ADVERTISEMENT

ಅನ್ಯಾಯದ ವಿರುದ್ಧ ಹೋರಾಡಿ: ಪೇಜಾವರ ಶ್ರೀ

​ಪ್ರಜಾವಾಣಿ ವಾರ್ತೆ
Published 16 ಜೂನ್ 2012, 7:50 IST
Last Updated 16 ಜೂನ್ 2012, 7:50 IST

ಆನೇಕಲ್: ಅಧರ್ಮ, ಅನ್ಯಾಯದ ವಿರುದ್ಧ ಹೋರಾಟ ಮಾಡುವ ಮನೋಭಾವನೆಯನ್ನು ಯುವಕರು ಬೆಳೆಸಿಕೊಳ್ಳಬೇಕು. ಧರ್ಮಕ್ಕಾಗಿ, ದೇಶಕ್ಕಾಗಿ ಯಾವುದೇ ರೀತಿಯ ತ್ಯಾಗ ಮಾಡಲು ಸಿದ್ಧರಿರಬೇಕು ಎಂದು ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ನುಡಿದರು.

ಅವರು ತಾಲ್ಲೂಕಿನ ದೊಡ್ಡಹಾಗಡೆ ಗ್ರಾಮದಲ್ಲಿ ಶುಕ್ರವಾರ ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿಗಳ ಗುರುವಂದನಾ ಕಾರ್ಯಕ್ರಮ ಹಾಗೂ ಅಭಯಾಂಜನೇಯ ಸ್ವಾಮಿ ಮೂರ್ತಿ  ಪ್ರತಿಷ್ಠಾಪನೆ ಮತ್ತು ಬ್ರಹ್ಮ ಕುಂಭಾಭಿಷೇಕ ಮಹೋತ್ಸವದ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ಭಕ್ತಿ ಮತ್ತು ಶಕ್ತಿ ಸಮ್ಮಿಲನವಾದಾಗ ಕಾರ್ಯ ಸಿದ್ಧಿಯಾಗುತ್ತದೆ. ಆಂಜನೇಯನ ರೀತಿಯಲ್ಲಿ ಶಕ್ತಿ ಮತ್ತು ಭಕ್ತಿ ಎರಡನ್ನು ಯುವಕರು ಹೊಂದುವಂತಾಗಬೇಕು. ರಾಷ್ಟ್ರ ಸೇವೆ ಮಾಡುವ ಸಂಕಲ್ಪವನ್ನು ಮಾಡಬೇಕು ಎಂದರು.
ಜನರಲ್ಲಿ ಸ್ಫೂರ್ತಿ ಮತ್ತು ಭಕ್ತಿಯನ್ನು ಬೆಳೆಸುವ ಸಲುವಾಗಿ ವ್ಯಾಸರಾಯರು ರಾಷ್ಟ್ರದೆಲ್ಲೆಡೆ 720 ಆಂಜನೇಯ ಮೂರ್ತಿಗಳನ್ನು ಸ್ಥಾಪಿಸಿದ್ದರು ಎಂದು ಸ್ಮರಿಸಿಕೊಂಡರು. ಸಿದ್ದಗಂಗಾ ಶ್ರೀಗಳು ಆಂಜನೇಯನಂತೆ ಚಿರಂಜೀವಿ. ಇವರ ಮಾರ್ಗದರ್ಶನದಿಂದ ಸಂತರು ಸಮಾಜ ಸ್ಫೂರ್ತಿ ಪಡೆಯುತ್ತಿದೆ ಎಂದರು.
ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಮಾತನಾಡಿ, ಯಾವುದೇ ಸಮಾಜಕ್ಕೆ ಗುರಿ-ಗುರು ಇರಬೇಕು. ಗುರುವಿದ್ದಾಗ ಹಲವಾರು ಗುರಿಗಳು ದೊರೆಯುತ್ತವೆ. ಈ ಮೂಲಕ ಸಾಮಾಜಿಕ ಪರಿವರ್ತನೆಯಾಗುತ್ತದೆ. ರಾಜಕಾರಣದಲ್ಲಿ ಧರ್ಮವಿರಬೇಕು, ಧರ್ಮದಲ್ಲಿ ರಾಜಕಾರಣ ಇರಬಾರದು ಎಂದು ಹೇಳಿದರು.
