ADVERTISEMENT

‘ಕರಗ ಸಾಂಸ್ಕೃತಿಕ ವೈಭವ ಹೆಚ್ಚಾಗಲಿ’

ತಾಲ್ಲೂಕು ತಿಗಳ ಸಂಘ ಆಡಳಿತ ಕಚೇರಿ ಉದ್ಘಾಟನೆ, ಗಣ್ಯರಿಗೆ ಅಭಿನಂದನೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2018, 5:29 IST
Last Updated 19 ಜೂನ್ 2018, 5:29 IST
ತಿಗಳರ ಸಂಘದ ಕಚೇರಿಗೆ ನಿವೇಶನ ನೀಡಿದ ಸೌದೆ ಮಂಡಿ ಮುನಿಶಾಮಪ್ಪರನ್ನು ತಾಲ್ಲೂಕು ತಿಗಳರ ಸಂಘದ ವತಿಯಿಂದ ಸನ್ಮಾನಿಸಲಾಯಿತು
ತಿಗಳರ ಸಂಘದ ಕಚೇರಿಗೆ ನಿವೇಶನ ನೀಡಿದ ಸೌದೆ ಮಂಡಿ ಮುನಿಶಾಮಪ್ಪರನ್ನು ತಾಲ್ಲೂಕು ತಿಗಳರ ಸಂಘದ ವತಿಯಿಂದ ಸನ್ಮಾನಿಸಲಾಯಿತು   

ದೇವನಹಳ್ಳಿ: ರಾಜ್ಯದಲ್ಲಿ 136 ಕಡೆ ವಾರ್ಷಿಕ ಕರಗ ಮಹೋತ್ಸವ ನಡೆಯುತ್ತಿದ್ದು ಇದರ ಸಾಂಸ್ಕೃತಿಕ ವೈಭವದ ಪರಂಪರೆ ಮತ್ತಷ್ಟು ಹೆಚ್ಚಾಗಬೇಕು ಎಂದು ಕರ್ನಾಟಕ ರಾಜ್ಯ ತಿಗಳ ಕ್ಷತ್ರಿಯ ಮಹಾಸಭಾದ ಅಧ್ಯಕ್ಷ ಎಚ್.ಸುಬ್ಬಣ್ಣ ತಿಳಿಸಿದರು.

ಇಲ್ಲಿನ ಪುಟ್ಟಪ್ಪನ ಗುಡಿ ಬೀದಿಯಲ್ಲಿ ಸೋಮವಾರ ತಾಲ್ಲೂಕು ತಿಗಳ ಸಂಘ ಆಡಳಿತ ಕಚೇರಿ ಉದ್ಘಾಟನೆ ಮತ್ತು ಗಣ್ಯರಿಗೆ ನಡೆದ ಅಭಿನಂದನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಿಗಳ ಸಮುದಾಯ ಶೈಕ್ಷಣಿಕವಾಗಿ ಪ್ರಗತಿಯಾಗುತ್ತಿದೆ. ರಾಜಕೀಯವಾಗಿ ಪ್ರಬಲ ಶಕ್ತಿಯಾಗಿ ಬೆಳೆದಿಲ್ಲ. ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕೇವಲ ಒಂಬತ್ತು ಸದಸ್ಯರು ಆಯ್ಕೆಗೊಂಡಿದ್ದಾರೆ. ವಿಧಾನ ಪರಿಷತ್ತಿನಲ್ಲಿ ಏಕೈಕ ಸದಸ್ಯರಿದ್ದಾರೆ. ಈತನಕ ಯಾರೂ ಶಾಸಕರಾಗಿ ಆಯ್ಕೆಯಾಗಿಲ್ಲ ಎಂದರು.

ADVERTISEMENT

ಸಮುದಾಯ ಕಷ್ಟಪಟ್ಟು ದುಡಿಮೆ ಮಾಡುವ ಕಾಯಕ ಮಾಡುತ್ತಿದೆಯೇ ಹೊರತು ಅಡ್ಡದಾರಿಯಿಂದ ಅಲ್ಲ. ಈ ಹಿಂದಿನ ಸಂಕಷ್ಟ ಮುಂದಿನ ತಲೆ ಮಾರಿಗೆ ಬರಬಾರದು; ಒಗ್ಗಟ್ಟಿದ್ದರೆ ಮಾತ್ರ ಸಮುದಾಯ ಪ್ರಗತಿ ಸಾಧ್ಯ ಎಂದರು.

ನೂತನ ಕಚೇರಿ ಸದುಪಯೋಗವಾಗಬೇಕು. ಕರಗದ ಮಹತ್ವದ ಬಗ್ಗೆ ಮಕ್ಕಳಿಗೆ ತಿಳಿಸಬೇಕು. ಬೆಂಗಳೂರಿನ ಯಲಹಂಕದಲ್ಲಿ ಬಿಬಿಎಂಪಿ ವತಿಯಿಂದ ₹75 ಲಕ್ಷ ವೆಚ್ಚದಲ್ಲಿ ಕರಗದ ಮಂಟಪ ನಿರ್ಮಾಣವಾಗಿದೆ. ಅದೇ ರೀತಿ ಈ ಕರಗದ ಕಣದಲ್ಲಿ ನಿರ್ಮಾಣ ಮಾಡಲು ಶಾಸಕರು ಸಹಕರಿಸಬೇಕು ಎಂದರು.

