ಥಿತಿ ನಿಯಂತ್ರಿಸಿದರು.

ಜಮೀರ್ ಇದ್ದ ಪೊಲೀಸ್ ವಾಹನದ ಎದುರು ಪ್ರತಿಭಟನೆ

ಪೊಲೀಸ್ ವಾಹನದ ಎದುರು ಪ್ರತಿಭಟನೆ

ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಅವರ ಮನೆ ಮುಂದೆ ಧರಣಿ ನಡೆಸಲು ಮುಂದಾಗಿದ್ದ ಶಾಸಕ ಜಮೀರ್ ಅಹ್ಮದ್ ಅವರನ್ನು ನಗರ ಹೊರವಲಯದಲ್ಲೇ ವಶಕ್ಕೆ ಪಡೆದ ಪೊಲೀಸರ ಕ್ರಮವನ್ನು ಖಂಡಿಸಿ ತಾಲ್ಲೂಕಿನ ಕುಡುತಿನಿ ಬಳಿ ಕಾಂಗ್ರೆಸ್ ಮುಖಂಡರು ಮತ್ತು‌ ಮುಸ್ಲಿಮ್ ಸಮುದಾಯದ ಮುಖಂಡರು ಪ್ರತಿಭಟಿಸಿದರು.

ಬಳ್ಳಾರಿಯಿಂದ ತೋರಣಗಲ್ ವಿಮಾನ ನಿಲ್ದಾಣಕ್ಕೆ ಶಾಸಕ ಜಮೀರ್ ಅವರನ್ನು ಕರೆದೊಯ್ಯುತ್ತಿದ್ದ ಪೊಲೀಸರ ವಾಹನಕ್ಕೆ ಕುಡುತಿನಿ ಬಳಿ ತಡೆ ಒಡ್ಡಿದ ನೂರಾರು ಮಂದಿ ಪ್ರತಿಭಟಿಸಿದರು. ಅವರನ್ನು ಬಲವಂತವಾಗಿ ದಾಟಿಕೊಂಡೇ ವಾಹನ ಮುಂದಕ್ಕೆ ಹೋಯಿತು.

ಹಿನ್ನೆಲೆ: ಜ.3ರಂದು ನಗರದಲ್ಲಿ ದೇಶ ಭಕ್ತ ನಾಗರಿಕರ ವೇದಿಕೆಯು ಕಾಯ್ದೆ ಬಗ್ಗೆ ಏರ್ಪಡಿಸಿದ್ದ ಜಾಗೃತಿ ಸಭೆಯಲ್ಲಿ ಮಾತನಾಡಿದ್ದ ರೆಡ್ಡಿ, ಪ್ರಚೋದನಕಾರಿ ಭಾಷಣ ಮಾಡಿ, ಮುಸ್ಲಿಮರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದರು. ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಮುಖಂಡರು ಎಸ್ಪಿ ಸಿ.ಕೆ.ಬಾಬಾ ಅವರಿಗೆ ಮನವಿ ಸಲ್ಲಿಸಿದ್ದರು.

ಜಮೀರ್ ಅಹ್ಮದ್‌ ಅವರ ‌ಧರಣಿಗೆ ಅವಕಾಶ ನೀಡಬಾರದು ಎಂದು ಜಿಲ್ಲಾಡಳಿತವನ್ನು ಆಗ್ರಹಿಸಿ ಶಾಸಕ ಕೆ.ಸಿ.ಕೊಂಡಯ್ಯ ಕೂಡ ಬಹಿರಂಗ ಹೇಳಿಕೆ ನೀಡಿದ್ದರು.

ಬಳ್ಳಾರಿ ಹೊರವಲಯದ ಕುಡುತಿನಿ ಬಳಿ ಜಮೀರ್ ಅವರನ್ನು ಪೊಲೀಸರು ತಡೆದರು.
ಜಮೀರ್‌ ಅಹ್ಮದ್‌ಗೆ ಕಾಂಗ್ರೆಸ್ ಕಾರ್ಯಕರ್ತರ ಬೆಂಬಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.