ADVERTISEMENT

ಕಾರ್ಖಾನೆ ಬಾಯ್ಲರ್ ಸ್ಫೋಟ: ಒಬ್ಬನ ಸಾವು, ಹಲವರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2011, 19:30 IST
Last Updated 1 ಅಕ್ಟೋಬರ್ 2011, 19:30 IST

ಆನೇಕಲ್: ತಾಲ್ಲೂಕಿನ ಜಿಗಣಿ ಕೈಗಾರಿಕಾ ಪ್ರದೇಶದ ಔಷಧಿ ಕಾರ್ಖಾನೆಯೊಂದರಲ್ಲಿ ಬಾಯ್ಲರ್ ಸಿಡಿದು ಒಬ್ಬರು ಮೃತಪಟ್ಟು ಇಬ್ಬರು ಗಾಯಗೊಂಡಿರುವ ಘಟನೆ ಶನಿವಾರ ನಡೆದಿದೆ.

ಜಿಗಣಿ ಕೈಗಾರಿಕಾ ಪ್ರದೇಶದ ವಿದ್ಯಾ ಹರ್ಬ್ಸ್ ಕಾರ್ಖಾನೆಯಲ್ಲಿ ಘಟನೆ ಸಂಭವಿಸಿದೆ. ಮೃತಪಟ್ಟವರನ್ನು ಹಾನಗಲ್ ತಾಲ್ಲೂಕಿನ ಬೊಮ್ಮಲಿಂಗನಹಳ್ಳಿಯ ರಘು ಎಂದು ಗುರುತಿಸಲಾಗಿದೆ. ಗಾಯಾಳುಗಳಾದ ಅಸ್ಸಾಂ ರಾಜ್ಯದ ತುಫಾನ್ ಹಾಗೂ ಹಾವೇರಿ ಜಿಲೆಯ್ಲ ಕುಬೇರ್‌ನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ.

ಕಾರ್ಖಾನೆಯ ಬಾಯ್ಲರ್ ವಿಭಾಘದಲ್ಲಿ ಅಳವಡಿಸಲಾಗಿದ್ದ ವ್ಯಾಕ್ಯೂಮ್ ಸಿಲಿಂಡರ್ ಸಿಡಿದಿದ್ದು, ಇದರಿಂದ ಉಂಟಾದ ರಭಸಕ್ಕೆ ಛಿದ್ರಗೊಂಡು ಗೋಡೆ ಕುಸಿದಿದೆ ಹಾಗೂ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಹತ್ತಿಕೊಂಡು ಕಾರ್ಖಾನೆಯ ರಾಸಾಯನಿಕ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಗೋಡೆಯ ಮತ್ತೊಂದು ಬದಿಯಲ್ಲಿ ಕೆಲಸ ಮಾಡುತ್ತಿದ್ದ ಮೂವರು ಕಾರ್ಮಿಕರ ಮೇಲೆ ಗೋಡೆ ಬಿದ್ದು ಕಾರ್ಮಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಯಿತು. ತೀವ್ರ ಗಾಯಗೊಂಡಿದ್ದ ರಘು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ಘಟನೆ ಸಂಭವಿಸಿದಾಗ ಬೆಳಗಿನ ವೇಳೆಯಾದ್ದರಿಂದ ಹೆಚ್ಚು ಕಾರ್ಮಿಕರು ಇನ್ನೂ ಬಂದಿರಲಿಲ್ಲ ಹಾಗಾಗಿ ಹೆಚ್ಚಿನ ಅನಾಹುತ ತಪ್ಪಿದೆ. ಕಾರ್ಖಾನೆ ಮಾಲೀಕರ ವಿರುದ್ಧ ನಿರ್ಲಕ್ಷ್ಯದ ದೂರು ದಾಖಲಿಸಿರುವುದಾಗಿ ಬನ್ನೇರುಘಟ್ಟ ಪಿಎಸೈ ವಿಶ್ವನಾಥ್ ತಿಳಿಸಿದ್ದಾರೆ.

ಸ್ಥಳಕ್ಕೆ ಬಂದ ಅಗ್ನಿ ಶಾಮಕ ದಳ ಕಾರ್ಯಾಚರಣೆ ನಡೆಸಿ ಹೆಚ್ಚಿನ ಅನಾಹುತ ತಪ್ಪಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅಗ್ನಿ ಶಾಮಕ ದಳದ ಅಧಿಕಾರಿ ಜಿ.ಎಚ್.ರವಿಶಂಕರ್, ಕಾರ್ಖಾನೆಯಲ್ಲಿ ಸುರಕ್ಷತೆ ಕ್ರಮಗಳನ್ನು ಪಾಲಿಸಿಲ್ಲ ಎಂದು ತಿಳಿಸಿದರು. ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ತನಿಖೆ ಕೈಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.