ಬಿಬಿಎಂಪಿ ಸದಸ್ಯ ಗುಣಶೇಖರ್ ಮತ್ತು ಕರ್ನಾಟಕ ರಾಜ್ಯ ತಿಗಳರ (ವಹ್ನಿಕುಲ ಕ್ಷತ್ರಿಯ) ಸಂಘದ ರಾಜ್ಯ ಘಟಕ ಅಧ್ಯಕ್ಷ ಸಿ.ಜಯರಾಜ್ ಮಾತನಾಡಿ, ತಾಲ್ಲೂಕಿನಲ್ಲಿ ತಿಗಳ ಸಂಘ ವಿವಿಧ ರೀತಿಯ ಕಾರ್ಯ ಚಟುವಟಿಕೆ ನಡೆಸಿ ಮಾದರಿಯಾಗಿದೆ ಎಂದರು.

ಬಡ ಕುಟುಂಬಗಳಿಗೆ ಸ್ಪಂದಿಸುತ್ತಿದೆ. 2014ರಲ್ಲಿ ನಡೆದ ಸಮುದಾಯದ ರಾಜ್ಯ ಮಟ್ಟದ ಸಮ್ಮೇಳನಕ್ಕೆ ತಾಲ್ಲೂಕಿನಲ್ಲಿರುವ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೆ ಸಹಕರಿಸಿದೆ ಎಂದರು.

ಶಾಸಕರ ಐದು ವರ್ಷದ ಆಡಳಿತದಲ್ಲಿ ಕರಗದ ಮಂಟಪ ನಿರ್ಮಾಣ ಮಾಡಿಕೊಡುತ್ತಾರೆ ಎಂಬ ಭರವಸೆಯಲ್ಲಿದ್ದೇವೆ. ಸಮುದಾಯಕ್ಕೆ ಸ್ಪಂದಿಸಿದರೆ ನಾವು ಸಹ ಸಹಕರಿಸುತ್ತೇವೆ ಎಂದರು.

ಶಾಸಕ ನಿಸರ್ಗ ನಾರಾಯಣ ಸ್ವಾಮಿ ಮಾತನಾಡಿ, ‘ದೇಹದಲ್ಲಿ ಉಸಿರು ಇರುವತನಕ ತಿಗಳ ಸಮುದಾಯಕ್ಕೆ ಸಹಕರಿಸುವೆ. ಸರ್ಕಾರದ ಪ್ರೋತ್ಸಾಹ ಧನದ ಜತೆಗೆ ವೈಯಕ್ತಿಕ ಕಾಳಜಿ ವಹಿಸಲಿದ್ದೇನೆ. ಕ್ಷೇತ್ರದಲ್ಲಿ ನೂರಕ್ಕೆ ನೂರು ಅಭಿವೃದ್ಧಿಯಾಗದಿದ್ದರೂ ಶೇ 90 ರಷ್ಟು ಶಕ್ತಿ ಮೀರಿ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.

ಶಿವಗಂಗೆ ಮಠ ಜ್ಞಾನಾನಂದಪುರಿ ಸ್ವಾಮಿ, ಬುಳ್ಳಹಳ್ಳಿ ಆದಿಪರಾಶಕ್ತಿಮಹಾ ಸಂಸ್ಥಾನ ಶ್ರೀ ಸಾಯಿ ಮಂಜುನಾಥ್ ಮಹಾರಾಜ್, ಶ್ರೀ ಸಾನಿಧ್ಯ ವಹಿಸಿದ್ದರು.

ಸಂಘ ರಾಜ್ಯ ಘಟಕ ಉಪಾಧ್ಯಕ್ಷ ವಿ.ರಾಮಚಂದ್ರಪ್ಪ, ನಿರ್ದೇಶಕ ಎಸ್.ಸಿ. ಚಂದ್ರಪ್ಪ, ತಾಲ್ಲೂಕು ಸಂಘದ ಗೌರವಾಧ್ಯಕ್ಷ ಕೇಶವಪ್ಪ, ಅಧ್ಯಕ್ಷ ವಿ. ಗೋಪಾಲಕೃಷ್ಣ, ಉಪಾಧ್ಯಕ್ಷ ಶ್ರೀರಾಮ್, ಪ್ರಧಾನ ಕಾರ್ಯದರ್ಶಿ ನಾರಾಯಣಸ್ವಾಮಿ, ಸಂಚಾಲಕ ಜೆ.ಆರ್. ಮುನಿವೀರಣ್ಣ, ಮೌಕ್ತಿಕಾಂಭ ವಹ್ನಿಕುಲ ತಿಗಳರ ಸಂಘ ಗೌರವಾಧ್ಯಕ್ಷ ಚನ್ನರಾಯಪ್ಪ, ಅಧ್ಯಕ್ಷ ಎಸ್.ಆರ್. ವಿಜಯಕುಮಾರ್, ಉಪಾಧ್ಯಕ್ಷ ರಾಮಚಂದ್ರಪ್ಪ, ಕಾರ್ಯದರ್ಶಿ ಕೃಷ್ಣಪ್ಪ, ಪುರಸಭೆ ಸದಸ್ಯ ಶಶಿಕುಮಾರ್, ವಿ.ಗೋಪಾಲ್, ಬೇಕರಿ ಮಂಜುನಾಥ್, ರವೀಂದ್ರ, ಎಂ.ಕುಮಾರ್ ಇದ್ದರು.

ಸಂಘದ ಕಚೇರಿಗೆ ನಿವೇಶನ ನೀಡಿದ ಸೌದೆ ಮಂಡಿ ಮುನಿಶಾಮಪ್ಪರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.