ADVERTISEMENT

ಪೌರಾಯುಕ್ತರ ಧೋರಣೆ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2012, 5:00 IST
Last Updated 24 ಜುಲೈ 2012, 5:00 IST

ದೊಡ್ಡಬಳ್ಳಾಪುರ: ನಗರಸಭೆ ಪೌರಾಯುಕ್ತ ಮತ್ತು ಅಧ್ಯಕ್ಷರ ನಿರ್ಲಕ್ಷ್ಯ ಧೋರಣೆ ಖಂಡಿಸಿ ಕನ್ನಡ ಪಕ್ಷದ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ, ಕನ್ನಡ ಪಕ್ಷದ ತಾಲ್ಲೂಕು ಅಧ್ಯಕ್ಷ ಡಿ.ಸಂಜೀವ್ ನಾಯ್ಕ, ಕಾರ್ಯದರ್ಶಿ ಡಿ.ಪಿ.ಆಂಜನೇಯ, ಸ್ಥಳೀಯ ಚುನಾಯಿತ ಜನಪ್ರತಿನಿಧಿಗಳ ಮನವಿ ಮೇರೆಗೆ ರೂಪಿಸಲಾಗಿರುವ ಕಾಮಗಾರಿಗಳಿಗೆ ಟೆಂಡರ್ ಕರೆದು ಅನುಮೋದನೆಯಾಗಿದ್ದರೂ ಸಹ ನಗರಸಭೆ ಪೌರಾಯುಕ್ತರು ಒತ್ತಡಕ್ಕೆ ಮಣಿದು ಕಾಮಗಾರಿಯನ್ನು ಆರಂಭಿಸುತ್ತಿಲ್ಲ ಎಂದು ದೂರಿದರು.

ಪ್ರಯಾಣಿಕರ ತಂಗುದಾಣ ನಿರ್ಮಾಣಕ್ಕೆ ಹಣ ಬಿಡುಗಡೆಯಾಗಿದೆ. ಆದರೆ ನಗರದ ಇತರೆಡೆಗಳಲ್ಲಿ ತಂಗುದಾಣದ ಕಾಮಗಾರಿಗಳು ಮುಕ್ತಾಯವಾಗಿದ್ದರೂ ಸಹ ಇದುವರೆಗೆ ನಮ್ಮ ಪಕ್ಷದ ಸದಸ್ಯರು ಆಯ್ಕೆಯಾಗಿರುವ ವಾರ್ಡ್‌ನಲ್ಲಿನ ತಂಗುದಾಣದ ಕಾಮಗಾರಿಯನ್ನು ಮಾತ್ರ ಇನ್ನೂ ಆರಂಭಿಸಿಲ್ಲ. ಭುವನೇಶ್ವರಿ ನಗರದಲ್ಲಿ ಸಮುದಾಯ ಭವನ ನಿರ್ಮಾಣ ಮಾಡಲು ಸರ್ವ ಸದಸ್ಯರ ಸಭೆಯಲ್ಲಿ ಅನುಮೋದನೆಯಾಗಿದ್ದರೂ ಕಾಮಗಾರಿ ಪ್ರಾರಂಭಕ್ಕೆ ಅಗತ್ಯ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ರಾಜೀವ್‌ಗಾಂದಿ ಆಶ್ರಯ ಯೋಜನೆಯಡಿ ಮನೆಗಳಿಗಾಗಿ ಹಣ ಪಾವತಿ ಮಾಡಿ 10 ವರ್ಷಗಳೇ ಕಳೆಯುತ್ತಾ ಬಂದರೂ ಇದುವರೆಗೂ ಮನೆಗಳ ಹಂಚಿಕೆ ನಡೆಯದೆ ಇರುವುದು ಖಂಡನೀಯ. ಪೌರಾಯುಕ್ತರು, ಅಧ್ಯಕ್ಷರು ಈ ಕೂಡಲೆ ಪಕ್ಷಪಾತ ಧೋರಣೆ ನಿಲ್ಲಿಸಿ ನಗರದ ಅಭಿವೃದ್ಧಿಯಲ್ಲಿ ಸಮಾನವಾಗಿ ಕೆಲಸ ಮಾಡಬೇಕು ಎಂದರು.

ಪ್ರತಿಭಟನೆಯಲ್ಲಿ ನಗರಸಭೆ ಸದಸ್ಯರಾದ ಎನ್.ಮಂಜುಳಾ, ಜಯಮ್ಮ, ಕನ್ನಡ ಪಕ್ಷದ ನಗರ ಘಟಕದ ಅಧ್ಯಕ್ಷ ಜಿ.ಮುನಿರಾಜ್, ಮುಖಂಡರಾದ ಡಿ.ವೆಂಕಟೇಶ್,ಮಂಜುನಾಥ್,ವಸಂತ್ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.