ADVERTISEMENT

ಪೈಪೋಟಿ ಭರಾಟೆಯಲ್ಲಿ ಭ್ರಮೆಗಳ ಸೃಷ್ಟಿ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2012, 5:00 IST
Last Updated 15 ಅಕ್ಟೋಬರ್ 2012, 5:00 IST

ದೊಡ್ಡಬಳ್ಳಾಪುರ: ಪೈಪೋಟಿಯ ಭರಾಟೆಯಲ್ಲಿ ಮಾಧ್ಯಮಗಳು ಸೃಷ್ಟಿಸುತ್ತಿರುವ ಭ್ರಮೆಗಳೇ ಸದ್ಯದ ಜಗತ್ತನ್ನು ಆಳುತ್ತಿವೆ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಆರ್.ರವಿಕಿರಣ್ ವಿಶ್ಲೇಷಿಸಿದರು.

ನಗರದ ಕೊಂಗಾಡಿಯಪ್ಪ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಅಡಿಯಲ್ಲಿ ಗಡ್ಡಂಬಚ್ಚಹಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ ವಿಶೇಷ ಯುವಜನ ಸೇವಾ ಶಿಬಿರದಲ್ಲಿ `ಯುವ ಜನತೆ ಮತ್ತು ಮಾಧ್ಯಮಗಳು~ ವಿಚಾರ ಕುರಿತು ಅವರು ಮಾತನಾಡಿದರು.

ನಮ್ಮ ಮೂಲಭೂತ ಚಿಂತನೆಗಳು, ಭಾಷೆ, ಆಲೋಚನೆ, ಚಿಂತನ ಕ್ರಮಗಳೇ ಭ್ರಷ್ಟವಾಗಿರುವಾಗ ಸಮಾಜದ ಭ್ರಷ್ಟಾಚಾರದ ಬಗ್ಗೆ ಮಾತನಾಡುವುದು ಕಷ್ಟಸಾಧ್ಯ. ಮೊದಲು ಭಾಷೆ, ಭಾವ ಮತ್ತು ಚಿಂತನೆಗಳು ಶುದ್ಧವಾದರೆ ವ್ಯವಸ್ಥೆ ತನ್ನಷ್ಟಕ್ಕೇ ತಾನೇ ಬದಲಾಗುತ್ತದೆ. ಇಂದು ದೃಶ್ಯ ಮತ್ತು ಮುದ್ರಣ ಮಾಧ್ಯಮಗಳು ಸಂದರ್ಭದ ಅನಿವಾರ್ಯತೆಯಲ್ಲಿ ಸುದ್ದಿಯನ್ನು ನೋಡುತ್ತಿವೆ. ಕ್ರೌರ್ಯ ಮತ್ತು ಅಪರಾಧಿ ಕೃತ್ಯಗಳ ವೈಭವೀಕರಣ ಸರಿಯಲ್ಲ ಎಂದರು.

ಮಾರುಕಟ್ಟೆಯ ಬಂಡವಾಳಶಾಹಿಗಳ ನಿಯಂತ್ರಣದಲ್ಲಿರುವ ಮಾಧ್ಯಮ ಓದುಗ ಅಥವಾ ನೋಡುಗನ ಅಭಿರುಚಿ, ಆಸಕ್ತಿ, ಮೌಲ್ಯಪ್ರಜ್ಞೆಗಿಂತ ಹೆಚ್ಚಾಗಿ ಜಾಹಿರಾತುದಾರನ ಬೇಕು-ಬೇಡಗಳಿಗೆ ದನಿಯಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಮಾಧ್ಯಮ ಅಪ್ಪಟ ಸಮಾಜಸ್ನೇಹಿ ಎಂಬ ನಂಬಿಕೆ ಸರಿಯಲ್ಲ. ಅದರ ಗೊತ್ತು ಗುರಿಗಳೇನೇ ಇದ್ದರೂ ಪ್ರತಿಪಾದಿಸುವ ಅಂಶಗಳು ಮುಖ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಜ್ಯಶಾಸ್ತ್ರ ಉಪನ್ಯಾಸಕ ಸಿದ್ಧಲಿಂಗಯ್ಯ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕು ಪರಿಪೂರ್ಣಗೊಳ್ಳುತ್ತದೆ. ಪಠ್ಯಪುಸ್ತಕಗಳ ಜತೆಗೆ ಗ್ರಾಮೀಣ ಬದುಕಿನ ಲಯವನ್ನು ಅರ್ಥ ಮಾಡಿಕೊಳ್ಳಲು ಇಂಥ ಶಿಬಿರಗಳು ಸಹಕಾರಿಯಾಗುತ್ತವೆ ಎಂದರು.

ಶಿಬಿರಾಧಿಕಾರಿ ಎಂ.ರವಿಕುಮಾರ್, ತಾಲ್ಲೂಕು ಕಸಾಪ ಕೋಶಾಧ್ಯಕ್ಷ ಎಂ.ಚಿಕ್ಕಣ್ಣ, ಉಪನ್ಯಾಸಕ ಎಸ್.ಎಸ್. ಶಿವಶಂಕರ್, ಕಾಂತ್, ದೀಪಾಂಜಲಿ, ಬೋರಪ್ಪ, ಗ್ರಾಮದ ಮುಖಂಡರಾದ  ಆನಂದರಾಮಯ್ಯ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.