ದೇವನಹಳ್ಳಿ: ‘ಸಮಾನತೆಯ ಹರಿಕಾರ ಜಗ-ಜ್ಯೋತಿ ಬಸವೇಶ್ವರರ ಕನಸು ನನಸಾಗಿಸುವ ನಿಟ್ಟಿನಲ್ಲಿ ಆರೋಗ್ಯಪೂರ್ಣ ಸಮಾಜದ ನಿರ್ಮಾಣಕ್ಕಾಗಿ ಜಲ ಸಂರಕ್ಷಣೆ ಇಂದಿನ ಅನಿವಾರ್ಯವಾಗಿದೆ’ ಎಂದು ತಾಲ್ಲೂಕು ಪಂಚಾಯ್ತಿ ಸದಸ್ಯ ಬಿ.ಕೆ.ಶಿವಪ್ಪ ಅಭಿಪ್ರಾಯಪಟ್ಟರು.
ದೇವನಹಳ್ಳಿ ಮಹಿಳಾ ಗ್ರಾಮೀಣ ವಿದ್ಯಾಭಿವೃದ್ಧಿ ಸಂಸ್ಥೆ ಕಚೇರಿ ಅವರಣದಲ್ಲಿ ಶುಕ್ರವಾರ ಬಸವ ಜಯಂತಿ ಪ್ರಯುಕ್ತ ತಾಲ್ಲೂಕು ಅಭಿವೃದ್ಧಿ ಸಮಿತಿ ಹಾಗೂ ಮಹಿಳಾ ಗ್ರಾಮೀಣ ವಿದ್ಯಾಭಿವೃದ್ಧಿ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಜಲ ಸಂರಕ್ಷಣಾ ಆಂದೋಲನ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಬಸವಣ್ಣ ಕನಸು ಕಂಡ ಸಮೃದ್ಧಪೂರ್ಣ ಸಮಾಜದ ನಿರ್ಮಾಣಕ್ಕೆ ಪ್ರಕೃತಿಯ ಸಂಪತ್ತಿನ ರಕ್ಷಣೆ ಇಂದು ಅವಶ್ಯಕವಾಗಿದೆ. ಬಯಲು ಸೀಮೆಯ ತಾಲ್ಲೂಕು ಎಂಬ ಹಣೆಪಟ್ಟಿಗೆ ಒಳಗಾಗಿ ಬರದಿಂದ ಬಳಲುತ್ತಿರುವ ದೇವನಹಳ್ಳಿಯಲ್ಲಿ ಜಲ ಸಂರಕ್ಷಣೆಗೆ ಇಂದಿನಿಂದ ಎಲ್ಲರೂ ಪಣತೊಡಬೇಕಾಗಿದೆ’ ಎಂದು ಅವರು ಹೇಳಿದರು.
‘ತಾಲ್ಲೂಕಿಗೆ ಬರ ಎಂಬುದು ಶಾಶ್ವತವಾಗಿ ಅಂಟಿರುವ ಶಾಪವಾಗಿದೆ. ವರ್ಷವೂ ಇದು ಮುಂದುವರೆಯುತ್ತಲೇ ಇದೆ. ಮಾನವನ ದುರಾಸೆಗೆ ನೀರು, ಮರಳು ಮಣ್ಣು, ಕಲ್ಲು ಸೇರಿದಂತೆ ಪ್ರಕೃತಿಯ ಎಲ್ಲ ಅಮೂಲ್ಯ ಸಂಪತ್ತುಗಳೂ ಕರಗುತ್ತಿವೆ. ಅಂರ್ತಜಲ ಪಾತಾಳಕ್ಕೆ ಇಳಿದಿದೆ. ಈ ದಿಸೆಯಲ್ಲಿ ಜಲಮೂಲಗಳನ್ನು ಉಳಿಸುವ ನಿಟ್ಟಿನಲ್ಲಿ ಕೆರೆ, ಕಾಲುವೆಗಳ ಸಂರಕ್ಷಣೆಯಾಗಬೇಕಿದೆ. ತಾಲ್ಲೂಕಿನ ಎಲ್ಲ ರಾಜಕಾಲುವೆಗಳ ದುರಸ್ತಿ, ಅವುಗಳ ಒತ್ತುವರಿ ತೆರವು, ನೀರಿನ ಮಿತ ಬಳಕೆ, ಮಳೆನೀರು ಸಂಗ್ರಹಣೆಯ ಕುರಿತು ಅರಿವು ಮೂಡಿಸುವುದಕ್ಕಾಗಿ ಈ ದಿನದಂದು ಸಂಕಲ್ಪ ಮಾಡಲಾಗುತ್ತಿದೆ. ಇದು ನಮ್ಮ ಜೀವ ಸಂಕುಲಗಳ ಉಳಿವಿಗಾಗಿ ಒಂದು ಕಿರು ಪ್ರಯತ್ನ. ಈ ಪ್ರಯತ್ನಕ್ಕೆ ಎಲ್ಲರೂ ಕೈಜೋಡಿಸಬೇಕು’ ಎಂದು ಅವರು ಮನವಿ ಮಾಡಿದರು.
ಎಂ.ಪಿ.ಸಿ.ಎಸ್ ಅಧ್ಯಕ್ಷ ಶಿವರಾಮಯ್ಯ ಮಾತನಾಡಿ, ‘ಬಸವಣ್ಣನ ಚಿಂತನೆಯ ಜೊತೆಗೆ ಪ್ರತಿಯೊಂದು ಗ್ರಾಮ,ಬಡಾವಣೆಗಳಲ್ಲಿ ನೀರು ಮರು ಬಳಕೆಗೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಪ್ರತಿಪಾದಿಸಿದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕಾರಹಳ್ಳಿ ಶ್ರೀನಿವಾಸ್ ಮಾತನಾಡಿ, ‘ತಾಲ್ಲೂಕಿನಲ್ಲಿ ಮುಚ್ಚಿಹೋಗಿರುವ ಕೆರೆಗಳ ಹೂಳೆತ್ತುವ ಮೂಲಕ ಅವುಗಳನ್ನು ಸ್ವಚ್ಛಗೊಳಿಸ ಬೇಕಿದೆ. ಜೀವಜಲಕ್ಕೆ ಪರಿತಪಿಸುವ ದಿನಗಳನ್ನು ದೂರಾಗಿಸಬೇಕಿದೆ’ ಎಂದರು.
ತಾಲ್ಲೂಕು ಸೇವಾದಲ ಅಧ್ಯಕ್ಷ ಲಕ್ಷ್ಮೀನಾರಾಯಣ, ಮಹಿಳಾ ಗ್ರಾಮೀಣ ವಿದ್ಯಾಭಿವೃದ್ಧಿ ಸಂಘದ ಅಧ್ಯಕ್ಷೆ ಸೂರ್ಯಕಲಾ, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಮುನಿಶಾಮೇಗೌಡ, ಪ್ರಧಾನ ಕಾರ್ಯದರ್ಶಿ ಜಿ.ಎ.ರವೀಂದ್ರ, ತಾಲ್ಲೂಕು ದಲಿತ ಸೇನೆಯ ಅಧ್ಯಕ್ಷ ಸಿ.ಮುನಿಯಪ್ಪ, ಉಷಾ ಪೂರ್ಣಚಂದ್ರ, ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ್, ಜಾಲಿಗೆ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಎಸ್.ಎಂ. ಆನಂದ್ ಕುಮಾರ್, ಸುಜಾತ, ಅಮರ್ ನಾಯಕ್ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.