ರಾಮನಗರ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಪರವಾಗಿ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುವ ಎಲ್ಲಾ ಜಾಹೀರಾತು, ಕಾಸಿಗಾಗಿ ಸುದ್ದಿ ಇತ್ಯಾದಿಗಳ ಬಗ್ಗೆ ನಿಗಾ ವಹಿಸಲು ರಚಿಸಲಾಗಿರುವ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಮಾಧ್ಯಮ ಪ್ರಮಾಣೀಕರಣ ಮತ್ತು ಕಣ್ಗಾವಲು ಸಮಿತಿ (ಎಂಸಿಎಂಸಿ) ಸಭೆಯು ಕಂದಾಯ ಭವನದ ವಾರ್ತಾಧಿಕಾರಿ ಕಚೇರಿಯಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಮಿತಿಯ ಜಿಲ್ಲಾ ಸದಸ್ಯ ಕಾರ್ಯದರ್ಶಿ ಹಮೀದ್ ಖಾನ್, ಜಿಲ್ಲಾಧಿಕಾರಿ ಹಾಗೂ ಕ್ಷೇತ್ರದ ಚುನಾವಣಾಧಿಕಾರಿಗಳು ಇದೇ ಪ್ರಥಮ ಬಾರಿಗೆ ಜಿಲ್ಲಾ ಮಟ್ಟದ ಜೊತೆಗೆ ತಾಲ್ಲೂಕು ಮಟ್ಟದ ಎಂಸಿಎಂಸಿ ಸಮಿತಿಗಳನ್ನು ರಚಿಸಿ ಆದೇಶಿಸಿದ್ದಾರೆ.
ಸಮಿತಿಯ ಸದಸ್ಯರು ತಮ್ಮ ತಾಲ್ಲೂಕು ವ್ಯಾಪ್ತಿಯಲ್ಲಿನ ಪತ್ರಿಕೆಗಳು ಹಾಗೂ ಕೇಬಲ್ ಚಾನೆಲ್‌ಗಳಲ್ಲಿ ಪ್ರಸಾರಗೊಳ್ಳುವ ಜಾಹೀರಾತು, ಕಾಸಿಗಾಗಿ ಸುದ್ದಿಗಳ ಬಗ್ಗೆ ಮಾಹಿತಿಯನ್ನು ತಾಲ್ಲೂಕು ಸಹಾಯಕ ಚುನಾವಣಾಧಿಕಾರಿಗಳ ಗಮನಕ್ಕೆ ತರಬೇಕೆಂದು ಹೇಳಿದರು. ಇದಲ್ಲದೆ ಕರಪತ್ರ, ಭಿತ್ತಿಪತ್ರ ಮತ್ತಿತರ ಮುದ್ರಿತ ಚುನಾವಣಾ ಸಾಮಗ್ರಿಗಳ ಬಗ್ಗೆಯೂ ಗಮನ ಹರಿಸಿ ಚುನಾವಣಾ ಅಧಿಕಾರಿಗಳ ಗಮನಕ್ಕೆ ನಿಗದಿತ ನಮೂನೆಯಲ್ಲಿ ವರದಿ ಸಲ್ಲಿಸಬೇಕು. ಯಾವುದೇ ಅನುಮಾನವಿದ್ದಲ್ಲಿ ಜಿಲ್ಲಾ ಮಟ್ಟದ ಸಮಿತಿಯನ್ನು ಸಂಪರ್ಕಿಸಲು ಸಭೆಯಲ್ಲಿ ಅವರು ತಿಳಿಸಿದರು.
ಸಭೆಯಲ್ಲಿ ಸಮಿತಿಯ ಸದಸ್ಯರಾದ ಸು.ತ.ರಾಮೇಗೌಡ, ಚಲುವರಾಜು, ಎಂ.ಎನ್.ಸುರೇಶ್, ಮೀನುಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಚಂದ್ರಶೇಖರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.