ADVERTISEMENT

ದೊಡ್ಡಬಳ್ಳಾಪುರ: ನೀರಿಗೆ ಟ್ಯಾಂಕರ್‌ಗಳ ಆಶ್ರಯ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2012, 19:30 IST
Last Updated 25 ಫೆಬ್ರುವರಿ 2012, 19:30 IST

ದೊಡ್ಡಬಳ್ಳಾಪುರ: ಮೂರು ವರ್ಷಗಳಿಗೆ ಹೋಲಿಕೆ ಮಾಡಿದರೆ ಈ ವರ್ಷ ತಾಲ್ಲೂಕಿನ ಬೆಟ್ಟದ ತಪ್ಪಲಿನ  ನಾಲ್ಕೈದು ಕೆರೆಗಳನ್ನು ಹೊರತು ಪಡಿಸಿದರೆ ಉಳಿದ ಯಾವುದೇ ಕೆರೆಯಲ್ಲೂ ಕನಿಷ್ಠ ಒಂದು ತಿಂಗಳ ಕಾಲ ನಿಲ್ಲುವಷ್ಟು ನೀರು ಬರುವಂತ ಮಳೆ ಬೀಳಲಿಲ್ಲ. ಕೆರೆಗಳೆಲ್ಲ ಬರಿದಾಗಿವೆ. ಈ ಹಿನ್ನೆಲೆಯಲ್ಲಿ ಕುಡಿಯುವ ನೀರಿಗೆ ನೀವ್ರ ಕೊರತೆ ಉಂಟಾಗಿದೆ.

ಸರ್ಕಾರಿ ಲೆಕ್ಕದ ಪ್ರಕಾರ ವಾಡಿಕೆ ಮಳೆ 700 ಮಿ.ಮೀ.ಗಿಂತಲೂ ಶೇ.5 ರಷ್ಟು ಮಾತ್ರ ಕಡಿಮೆಯಾದ ಹಿನ್ನೆಲೆಯಲ್ಲಿ ತಾಲ್ಲೂಕನ್ನು ಬರಪೀಡಿತ ಪ್ರದೇಶ ಎಂದು ಮೂರು ತಿಂಗಳ ನಂತರ ವಾಸ್ತವ ಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟ ಮೇಲೆ ಫೆ.13 ರಂದು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ.

`ತಾಲ್ಲೂಕಿನ ಕೊಡಿಗೇಹಳ್ಳಿ, ಹಣಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೇರಳೆಘಟ್ಟ, ರಾಜಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುದ್ದನಾಯಕನ ಪಾಳ್ಯ, ತೂಬಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರುವಿಗೆರೆ, ಹಾದ್ರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದುರನ ಹೊಸಹಳ್ಳಿ, ಅರಳುಮಲ್ಲಿಗೆ ಗ್ರಾಮದಲ್ಲಿ  ನೀರಿನ ಕೊರತೆ ನೀಗಿಸಲು 15 ಲಕ್ಷ ರೂಗಳನ್ನು ಬಿಡುಗಡೆ ಮಾಡಲಾಗಿದೆ.

ತಾಲ್ಲೂಕಿನ 29 ಗ್ರಾಮ ಪಂಚಾಯಿತಿ ವ್ಯಾಪ್ತಿಯ 34 ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗಿದೆ. ಇವುಗಳ ಪೈಕಿ 8 ಗ್ರಾಮಗಳಲ್ಲಿ ಕೊಳವೆ ಬಾವಿ ಕೊರೆಸಿದರು ಸಹಾ ನೀರು ದೊರೆಯದಾಗಿದೆ. ಈ ಹಿನ್ನೆಲೆಯಲ್ಲಿ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲು ಗ್ರಾಮ ಪಂಚಾಯಿತಿಗಳಿಗೆ ಸೂಚನೆ ನೀಡಲಾಗಿದೆ.

ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಹಣಕಾಸಿನ ಕೊರತೆ ಇಲ್ಲ. ಶಾಸಕರ ಅಧ್ಯಕ್ಷತೆಯಲ್ಲಿ ಕಾರ್ಯಪಡೆ ಸಮಿತಿ ರಚಿಸಲಾಗಿದೆ. ಪ್ರತಿ 15 ದಿನಗಳಿಗೆ ಒಮ್ಮೆ ಸಭೆ ನಡೆಸಿ ನೀರಿನ ಕೊರತೆ ಹಾಗೂ ಸಮಸ್ಯೆ ಕುರಿತು ಪರಾಮರ್ಶೆ ನಡೆಸಲಾಗುತ್ತದೆ~ ಎಂದು ಜಿಲ್ಲಾ ಪಂಚಾಯಿತಿ ತಾಲ್ಲೂಕು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎಸ್.ಸುಂದರ್‌ರಾಜ್ ತಿಳಿಸಿದ್ದಾರೆ.

