ADVERTISEMENT

ಜೈಲಿಗೆ ಹೋಗಿ ಬಂದವರಿಂದ ಪಾಠ ಕಲಿಯಬೇಕಿಲ್ಲ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2017, 7:23 IST
Last Updated 8 ಡಿಸೆಂಬರ್ 2017, 7:23 IST
ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷರಾಗಿ ನೇಮಕಗೊಂಡಿರುವ ಪುರಸಭಾ ಸದಸ್ಯ ಎಂ.ನಾಗರಾಜು ಅವರಿಗೆ ನೇಮಕಾತಿ ಪತ್ರ ವಿತರಣೆ ಮಾಡಿದರು
ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷರಾಗಿ ನೇಮಕಗೊಂಡಿರುವ ಪುರಸಭಾ ಸದಸ್ಯ ಎಂ.ನಾಗರಾಜು ಅವರಿಗೆ ನೇಮಕಾತಿ ಪತ್ರ ವಿತರಣೆ ಮಾಡಿದರು   

ವಿಜಯಪುರ: ‘ರಾಜ್ಯದ ಜನತೆ ಕೊಟ್ಟಿದ್ದ ಅಧಿಕಾರ ದುರುಪಯೋಗ ಪಡಿಸಿಕೊಂಡು ಭ್ರಷ್ಟಾಚಾರದಲ್ಲಿ ತೊಡಗಿ ಜೈಲಿಗೆ ಹೋಗಿ ಬಂದವರಿಂದ ನಾವು ಪಾಠ ಕಲಿಯಬೇಕಾಗಿಲ್ಲ’ ಎಂದು ಕಾಂಗ್ರೆಸ್ ನಾಯಕ ಮುನಿನರಸಿಂಹಯ್ಯ ಹೇಳಿದರು.

ಪ್ರವಾಸಿಮಂದಿರಲ್ಲಿ ಕೆಪಿಸಿಸಿ ರಾಜ್ಯ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಖಲೀಂ ಪಾಷ, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷರಾಗಿ ನೇಮಕಗೊಂಡಿರುವ ಪುರಸಭಾ ಸದಸ್ಯ ಎಂ.ನಾಗರಾಜು ಅವರಿಗೆ ನೇಮಕಾತಿ ಪತ್ರ ವಿತರಣೆ ಮಾಡಿ ಅವರು ಮಾತನಾಡಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸುಭದ್ರವಾಗಿದೆ. ರಾಜ್ಯ ಸರ್ಕಾರದ ಜನಪರವಾದ ಯೋಜನೆಗಳು ಮುಂದಿನ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳಿಗೆ ಶ್ರೀರಕ್ಷೆ. ಪಕ್ಷದ ಕಾರ್ಯಕರ್ತರು, ಸಮರ್ಪಣಾ ಮನೋಭಾವನೆಯಿಂದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ADVERTISEMENT

ಜಿಲ್ಲಾ ಪಂಚಾಯಿತಿ ಸದಸ್ಯ ಲಕ್ಷ್ಮೀನಾರಾಯಣಪ್ಪ ಮಾತನಾಡಿ, ಪಕ್ಷದಲ್ಲಿ ಅಧಿಕಾರಿಗಳನ್ನು ಪಡೆದುಕೊಂಡ ಮಾತ್ರವೇ ಜವಾಬ್ದಾರಿ ಮುಗಿಯುವುದಿಲ್ಲ. ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಸೇರಿದಂತೆ ಎಲ್ಲಾ ವಿಭಾಗಗಳಲ್ಲಿ ನೇಮಕಗೊಂಡಿರುವ ಪದಾಧಿಕಾರಿಗಳು ಆಯಾ ಸಮುದಾಯಗಳಿಗೆ ಸರ್ಕಾರದಿಂದ ಸಿಗುವಂತ ಎಲ್ಲಾ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ತಲುಪಿಸುವಂತ ಕಾರ್ಯ ಮಾಡಬೇಕು ಎಂದರು.

ಚನ್ನರಾಯಪಟ್ಟಣ ಹೋಬಳಿ ಸೋಮತ್ತನಹಳ್ಳಿಯಲ್ಲಿ ಅಲ್ಪಸಂಖ್ಯಾತ ವಸತಿ ಶಾಲೆ ಸ್ಥಾಪನೆ ಮಾಡಲಾಗುತ್ತಿದೆ. ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ನಿರ್ಮಾಣ ಮಾಡಲಾಗುತ್ತಿದೆ. ವಿಜಯಪುರದಲ್ಲಿ ಮುಸ್ಲಿಂ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದರು ಸರ್ಕಾರದಿಂದ ಶಾದಿಮಹಲ್ ನಿರ್ಮಾಣ ಮಾಡಿಲ್ಲ. ಅಲ್ಪಸಂಖ್ಯಾತ ಮಾಹಿತಿ ಕೇಂದ್ರ ವಿಜಯಪುರದಲ್ಲೇ ತೆರೆಯಲು ಸೂಚನೆ ನೀಡಲಾಗಿದೆ. ಆಯಾ ಸಮುದಾಯಗಳ ನೇತೃತ್ವ ವಹಿಸಿಕೊಂಡಿರುವವರು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದರು.

