ADVERTISEMENT

ದ್ವಿತೀಯ ಪಿಯು ಪರೀಕ್ಷೆ: ಬಿಗಿ ಬಂದೋಬಸ್ತ್, ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2012, 19:30 IST
Last Updated 15 ಮಾರ್ಚ್ 2012, 19:30 IST
ದ್ವಿತೀಯ ಪಿಯು ಪರೀಕ್ಷೆ: ಬಿಗಿ ಬಂದೋಬಸ್ತ್, ಪರಿಶೀಲನೆ
ದ್ವಿತೀಯ ಪಿಯು ಪರೀಕ್ಷೆ: ಬಿಗಿ ಬಂದೋಬಸ್ತ್, ಪರಿಶೀಲನೆ   

ವಿಜಯಪುರ:  ದ್ವಿತೀಯ ಪಿಯು ಪರೀಕ್ಷೆ ಗುರುವಾರದಿಂದ ಆರಂಭವಾಗಿದ್ದು, ಪರೀಕ್ಷಾ ಕೇಂದ್ರವಾಗಿರುವ ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಪ್ರಗತಿ ಮಹಿಳಾ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಸೂಕ್ತ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಕಾಲೇಜು ಆವರಣದ ಸುತ್ತ 100 ಮೀಟರ್ ನಿಷೇಧಾಜ್ಞೆ ಜಾರಿಯಲ್ಲಿತ್ತು.
 
ವಿಜಯಪುರದ ಎರಡು ಮತ್ತು ದೇವನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚು: ವಿಜಯಪುರ ಸರ್ಕಾರಿ ಕಿರಿಯ ಕಾಲೇಜಿನ ಒಟ್ಟಾರೆ 252 ವಿದ್ಯಾರ್ಥಿಗಳ ಪೈಕಿ 156 ಮಂದಿ ಹೆಣ್ಣು ಮಕ್ಕಳು 96 ಮಂದಿ ಗಂಡು ಮಕ್ಕಳು ಪರೀಕ್ಷೆಯನ್ನು ಬರೆಯುತ್ತಿದ್ದು, ವಿಜ್ಞಾನ, ಕಲೆ, ವಾಣಿಜ್ಯ ವಿಭಾಗಗಳಲ್ಲೂ ಹೆಣ್ಣು ಮಕ್ಕಳ ಸಂಖ್ಯೆಯೇ ಹೆಚ್ಚು.

ಇನ್ನು ಪ್ರಗತಿ ಮಹಿಳಾ ಕಾಲೇಜಿನ 204 ವಿದ್ಯಾರ್ಥಿನಿಯರು ಪರೀಕ್ಷೆ ಎದುರಿಸುತ್ತಿದ್ದು, ಒಟ್ಟಾರೆ ತಾಲ್ಲೂಕಿನಲ್ಲಿ ಒಬ್ಬ ವಿದ್ಯಾರ್ಥಿಗೆ ಇಬ್ಬರು ವಿದ್ಯಾರ್ಥಿನಿಯರಂತೆ ದುಪ್ಪಟ್ಟು ಹೆಣ್ಣು ಮಕ್ಕಳು ಪರೀಕ್ಷೆ ಎದುರಿಸುತ್ತಿದ್ದಾರೆ.
ಪ್ರತಿ ಕೇಂದ್ರಕ್ಕೆ ಸ್ಥಾನಿಕ ಜಾಗೃತ ದಳ, ತಾಲ್ಲೂಕು ಮಟ್ಟದಲ್ಲಿ ಎ.ಸಿ.ಅವರನ್ನೊಳಗೊಂಡ ಕ್ಷೇತ್ರ ಶಿಕ್ಷಣಾಧಿಕಾರಿಗಳ ಜಾಗೃತದಳ, ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳನ್ನೊಳಗೊಂ ಡ ಜಾಗೃತ ದಳ ಕಾರ್ಯನಿರ್ವಹಿಸುತ್ತಿದೆ.

ವಿಶ್ವನಾಥಪುರ ಸ.ಪ.ಪೂ.ಕಾಲೇಜು ಮತ್ತು ಬೂದಿಗೆರೆಯ ಸಿದ್ಧಗಂಗಾ ಪ.ಪೂ.ಕಾಲೇಜಿನ ವಿದ್ಯಾರ್ಥಿಗಳು ದೇವನಹಳ್ಳಿಯ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯುತ್ತಿದ್ದಾರೆ.

ವಿಜಯಪುರದ ಪರೀಕ್ಷಾ ಕೇಂದ್ರಗಳಲ್ಲಿ ಜಂಗಮಕೋಟೆಯ ಜ್ಯೋತಿ ಪ.ಪೂ.ಕಾಲೇಜು ಮತ್ತು ವಿಜಯ ಪ.ಪೂ. ಕಾಲೇಜಿನ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.

`ಕಟ್ಟು ನಿಟ್ಟಿನ ಕ್ರಮ~

ಆನೇಕಲ್: ದ್ವಿತೀಯ ಪಿಯುಸಿ  ಪರೀಕ್ಷೆಗಳು ಜಿಲ್ಲೆಯ ಎಲ್ಲ ಕೇಂದ್ರಗಳಲ್ಲಿ ಪಾರದರ್ಶಕವಾಗಿ ನಡೆಯುವಂತೆ ಎಲ್ಲ ರೀತಿಯ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಬೆಂಗಳೂರು ದಕ್ಷಿಣ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಉಮಾ ಬಸವಣ್ಣಪ್ಪ ನುಡಿದರು.

ಪಟ್ಟಣದ ಎಎಸ್‌ಬಿ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ  ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಜಿಲ್ಲೆಯಲ್ಲಿ 71 ಕೇಂದ್ರಗಳಿದ್ದು ಎಲ್ಲ ಕೇಂದ್ರಗಳಲ್ಲಿ ಸ್ಥಾನಿಕ ಜಾಗೃತ ದಳವನ್ನು ನೇಮಕ ಮಾಡಲಾಗಿದೆ. ನಕಲು ತಡೆಗಟ್ಟುವ ಸಲುವಾಗಿ ಸಂಚಾರಿ ಜಾಗೃತ ದಳಗಳು ಎಲ್ಲೆಡೆ ಸಂಚರಿಸಲಿವೆ ಎಂದರು.

ಜಿಲ್ಲಾಧಿಕಾರಿಗಳು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ನೇತೃತ್ವದಲ್ಲಿ ಸಹ ಜಾಗೃತ ದಳಗಳು ಕಾರ್ಯ ನಿರ್ವಹಿಸಲಿವೆ. ಪಟ್ಟಣದ ಕೇಂದ್ರವು ಸೂಕ್ಷ್ಮ ಕೇಂದ್ರವಾಗಿರುವುದರಿಂದ ಹೆಚ್ಚಿನ ಜಾಗೃತ ದಳವನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.