ಸಮಾಜದಲ್ಲಿ ಒಬ್ಬ ವ್ಯಕ್ತಿ, ಒಂದು ವಸ್ತುವನ್ನು ತನ್ನದೇ ರೀತಿಯಲ್ಲಿ ವ್ಯಾಖ್ಯಾನ ಮಾಡುತ್ತಾನೆ. ಆದರೆ ಆ ವಸ್ತುವಿನ ಮೌಲ್ಯ ಎಂದಿಗೂ ಕಡಿಮೆಯಾಗುವುದಿಲ್ಲ ಎಂದು ಹೇಳಿದರು.
ಬೇಲಿ ಮಠದ ಶಿವರುದ್ರ ಸ್ವಾಮೀಜಿ ಮಾತನಾಡಿ, ಸರ್ಕಾರಗಳು ಭ್ರಷ್ಟಾಚಾರದಿಂದ ದೂರ ಇರಬೇಕು. ಮದ್ಯರಹಿತ ಗ್ರಾಮ, ಇಲ್ಲವೇ ಗುಟ್ಕಾರಹಿತ ಗ್ರಾಮ ಮಾಡಲು ಚಿಂತಿಸುವ ಅವಶ್ಯಕತೆ ಇದೆ. ಇದರಿಂದ ಹಾಳಾಗುತ್ತಿರುವ ಯುವ ಪೀಳಿಗೆಯನ್ನು ರಕ್ಷಿಸಿದಂತಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಸಮಾಜ ಕಲ್ಯಾಣ ಸಚಿವ ಎ. ನಾರಾಯಣಸ್ವಾಮಿ ಮಾತನಾಡಿ, ಶಿವಕುಮಾರ ಸ್ವಾಮೀಜಿಗಳ ಆದರ್ಶಗಳು ಸಮಾಜಕ್ಕೆ ತೋರಿಸಬೇಕು. ಅವರು ಜೀವನವನ್ನೇ ತ್ಯಾಗಮಾಡಿದ್ದಾರೆ. ಇಂತಹ ಮಹಾನ್ ಸ್ವಾಮೀಜಿಗಳ ವಿಚಾರಧಾರೆಗಳು ಚರ್ಚೆಯಾಗಬೇಕು ಎಂದರು.
ಕೆಂಗೇರಿ ಮಠದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ, ಮರಳೇಗವಿ ಮಠದ ಮುಮ್ಮಡಿ ನಿರ್ವಾಣ ಸ್ವಾಮೀಜಿ, ಹಾಯೂರ್ ಆಶ್ರಮದ ಡಾ.ಸಂತೋಷ ಗುರೂಜಿ, ಸಚಿವ ರೇಣುಕಾಚಾರ್ಯ, ಚಲನಚಿತ್ರ ಅಕಾಡೆಮಿ ಅಧ್ಯಕ್ಷೆ ತಾರಾ ಮಾತನಾಡಿದರು.
ಅರಣ್ಯ ಸಚಿವ  ಸಿ.ಪಿ. ಯೋಗೀಶ್ವರ್, ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ಸರ್ವಮಂಗಳಾ ಕೃಷ್ಣಪ್ಪ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಮಂಜುಳಾ ಶಂಕರ್, ಜೆ. ನಾರಾಯಣಪ್ಪ, ಬ್ಯಾಗಡದೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಅಭಯ ಆಂಜನೇಯ ಸ್ವಾಮಿ ದೇವಾಲಯ ಟ್ರಸ್ಟ್‌ನ ಅಧ್ಯಕ್ಷ ಎನ್. ಶಂಕರ್, ಜಿಲ್ಲಾಧಿಕಾರಿ  ಎಂ.ಕೆ ಅಯ್ಯಪ್ಪ, ಹಾಪ್‌ಕಾಮ್ಸ ನಿರ್ದೇಶಕ ದೇವರಾಜು, ಜಿಲ್ಲಾ ಪಂಚಾಯ್ತಿಯ ಅಧ್ಯಕ್ಷ ಮರಿಯಪ್ಪ, ಕಿಯೋನಿಕ್ಸ್ ಅಧ್ಯಕ್ಷ ಯಂಗಾರೆಡ್ಡಿ ಮತ್ತಿತರರು ಇದ್ದರು. 


