ADVERTISEMENT

‘ನಿಗದಿತ ಸಮಯಕ್ಕೆ ಕಾಮಗಾರಿ ಪೂರ್ಣ’

ದೇವನಹಳ್ಳಿ ಜಿಲ್ಲಾಡಳಿತ ಕೇಂದ್ರ ಕಚೇರಿ ಸಂಕೀರ್ಣ ಉದ್ಘಾಟಿಸಿದ ಸಚಿವ ಕಾಗೋಡು ತಿಮ್ಮಪ್ಪ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2018, 8:47 IST
Last Updated 23 ಮಾರ್ಚ್ 2018, 8:47 IST

ದೇವನಹಳ್ಳಿ: ಸ್ಥಳೀಯರ ಬಹುದಿನದ ಬೇಡಿಕೆಯಾಗಿದ್ದ ಜಿಲ್ಲಾ ಆಡಳಿತ ಕೇಂದ್ರವನ್ನು ಸಕಾಲದಲ್ಲಿ ಉದ್ಘಾಟಿಸಲಾಗಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಸಂತಸ ವ್ಯಕ್ತಪಡಿಸಿದರು.

ಇಲ್ಲಿನ ಚಪ್ಪರದ ಕಲ್ಲು ಬಳಿ ನಿರ್ಮಾಣವಾಗಿರುವ ಜಿಲ್ಲಾಡಳಿತ ಕೇಂದ್ರ ಕಚೇರಿ ಸಂಕೀರ್ಣ ಉದ್ಘಾಟಿಸಿ ಮಾತನಾಡಿದ ಅವರು, ಶೇ10 ರಿಂದ
15ರಷ್ಟು ಕಾಮಗಾರಿ ಬಾಕಿ ಇದೆ. ಸಾರ್ವಜನಿಕರಿಗೆ ಅಗತ್ಯವಿರುವ ಎಲ್ಲಾ ಇಲಾಖೆಯ ಕೊಠಡಿ ಕಾಮಗಾರಿ ಪೂರ್ಣಗೊಂಡಿದೆ. ಕಟ್ಟಡದ ಗುಣ
ಮಟ್ಟ ಉತ್ತಮವಾಗಿದೆ. ಜತೆಗೆ ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಂಡಿರುವುದು ಖುಷಿಯ ವಿಚಾರ ಎಂದರು.

₹43 ಕೋಟಿ ವೆಚ್ಚದಲ್ಲಿ ನೆಲಮಹಡಿ ಮತ್ತು ಎರಡು ಮಹಡಿ ನಿರ್ಮಾಣ ಮಾಡಲಾಗಿದೆ. ವಿವಿಧ ಇಲಾಖೆಗಳ ಜಿಲ್ಲಾ ಕಚೇರಿಗಳು ಹಾಗೂ ಅವಶ್ಯ ನಾಗರಿಕ ಸೇವೆಗಳು ಒಂದೇ ಕಟ್ಟಡದಡಿಯಲ್ಲಿ ಸುಲಭವಾಗಿ ಸಿಗುವ ಉದ್ದೇಶವನ್ನು ಸರ್ಕಾರ ಈಡೇರಿಸಿದೆ ಎಂದರು.

ADVERTISEMENT

ಸಂಸದ ಡಾ.ಎಂ.ವೀರಪ್ಪ ಮೊಯಿಲಿ ಮಾತನಾಡಿ, ರಾಜ್ಯದ ಎಲ್ಲಾ ಜಿಲ್ಲೆಗಳಿಗಿಂತ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಕೇಂದ್ರ ಸಂಕೀರ್ಣ ಕಟ್ಟಡ ವಿಶೇಷವಾಗಿ ವಿನ್ಯಾಸಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ನುಡಿದಂತೆ ನಡೆದಿದೆ. ₹11ಕೋಟಿ ವೆಚ್ಚದಲ್ಲಿ ದೇವನಹಳ್ಳಿ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ತಾಯಿ ಮಗು ಆಸ್ಪತ್ರೆಗೆ ಈಗಾಗಲೇ ಭೂಮಿ ಪೂಜೆ ನೆರವೇರಿಸಲಾಗಿದೆ. ₹16 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ ವಾಜಪೇಯಿ ಹೈಟೆಕ್ ವಸತಿ ಶಾಲೆ ಉದ್ಘಾಟನೆ ಮಾಡಲಾಗಿದೆ ಎಂದು ಅವರು ಹೇಳಿದರು.

ಶಾಸಕ ಪಿಳ್ಳಮುನಿಶಾಮಪ್ಪ ಮಾತನಾಡಿದರು. ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ, ದೊಡ್ಡಬಳ್ಳಾಪುರ ಶಾಸಕ ಟಿ.ವೆಂಕಟರಮಣಯ್ಯ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವಿ.ಪ್ರಸಾದ್, ಉಪಾಧ್ಯಕ್ಷೆ ಅನಂತಕುಮಾರಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಲಕ್ಷ್ಮಿನಾರಾಯಣ, ಕೆ.ಸಿ.ಮಂಜುನಾಥರ್, ರಾಧಮ್ಮ ಮುನಿರಾಜು, ಬಮುಲ್ ಅಧ್ಯಕ್ಷ ಅಪ್ಪಯ್ಯಣ್ಣ, ಬಮುಲ್ ನಿರ್ದೇಶಕ ಶ್ರೀನಿವಾಸ್, ಎ.ಪಿ.ಎಂ.ಸಿ.ಅಧ್ಯಕ್ಷೆ ಅಮರಾವತಿ, ನಿರ್ದೇಶಕ ಕೆ.ವಿ.ಮಂಜುನಾಥ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಭಾರತಿ ಲಕ್ಷ್ಮಣ್ ಗೌಡ, ಉಪಾಧ್ಯಕ್ಷೆ ನಂದಿನಿ, ತಾಲ್ಲೂಕು ಪಂಚಾಯಿತಿ ಸದಸ್ಯೆ ಶೈಲಜಾ ಜಗದೀಶ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಖಾ, ಉಪಾಧ್ಯಕ್ಷೆ ಪಿಳ್ಳಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.