`ಕಸಬಾ, ಮಧುರೆ ಹೋಬಳಿಯಲ್ಲಿ ಹದವಾಗಿ ಮಳೆಯಾದ ಹಿನ್ನೆಲೆಯಲ್ಲಿ ರಾಗಿ, ಮುಸುಕಿನ ಜೋಳದ ಬೆಳೆ ಆಗಿದೆ. ಉಳಿದಂತೆ ತೂಬಗೆರೆ, ದೊಡ್ಡಬೆಳವಂಗಲ ಹಾಗೂ ಸಾಸಲು ಹೋಬಳಿಯಲ್ಲಿ ರಾಗಿ ಬೆಳೆ ಸರಿಯಾಗಿ ಬಂದಿಲ್ಲ. ಹೀಗಾಗಿ ಅಂತರ್ಜಲ ಕುಸಿತವಾಗಿದೆ.

ತಾಲ್ಲೂಕಿನಲ್ಲಿ ಕುಡಿಯುವ ನೀರು ಸೇರಿದಂತೆ ಕೃಷಿ ಚಟುವಟಿಕೆಗಳಿಗೂ ತೊಂದರೆಯಾಗಿದೆ. ನೀರಿನ ಕೊರತೆಯಿಂದಾಗಿ ನಗರದ ಕೃಷಿ ಮಾರುಕಟ್ಟೆಗೆ ತರಕಾರಿ ಬರುವುದು ಸಹ ಕಡಿಮೆಯಾಗಿದೆ~ ಎನ್ನುತ್ತಾರೆ ತಾಲ್ಲೂಕಿನ ಕಸಬಾ ಹೋಬಳಿಯ ಅರಳುಮಲ್ಲಿಗೆ ಗ್ರಾಮದ ತರಕಾರಿ ಬೆಳೆಗಾರ ಕೃಷ್ಣಯ್ಯ.   

ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಕೊರತೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ಅಂತರ್ಜಲ ಮಟ್ಟವು ಸಹ ಕುಸಿತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ದೀರ್ಘಕಾಲಿಕ ಯೋಜನೆಗಳನ್ನು ಕೈಗೊಳ್ಳಬೇಕು. ಕೇವಲ ತಾತ್ಕಾಲಿಕ ಶಮನಕ್ಕಾಗಿ ಕೊಳವೆ ಬಾವಿಗಳನ್ನು ಕೊರೆಸುವುದು ಸಮಸ್ಯೆಗೆ ಪರಿಹಾರ ಅಲ್ಲ.

ತಾಲ್ಲೂಕಿನ ಎಸ್.ಎಸ್.ಘಾಟಿ, ತಿಪ್ಪೂರು ಹಾಗೂ ಗುಂಡಮಗೆರೆ ಸಮೀಪ ಮಳೆಗಾಲದಲ್ಲಿ ಬೆಟ್ಟದ ತಪ್ಪಿಲಿನ ಹಳ್ಳಗಳಲ್ಲಿ ವ್ಯರ್ಥವಾಗಿ  ಹರಿದು ಹೋಗುವ ನೀರು ತಡೆಯಲು ಬೃಹತ್ ಚೆಕ್ ಡ್ಯಾಮ್‌ಗಳ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳಬೇಕು. ಇದರಿಂದ ಈ ಭಾಗದ ಸುತ್ತಲಿನ ಗ್ರಾಮಗಳಲ್ಲಿ ಅಂತರ್ಜಲದ ಮಟ್ಟ ಹೆಚ್ಚಾಗಲಿದೆ. ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಜಕ್ಕಲಮಡಗು ಯೋಜನೆ ಪೂರ್ಣಗೊಳಿಸಲು ತುರ್ತು ಕ್ರಮ ಕೈಗೊಳ್ಳಬೇಕು. ನಗರದಲ್ಲಿ ಮೇಲ್ಛಾವಣಿ ಮಳೆ ನೀರು ಸಂಗ್ರಹಣೆ ಕಡ್ಡಾಯ ಮಾಡಬೇಕು ಎನ್ನುವುದು ಪರಿಸರಾಸಕ್ತರ ಒತ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.