ADVERTISEMENT

ದೇಸಿ ಸಂಸ್ಕೃತಿ ಬಿಂಬಿಸುವಲ್ಲಿ ಸೋತ ಮಾಧ್ಯಮಗಳು

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2011, 18:30 IST
Last Updated 14 ಫೆಬ್ರುವರಿ 2011, 18:30 IST

ದೊಡ್ಡಬಳ್ಳಾಪುರ: ಇಂದಿನ ಮಾಧ್ಯಮಗಳು ಬಹುರಾಷ್ಟ್ರೀಯ ಕಂಪೆನಿಗಳ ಉತ್ಪನ್ನಗಳಿಗೆ ಮಣೆ ಹಾಕಿ ದೇಸಿ ಸಂಸ್ಕೃತಿಯನ್ನು ಬಿಂಬಿಸುವಲ್ಲಿ ಸೋತಿವೆ ಎಂದು ಚಿತ್ರ ನಿರ್ದೇಶಕ ಟಿ.ಎನ್. ಸೀತಾರಾಂ ವಿಷಾದಿಸಿದರು.ನಗರದ  ನೇಯ್ಗೆ ಬೀದಿಯ  ಸರ್ಕಾರಿ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಂಭ್ರಮ ಮತ್ತು ಶತಮಾನ ಭವನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. 
 
ಸಮಾನ ಶಿಕ್ಷಣ ಮರೀಚಿಕೆಯಾಗುತ್ತಿದೆ.ಮಕ್ಕಳಲ್ಲಿ ಹಣದ ವ್ಯಾಮೋಹ ತುಂಬಿ ನೈತಿಕ ಪ್ರಜ್ಞೆ ಮೂಡಿಸುವಲ್ಲಿ ವಿಫಲವಾಗಿದ್ದೇವೆ. ಉನ್ನತ ವ್ಯಕ್ತಿಗಳನ್ನು ರೂಪಿಸಿದ ಸರ್ಕಾರಿ ಶಾಲೆಗಳನ್ನು ಅಸಡ್ಡೆ ಮಾಡದೇ, ಪ್ರತಿಷ್ಟೆಗಾಗಿ ಬಳಸುವ ಇಂಗ್ಲಿಷ್ ವ್ಯಾಮೋಹ ಬಿಡಬೇಕಿದೆ ಎಂದರು.

 ಕರ್ನಾಟಕ ಮತ್ತು ಆಂಧ್ರಪ್ರದೇಶ ಹೈ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ.ಕೆ.ಸೋಮಶೇಖರ ಮಾತನಾಡಿ, ಜಾತಿ ಮತ್ತು ಹಣ ಇಂದಿನ ವ್ಯವಸ್ಥೆಯನ್ನು ಆಳುತ್ತಿವೆ. ಶಿಕ್ಷಣ ಸಂವಿಧಾನದ ಮೂಲಭೂತ ಹಕ್ಕಾಗಿದ್ದರೂ ವ್ಯಾಪಾರೀಕರಣದತ್ತ ಸಾಗುತ್ತಿದೆ.  ಶಿಕ್ಷಣದ ಮಹತ್ವ ಮತ್ತು ನಮ್ಮ ಹಕ್ಕು ಬಾಧ್ಯತೆಗಳ ಬಗ್ಗೆ ಅರಿವು ಮೂಡದೇ ಇರುವುದು ವಿಷಾದಕರ ಸಂಗತಿ.

 ಭ್ರಷ್ಟಾಚಾರವನ್ನು ನಾವು ಪರೋಕ್ಷವಾಗಿ ಪೋಷಿಸುತ್ತಿದ್ದೇವೆ. ಶಾಲೆಯಲ್ಲಿ ಪಠ್ಯದ ಜೊತೆಗೆ, ನೈತಿಕತೆ, ಸಾಮಾಜಿಕ ಪ್ರಜ್ಞೆ ಮೂಡಿಸಬೇಕಾದ ಅಗತ್ಯವಿದೆ ಎಂದು ತಿಳಿಸಿದರು. ಶಾಲೆಯ ಹಳೆಯ ವಿದ್ಯಾರ್ಥಿಯಾಗಿ ಶಾಲಾ ದಿನಗಳನ್ನು ಮೆಲುಕು ಹಾಕಿದರು.

ತಾಲ್ಲೂಕಿನ ತಪಸೀಹಳ್ಳಿಯ ಪುಷ್ಪಾಂಡಜ ಆಶ್ರಮದ ದಿವ್ಯಾಜ್ಞಾನಾಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.ಎಸ್.ಡಿ.ಎಂ.ಸಿ ಅಧ್ಯಕ್ಷ ಗಂಗರಾಜು ಶಿರವಾರ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಶತಮಾನದ ಸಿರಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು.ಶತಮಾನೋತ್ಸವ ಆಚರಣಾ ಸಮಿತಿ ಅಧ್ಯಕ್ಷ ಹಾಗೂ ಶಾಲೆ ಹಳೆ ವಿದ್ಯಾರ್ಥಿ ಬಿ.ಸಿ.ಸುರೇಂದ್ರನಾಥ್ ಅವರನ್ನು ಸನ್ಮಾನಿಸಲಾಯಿತು.

ನಗರಸಭೆ ಅಧ್ಯಕ್ಷೆ ಕಾಂತಮ್ಮ ಕೃಷ್ಣಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಜಿ.ರಾಜೇಂದ್ರ, ನಗರಸಭಾ ಸದಸ್ಯ ಟಿ.ಎನ್.ಪ್ರಭುದೇವ್, ವಾಣಿಜ್ಯೋದ್ಯಮಿ ಎಚ್.ಪಿ.ಶಂಕರ್, ನಗರಸಭಾ ಮಾಜಿ ಸದಸ್ಯ ಪಿ.ಸಿ.ಲಕ್ಷ್ಮೀನಾರಾಯಣ್, ಟಿ.ಎಂ.ಸಿ.ಬ್ಯಾಂಕ್ ಅಧ್ಯಕ್ಷ ಕೆ.ಪಿ.ವಾಸುದೇವ್, ಭೂ ನ್ಯಾಯ ಮಂಡಳಿ ಸದಸ್ಯ ಕೆ.ಎಚ್.ರಂಗನಾಥ್, ಕೆಂಕರೆ ರಮಾಕಾಂತ್ ನಿರ್ದೇಶಕ ಪಿ.ಸಿ.ವೆಂಕಟೇಶ್, ಹಿರಿಯ ವಕೀಲ ಎ.ಆರ್.ನಾಗರಾಜನ್, ಅರಿವು ಪೌಂಡೇಷನ್‌ನ ಡಾ.ಕೆ.ನಾರಾಯಣ್ ಮುಂತಾದವರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.