ADVERTISEMENT

ಅಭಿವೃದ್ಧಿ ವೇಗದಲ್ಲಿ ಮರ ಬಲಿ

​ಪ್ರಜಾವಾಣಿ ವಾರ್ತೆ
Published 10 ಜೂನ್ 2017, 8:46 IST
Last Updated 10 ಜೂನ್ 2017, 8:46 IST
ದೊಡ್ಡಬಳ್ಳಾಪುರದ ಭಗತ್‌ಸಿಂಗ್‌ ಕ್ರೀಡಾಂಗಣದಲ್ಲಿ ಕರವೇ(ಕನ್ನಡಿಗರ ಬಣ) ವತಿಯಿಂದ ಬೆಳೆಸಲಾಗುತ್ತಿರುವ ಸಸಿಗಳಿಗೆ ನಗರದ ಹಾಗೂ ನಾಡಿನ ಗಣ್ಯರ ಹೆಸರನ್ನು ನಾಮಕರಣ ಮಾಡಲಾಯಿತು
ದೊಡ್ಡಬಳ್ಳಾಪುರದ ಭಗತ್‌ಸಿಂಗ್‌ ಕ್ರೀಡಾಂಗಣದಲ್ಲಿ ಕರವೇ(ಕನ್ನಡಿಗರ ಬಣ) ವತಿಯಿಂದ ಬೆಳೆಸಲಾಗುತ್ತಿರುವ ಸಸಿಗಳಿಗೆ ನಗರದ ಹಾಗೂ ನಾಡಿನ ಗಣ್ಯರ ಹೆಸರನ್ನು ನಾಮಕರಣ ಮಾಡಲಾಯಿತು   

ದೊಡ್ಡಬಳ್ಳಾಪುರ: ‘ಅಭಿವೃದ್ಧಿ ವೇಗದಲ್ಲಿ ನೂರಾರು ವರ್ಷಗಳಿಂದ ರಸ್ತೆ ಬದಿಯಲ್ಲಿದ್ದ ಬೃಹತ್‌ ಮರಗಳು ಬಲಿಯಾಗಿವೆ. ಇದರ ಪರಿಣಾಮವನ್ನು ನಾವಿಂದು ಅನುಭವಿಸುವಂತಾಗಿದೆ. ಇನ್ನಾದರು ಸಸಿಗಳನ್ನು ನೆಟ್ಟು ಪೋಷಣೆ ಮಾಡುವ ಕಡೆಗೆ ಪ್ರಥಮ ಆದ್ಯತೆ ನೀಡಬೇಕು’ ಎಂದು ಲಯನ್ಸ್‌ ಕ್ಲಬ್‌ ಅಧ್ಯಕ್ಷ ಡಾ.ಹುಲಿಕಲ್‌ ನಟರಾಜ್‌ ಹೇಳಿದರು.

ಅವರು ನಗರದ ಭಗತ್‌ಸಿಂಗ್‌ ಕ್ರೀಡಾಂಗಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಕನ್ನಡಿಗರ ಬಣ) ವತಿಯಿಂದ ಬೆಳೆಸಲಾಗುತ್ತಿರುವ ಸಸಿಗಳಿಗೆ ನಗರದ ಹಾಗೂ ನಾಡಿನ ಗಣ್ಯರ ಹೆಸರು ನಾಮಕರಣ ಮಾಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಗರದಲ್ಲಿಯೇ ಏಕೈಕ ಕ್ರೀಡಾಂಗಣವಾಗಿರುವ ಭಗತ್‌ಸಿಂಗ್‌ ಕ್ರೀಡಾಂಗಣದಲ್ಲಿ ಸಸಿಗಳನ್ನು ಬೆಳೆಸಲು ಸಾಕಷ್ಟು ಅವಕಾಶವಿದೆ. ಆದರೂ, ಅರಣ್ಯ ಇಲಾಖೆ ಸೇರಿದಂತೆ ಯಾವುದೇ ಸಂಘ, ಸಂಸ್ಥೆಗಳು ಮುಂದಾಗಿರಲಿಲ್ಲ. ಕರವೇ(ಕನ್ನಡಿಗರ ಬಣ) ಸಸಿಗಳನ್ನು ನೆಟ್ಟು ಅವುಗಳಿಗೆ ಸೂಕ್ತ ರಕ್ಷಣೆ, ಪೋಷಣೆ ನೀಡಿ ಬೆಳೆಸುತ್ತಿರುವುದು ಶ್ಲಾಘನೀಯ ಎಂದರು.

ADVERTISEMENT

ಪ್ರತಿ ಸಸಿಗೆ ಗಣ್ಯರ ಹೆಸರು ನಾಮಕರಣಗೊಳಿಸಿ ಸದಾ ಅವರನ್ನು ಸ್ಮರಿಸುವಂತೆ ಮಾಡಿರುವುದು ಅಭಿನಂದನೀಯ. ಇದರಿಂದ ಮುಂದಿನ ದಿನಗಳಲ್ಲಿ ಭಗತ್‌ಸಿಂಗ್ ಕ್ರೀಡಾಂಗಣ ಹಸಿರೀಕರಣವಾಗಲಿದೆ. ಬೆಳಿಗ್ಗೆ ಹಾಗೂ ಸಂಜೆ ವೇಳೆ  ವಾಯು ವಿಹಾರ ಮಾಡುವವರಿಗೆ ಹಾಗೂ ಕ್ರೀಡಾಪಟುಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ಮೇಜರ್‌ ಎಸ್‌.ಮಹಾಬಲೇಶ್ವರ್‌, ನಿವೃತ್ತ ಶಿಕ್ಷಕ ಬಿ.ಎಲ್‌.ರಾಮಕೃಷ್ಣ, ನಿವೃತ್ತ ಉಪನ್ಯಾಸಕ ಟಿ.ಕೆ.ನಾಗರಾಜ್‌, ಪಿಎಲ್‌ಡಿ ಬ್ಯಾಂಕ್‌ ಉಪಾಧ್ಯಕ್ಷ ಪುಟ್ಟಬಸವರಾಜು, ಕರವೇ (ಕನ್ನಡಿಗರ ಬಣ) ರಾಜ್ಯ ಅಧ್ಯಕ್ಷ ಬಿ.ಎಸ್‌.ಚಂದ್ರಶೇಖರ್‌, ಮುಖಂಡರಾದ ಚೇತನ್‌ಗೌಡ, ಪದ್ಮನಾಭ್‌, ನಾಗೇಶ್‌, ಆರಾಧ್ಯ, ಮಂಜುನಾಥ್‌, ನಾರಾಯಣಸ್ವಾಮಿ, ವೇಣುಗೋಪಾಲ್‌, ಚಂದ್ರು ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.