ADVERTISEMENT

ಅರಳುಮಲ್ಲಿಗೆ ಕೆರೆ ಅಂಗಳದಲ್ಲಿ ಪಕ್ಷಿಗಳ ಕಲರವ: ಕಣ್ಣಿಗೆ ಹಬ್ಬ

​ಪ್ರಜಾವಾಣಿ ವಾರ್ತೆ
Published 19 ಜೂನ್ 2018, 16:54 IST
Last Updated 19 ಜೂನ್ 2018, 16:54 IST
ಅರಳುಮಲ್ಲಿಗೆ ಕೆರೆ ಅಂಗಳದಲ್ಲಿ ಪಕ್ಷಿಗಳ ಕಲರವ: ಕಣ್ಣಿಗೆ ಹಬ್ಬ
ಅರಳುಮಲ್ಲಿಗೆ ಕೆರೆ ಅಂಗಳದಲ್ಲಿ ಪಕ್ಷಿಗಳ ಕಲರವ: ಕಣ್ಣಿಗೆ ಹಬ್ಬ   

ದೊಡ್ಡಬಳ್ಳಾಪುರ: ನಗರದ ಅಂಚಿನಲ್ಲೇ ಇರುವ ಅರಳು ಮಲ್ಲಿಗೆ ಕೆರೆಯ ಅಂಗಳದಲ್ಲಿ ವಿವಿಧ ಜಾತಿಯ ಪಕ್ಷಿಗಳ ಕಲರವದಿಂದ ಪಕ್ಷಿಪ್ರಿಯರ ಕಣ್ಣಿಗೆ ಹಬ್ಬವನ್ನು ಉಂಟುಮಾಡಿದರೆ, ಅವುಗಳ ಕೂಗು ಮನಸ್ಸಿಗೆ ಉಲ್ಲಾಸ ಉಂಟು ಮಾಡುತ್ತಿದೆ.

ಈ ಕೆರೆಯ ಅಂಗಳದಲ್ಲಿ ಅರಣ್ಯ ಇಲಾಖೆಯ ವತಿಯಿಂದ ಬಿದಿರು, ಹೊಂಗೆ, ಜಾಲಿ ಸೇರಿದಂತೆ ವಿವಿಧ ಜಾತಿಯ ಸಸಿಗಳನ್ನು 15 ವರ್ಷಗಳ ಹಿಂದೆ ನಾಟಿ ಮಾಡಲಾಗಿತ್ತು. ಈಗ ಆ ಸಸಿಗಳು ಇಂದು ಬೆಳೆದು ನಿಂತಿದೆ. ಇಡೀ ಕೆರೆಯೂ ದಟ್ಟವಾದ ಕಾಡಿನಂತಾಗಿದೆ.

ವಾರದಿಂದ ಸುರಿಯುತ್ತಿರುವ ಮಳೆಯಿಂದ ಕೆರೆಯ ಗುಂಡಿಗಳಲ್ಲಿ ಮಳೆ ನೀರು ನಿಂತಿದ್ದು, ಪ್ರಾಣಿ ಪಕ್ಷಗಳ ದಣಿವು ನೀಗಿಸುವುದರ ಜೊತೆಗೆ ನೀರಿನಲ್ಲಿ ಆಟವಾಡುವುದಕ್ಕೂ ಉತ್ತಮ ಪ್ರದೇಶ ಸೃಷ್ಟಿಯಾದಂತಿದೆ.

ADVERTISEMENT

ಮೂರು ವಾರಗಳಿಂದ ಒಂದಿಷ್ಟು ಮಳೆ, ಒಂದಿಷ್ಟು ಬಿಸಿಲು, ಮೋಡ ಮುಸಿಕಿದ ವಾತಾವರಣ ಇರುವುದರಿಂದ ನವಿಲುಗಳು ಮುಂಜಾನೆ ಮತ್ತು ಸಂಜೆ ವೇಳೆಯ ಎಳೆಬಿಸಿಲು ಹುಡುಕಿಕೊಂಡು ಕೆರೆ ಅಂಚಿನ ಮರಗಳು, ಕಲ್ಲುಗಳ ಮೇಲೆ ಬಂದು ಕೂರುತ್ತವೆ. ಅದರಲ್ಲೂ ಮುಂಜಾವಿನ ವೇಳೆ ಗರಿಬಿಚ್ಚಿ ನರ್ತಿಸುವ ನವಿಲಿನ ದೃಶ್ಯವನ್ನು ಕಂಡವರು ಪುಣ್ಯವಂತರೇ ಸರಿ ಎನ್ನುತ್ತಾರೆ ಪಕ್ಷಿಗಳ ಛಾಯಾಚಿತ್ರ ಗ್ರಾಹಕ ದೊಡ್ಡಬಳ್ಳಾಪುರದ ಹರೀಶ್‌ ಧ್ರುವ.