ಮುಖಂಡ ಬಿ.ಚೇತನ್ ಗೌಡ, ಮಾತನಾಡಿ, ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಜನಪರ, ಬಡವರ ಪರ, ದೀನದಲಿತರ, ಹಿಂದುಳಿದ ವರ್ಗಗಳ, ಅಲ್ಪ ಸಂಖ್ಯಾತರು ಹಾಗೂ ಎಲ್ಲಾ ವರ್ಗದ ಜನರಿಗೂ ಉತ್ತಮ ಕಾರ್ಯಕ್ರಮಗಳನ್ನು ರೂಪಿಸಿ ಉತ್ತಮ ಆಡಳಿತ ನೀಡುತ್ತಿದ್ದಾರೆ. ಕಳೆದ ನಾಲ್ಕೂವರೆ ವರ್ಷದಲ್ಲಿ ಭ್ರಷ್ಟಾಚಾರ ರಹಿತ, ಕಪ್ಪು ಚುಕ್ಕೆ ಇಲ್ಲದೇ ಜನಪರ ಆಡಳಿತ ನೀಡುತ್ತಿದ್ದಾರೆ ಎಂದು ಹೇಳಿದರು.

ಕೆಪಿಸಿಸಿ ರಾಜ್ಯ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಖಲೀಂ ಪಾಷ, ಮತ್ತು ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷರಾಗಿ ನೇಮಕಗೊಂಡಿರುವ ಪುರಸಭಾ ಸದಸ್ಯ ಎಂ.ನಾಗರಾಜು ಅವರನ್ನು ಅಭಿನಂದಿಸಿದರು.

ತಾಲ್ಲೂಕು ಎಸ್.ಸಿ.ಘಟಕದ ಅಧ್ಯಕ್ಷ ನಾರಾಯಣಸ್ವಾಮಿ, ಪುರಸಭಾ ಸದಸ್ಯರಾದ ಆರ್.ಸಿ.ಮಂಜುನಾಥ್, ಜೆ.ಎನ್.ಶ್ರೀನಿವಾಸ್, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುನಿರಾಜು, ತಾಲ್ಲೂಕು ಪಂಚಾಯಿತಿ ಸದಸ್ಯ ದಿನ್ನೂರು ವೆಂಕಟೇಶ್, ಶ್ರೀನಿವಾಸಗೌಡ, ವಿ.ಎಸ್.ಎಸ್.ಎನ್.ಅಧ್ಯಕ್ಷ ಸಿ.ಎಂ.ವೀರಣ್ಣ, ಎ.ಆರ್.ಆಜಾಂಪಾಷ, ವಿರೂಪಾಕ್ಷಪ್ಪ, ಖಾದರ್ ಪಾಷ, ಅಪ್ಪಾಜಿ, ವೀರಭದ್ರಯ್ಯ, ನಂಜುಂಡಯ್ಯ ಇದ್ದರು.

ಫಲಾನುಭವಿಗಳು ಕಾಂಗ್ರೆಸ್‌ ಕೈಬಿಡುವುದಿಲ್ಲ

ನೂತನ ನಗರ ಘಟಕದ ಅಧ್ಯಕ್ಷ ಎಂ.ನಾಗರಾಜ್ ಮಾತನಾಡಿ, ರಾಜ್ಯದ ಜನತೆಗೆ ಸಿದ್ದರಾಮಯ್ಯನವರ ಸರ್ಕಾರ ಹಲವಾರು ಯೋಜನೆ ತಂದಿದೆ. ಪ್ರತಿಯೊಬ್ಬರು ಒಂದಲ್ಲಾ ಒಂದು ಯೋಜನೆಯಲ್ಲಿ ಫಲಾನುಭವಿಗಳಾಗಿದ್ದಾರೆ ಎಂದರು.

ಫಲಾನುಭವಿಗಳು ಕಾಂಗ್ರೆಸ್‌ ಸರ್ಕಾರವನ್ನು ಕೈಬಿಡುವುದಿಲ್ಲ ಎಂಬ ನಂಬಿಕೆಯಿದೆ. ಪ್ರತಿ ಕಾಂಗ್ರೆಸ್‌ ಕಾರ್ಯಕರ್ತರು ಸರ್ಕಾರದ ಎಲ್ಲಾ ಅಭಿವೃದ್ಧಿ ಯೋಜನೆಗಳನ್ನು ಜನಸಾಮಾನ್ಯರಿಗೆ ಮುಟ್ಟುವಂತೆ ಮಾಡುವ ಕಾರ್ಯ ಮಾಡಬೇಕಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.