ADVERTISEMENT

ನರೇಗಾದಿಂದ ಹಳ್ಳಿಗಳ ಅಭಿವೃದ್ಧಿ ಸಾಧ್ಯ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2017, 6:23 IST
Last Updated 22 ನವೆಂಬರ್ 2017, 6:23 IST

ವಿಜಯಪುರ: ನರೇಗಾ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಂಡರೆ ಹಳ್ಳಿಗಳ ಸರ್ವತೋಮುಖ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಮಂಡಿಬೆಲೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಕುಮಾರ್ ಹೇಳಿದರು. ಮಂಡಿಬೆಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳಿಯೂರು ಗ್ರಾಮದಲ್ಲಿ ನರೇಗಾ ಯೋಜನೆಯಲ್ಲಿ ಕುಂಟೆ ನಿರ್ಮಾಣ ಕಾಮಗಾರಿ ವೀಕ್ಷಿಸಿ ಅವರು ಮಾತನಾಡಿದರು.

ಬಯಲು ಸೀಮೆ ಭಾಗವಾಗಿರುವ ಈ ಪ್ರದೇಶದಲ್ಲಿ ಜನರಿಗೆ ಉದ್ಯೋಗ ಇಲ್ಲದೆ ನಗರ ಪ್ರದೇಶಗಳ ಕಡೆಗೆ ವಲಸೆ ಹೋಗುವ ಸ್ಥಿತಿ ನಿರ್ಮಾಣವಾಗುತ್ತಿದೆ. ಇದನ್ನು ತಪ್ಪಿಸಿ ಜನರಿಗೆ ಕೂಲಿ ನೀಡಲು ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕೆರೆ ಅಭಿವೃದ್ಧಿ, ಸ್ಮಶಾನ ನಿರ್ಮಾಣ, ಕೊಟ್ಟಿಗೆ ನಿರ್ಮಾಣ, ಕುಂಟೆಗಳ ನಿರ್ಮಾಣ ಸೇರಿದಂತೆ ಅನೇಕ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಸದಸ್ಯ ರಘು ಮಾತನಾಡಿ, ಈ ಭಾಗದಲ್ಲಿ ಅಂತರ್ಜಲದ ಮಟ್ಟ ತೀವ್ರವಾಗಿ ಕುಸಿದಿದೆ. ಕುಡಿಯುವ ನೀರಿಗಾಗಿ ಕೊಳವೆ ಬಾವಿಗಳನ್ನೇ ಅವಲಂಬಿಸಲಾಗಿದೆ. ಆದ್ದರಿಂದ ನರೇಗಾ ಯೋಜನೆಯಡಿ ಕುಂಟೆ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಮಳೆಯ ನೀರನ್ನು ಸಂಗ್ರಹಿಸಿ ಅಂತರ್ಜಲದ ಮಟ್ಟ ಏರಿಕೆ ಮಾಡುವುದು ಮುಖ್ಯ ಉದ್ದೇಶವಾಗಿದೆ ಎಂದರು.

ADVERTISEMENT

ನಮ್ಮ ಹೊಲ ನಮ್ಮ ದಾರಿ, ಒಕ್ಕಣೆ ಕಣ, ಕೊಟ್ಟಿಗೆ, ಸಿಮೆಂಟ್ ರಸ್ತೆ, ಭೂ ಅಭಿವೃದ್ಧಿ, ಶಾಲಾ ಕಾಂಪೌಂಡ್ ಸೇರಿದಂತೆ ಅನೇಕ ಕೆಲಸಗಳಿಗೆ ಆದ್ಯತೆ ನೀಡಿ ಜನರಿಗೆ ಕೆಲಸ ಸೃಷ್ಟಿಸಲಾಗುತ್ತಿದೆ. ಸ್ವಚ್ಛತೆ ಕಾಪಾಡುವ ದೃಷ್ಟಿಯಿಂದ ಪ್ರತಿಯೊಬ್ಬರು ವೈಯುಕ್ತಿಕ ಶೌಚಾಲಯ ನಿರ್ಮಿಸಿಕೊಂಡು ಬಯಲು ಮಲವಿಸರ್ಜನೆಮುಕ್ತ ಗ್ರಾಮ ಮಾಡಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.