ಕೈಗಾರಿಕಾ ವಲಯದ ರಿಟ್ಟಲ್‌ ಕೈಗಾರಿಕೆಯಲ್ಲಿ ಉದ್ಯೋಗಿಯಾಗಿರುವ ಹರೀಶ್‌ ಧ್ರುವ ಅವರು ಸುಮಾರು ಮೂರು ವರ್ಷಗಳಿಂದ ವಿವಿಧ ಋತುಮಾನಗಳಲ್ಲಿ, ವಿವಿಧ ಸಮಯದಲ್ಲಿ ಅರಳುಮಲ್ಲಿಗೆ ಕೆರೆ ಅಂಗಳದ ದಟ್ಟ ಕಾಡಿನಲ್ಲಿ ತಿರುಗಾಡಿ ಹತ್ತಾರು ಬೆಗೆಯ ಪಕ್ಷಗಳುನ್ನು ವಿವಿಧ ಭಂಗಿಯಲ್ಲಿ
ಸೆರೆಹಿಡಿದಿದ್ದಾರೆ.

‘ಪಕ್ಷಿಗಳನ್ನು ನೋಡಲು, ಪೋಟೋಗಳನ್ನು ತೆಗೆಯಲು ದೂರದ ಕಾಡುಗಳಿಗೆ ಹೋಗುವುದಕ್ಕಿಂತ ನಮ್ಮೂರಿನ ಅಂಚಿನಲ್ಲೇ ಇರುವ ಕೆರೆಯ ಬದಿಗಳಲ್ಲಿ ಒಂದಿಷ್ಟು ತಾಳ್ಮೆಯಿಂದ ಕಾದು ಕುಳಿತರೆ ನವಿಲುಗಳ ನರ್ತನ, ಮನಸ್ಸಿಗೆ ಉಲ್ಲಾಸವನ್ನು ಉಂಟು ಮಾಡುವ ಇಂಪಾದ ಕೂಗು, ಕೊಕ್ಕರೆಗಳ ಬೆಳ್ಳಕ್ಕಿ ಸಾಲುಗಳನ್ನು ನೋಡಿ ಕಣ್ತುಂಬಿಸಿಕೊಳ್ಳಬಹುದು’ ಎನ್ನುತ್ತಾರೆ.

ಇದಲ್ಲದೆ ಕೆರೆ ಅಂಚಿನ ಉದ್ದಕ್ಕೂ ತೋಟಗಳು ಇರುವುದರಿಂದ ಆಹಾರ ಹುಡುಕಿಕೊಂಡು ರೈತರ ತೋಟಗಳಿಗೆ ಬರುವ ನವಿಲುಗಳನ್ನು ಅವುಗಳ ಸಹಜ ವಾತಾವರಣದಲ್ಲೂ ನೋಡುವ ಅವಕಾಶಗಳು ಇವೆ ಎನ್ನುತ್ತಾರೆ.

ನಡುಗಡ್ಡೆ ನಿರ್ಮಾಣ ಅಗತ್ಯ

ಅರಳುಮಲ್ಲಿಗೆ ಕೆರೆ ಅಂಚಿನಲ್ಲಿ ನಾನಾ ರೀತಿಯ ಮರಗಳನ್ನು ಬೆಳೆಸಲಾಗಿದೆ. ಕೆರೆಯಲ್ಲಿ ಮರಗಳನ್ನು ಕಡಿಯದಂತೆ, ಬೇಟೆ ನಡೆಯದಂತೆ ನಿಗಾವಹಿಸಲಾಗಿದೆ. ಇದರಿಂದ ಇಡೀ ಕೆರೆ 15 ವರ್ಷಗಳಲ್ಲಿ ಕಾಡಿನಂತೆ ಹಚ್ಚ ಹಸಿರಾಗಿ ಕಾಣುತ್ತಿದೆ. ಕೆರೆಯಲ್ಲಿ ನಡುಗಡ್ಡೆಗಳನ್ನು ನಿರ್ಮಿಸಿ ಮತ್ತಷ್ಟು ಅಭಿವೃದ್ದಿಗೊಳಿಸಿದರೆ ಪಕ್ಷಿಗಳ ಸುರಕ್ಷತೆಗೆ, ಸಂತಾಭಿವೃದ್ಧಿಗೆ ಅನುಕೂಲವಾಗಲಿದೆ ಎಂದು ದೊಡ್ಡಬಳ್ಳಾಪುರ ಉಪವಲಯ ಅರಣ್ಯ ಸಂರಕ್ಷಣಾಧಿಕಾರಿಬಿ.ಎಸ್‌ ರಾಜಶೇಖರ್‌ ತಿಳಿಸಿದರು.

–ನಟರಾಜ ನಾಗಸಂದ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.