ADVERTISEMENT

ಆನೇಕಲ್ ಪಟ್ಟಣ ಪುರಸಭೆ : ಉಪಾಧ್ಯಕ್ಷರಾಗಿ ಬಿ.ಪಿ.ಮರಿಯಪ್ಪ ಆಯ್ಕೆ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2012, 5:10 IST
Last Updated 23 ಆಗಸ್ಟ್ 2012, 5:10 IST

ಆನೇಕಲ್: ಪಟ್ಟಣದ ಪುರಸಭೆಯ ಉಪಾಧ್ಯಕ್ಷರಾಗಿ ಬಿಜೆಪಿಯ ಬಿ.ಪಿ.ಮರಿಯಪ್ಪ ಅವಿರೋಧ ಆಯ್ಕೆಯಾಗಿದ್ದಾರೆ.
ಪುರಸಭಾ ಉಪಾಧ್ಯಕ್ಷರಾಗಿದ್ದ ಶ್ರೀನಿವಾಸ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಬುಧವಾರ ಚುನಾವಣೆ ನಿಗದಿಯಾಗಿತ್ತು. ಬಿ.ಪಿ.ಮರಿಯಪ್ಪ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆಯಾದರು. ತಹಶೀಲ್ದಾರ್ ಎಚ್.ಎನ್.ಶಿವೇಗೌಡ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.

ಆಯ್ಕೆ ನಂತರ ಮಾತನಾಡಿದ ನೂತನ ಉಪಾಧ್ಯಕ್ಷ ಬಿ.ಪಿ.ಮರಿಯಪ್ಪ, ಪಟ್ಟಣದ ನೀರಿನ ಸಮಸ್ಯೆ ನಿವಾರಣೆಗೆ ಶ್ರಮಿಸುವುದಾಗಿ ತಿಳಿಸಿದರು. ಈ ನಿಟ್ಟಿನಲ್ಲಿ ಸಚಿವರ ಮಾರ್ಗದರ್ಶನ ಪಡೆದು ಹೆಚ್ಚಿನ ಅನುದಾನ ಬಿಡುಗಡೆಗೆ ಮನವಿ ಸಲ್ಲಿಸಲಾಗುವುದು. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು ಎಂದರು.

ನೂತನ ಉಪಾಧ್ಯಕ್ಷರನ್ನು ಸಮಾಜ ಕಲ್ಯಾಣ ಸಚಿವ ಎ.ನಾರಾಯಣ ಸ್ವಾಮಿ, ಕಿಯೋನಿಕ್ಸ್ ಅಧ್ಯಕ್ಷ ಯಂಗಾರೆಡ್ಡಿ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಎನ್.ಬಸವರಾಜು, ಅಧ್ಯಕ್ಷೆ ಉಮಾಗೋಪಿ, ಬಿ.ನಾಗರಾಜು, ಕೆ.ನಾಗರಾಜು, ಎ.ಉದಯ್ ಕುಮಾರ್, ಶ್ರೀನಿವಾಸ್, ಸಿ.ಮುನಿರಾಜು, ಡಿ.ವೆಂಕಟೇಶ್, ಪಿ.ರಾಜು, ಡಿ.ವಿ.ಮುರುಳಿ,  ಶಿವರಾಮ್ ಇತರರು ಅಭಿನಂದಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.