ನಿತ್ಯಾನಂದ ಪ್ರಕರಣ: ಸಿ.ಎಂ ಸಮರ್ಥನೆ
ಆನೇಕಲ್: ಬಿಡದಿಯ ನಿತ್ಯಾನಂದ ಸ್ವಾಮೀಜಿ ವಿರುದ್ಧ ತೆಗೆದುಕೊಂಡಿರುವ ನಿರ್ಧಾರ ಒಬ್ಬ ಮುಖ್ಯಮಂತ್ರಿಯಾಗಿ ರಾಜ್ಯದ ಜನತೆಯ ಹಿತದೃಷ್ಠಿಯಿಂದ ತೆಗೆದುಕೊಂಡ ನಿರ್ಧಾರವಾಗಿದೆ ಎಂದು ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಸಮರ್ಥಿಸಿಕೊಂಡರು.

ತಾಲ್ಲೂಕಿನ ದೊಡ್ಡಹಾಗಡೆ ಗ್ರಾಮದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ನಿತ್ಯಾನಂದ ಆಶ್ರಮದ ಬಗ್ಗೆ ಮಾಧ್ಯಮಗಳಲ್ಲಿ ಬಿತ್ತರವಾದ ಸುದ್ದಿ ಆಧರಿಸಿ ಆಶ್ರಮದಲ್ಲಿ ನಡೆಯುತ್ತಿರುವುದು ಏನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಕಲೆಹಾಕಲು ಸೂಚಿಸಲಾಗಿದೆ. ಅಲ್ಲಿ ವಂಚನೆ ನಡೆದಿದೆ ಎಂಬುದು ಖಚಿತವಾದ ಬಳಿಕ  ಸರ್ಕಾರ ಸೂಕ್ತ ಕ್ರಮಕ್ಕೆ ಮುಂದಾಗುತ್ತದೆ ಎಂದರು.

ಸರ್ಕಾರದ ನಿರ್ಧಾರದ ವಿರುದ್ಧ ನಿತ್ಯಾನಂದ ಹೈಕೋರ್ಟಿನಲ್ಲಿ ಪ್ರಶ್ನಿಸಿರುವುದರ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಮುಖ್ಯಮಂತ್ರಿಯಾಗಿ ನಾನು ಮಾಡಬೇಕಾದನ್ನು ಮಾಡಿದ್ದೇನೆ ಎಂದು ಅವರು ಹೇಳಿದರು.
ಪೇಜಾವರ ಶ್ರಿಗಳು ಮಾತನಾಡಿ, ಕಾವಿ ಧರಿಸಿ ಹೇಯ ಕೃತ್ಯಕ್ಕೆ ಮುಂದಾಗುವುದು ಸಾಮಾಜಿಕ ಮೌಲ್ಯಗಳಿಗೆ ಕಂಟಕ ಉಂಟು ಮಾಡಿದಂತೆ. ಇಂತಹ ಯಾವುದೇ ತಪ್ಪುಗಳನ್ನು ಯಾರೇ ಮಾಡಿದರೂ ಸಹ ಅದು ಮಹಾಪರಾಧ ಎಂದು ಅಭಿಪ್ರಾಯಪಟ್ಟರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.