ADVERTISEMENT

ಬೆಸ್ಕಾಂ ಕಚೇರಿಗೆ ನೇಕಾರರ ಮುತ್ತಿಗೆ

ಅನಿಯಮಿತ ವಿದ್ಯುತ್ ಕಡಿತಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2013, 19:59 IST
Last Updated 20 ಡಿಸೆಂಬರ್ 2013, 19:59 IST

ದೊಡ್ಡಬಳ್ಳಾಪುರ:  ನಗರ ಮತ್ತು ತಾಲ್ಲೂಕಿನಲ್ಲಿ ಅನಿಯಮಿತವಾಗಿ ವಿದ್ಯುತ್‌್ ಕಡಿತಗೊಳಿಸುತ್ತಿರುವುದನ್ನು ವಿರೋಧಿಸಿ ನೇಕಾರರ ಹೋರಾಟ ಸಮಿತಿ ವತಿಯಿಂದ ಶುಕ್ರವಾರ ನಗರದ ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು.

ಕನಿಷ್ಟ ೧೫ ಮೆಗಾವ್ಯಾಟ್ ವಿದ್ಯುತ್ ತಾಲ್ಲೂಕಿಗೆ ಸರಬರಾಜು ಮಾಡಬೇಕು. ನಿರಂತರ ವಿದ್ಯುತ್ ಸರಬರಾಜು ಮಾಡುವ ಭರವಸೆಯನ್ನು ಹಿರಿಯ ಬೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಬಂದು ಭರವಸೆ ನೀಡುವವರೆಗೆ ಇಲ್ಲಿಂದ ಕದಲುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ನೇಕಾರರ ಹೋರಾಟ ಸಮಿತಿ  ಅಧ್ಯಕ್ಷ ಬಿ.ಜಿ.ಹೇಮಂತರಾಜು, ಅನಿಯಮಿತ ಲೋಡ್ ಶೆಡ್ಡಿಂಗ್‌ನಿಂದ ವಿದ್ಯುತ್ತನ್ನೇ ನಂಬಿ ಬದುಕುತ್ತಿರುವ ನೇಕಾರರ ಬದುಕು ದುಸ್ತರವಾಗುತ್ತಿದೆ. ಆದರೆ ದೊಡ್ಡ ಕೈಗಾರಿಕೆಗಳಿಗೆ ಹಾಗೂ ನಗರ ಪ್ರದೇಶಗಳಿಗೆ ವಿದ್ಯುತ್ ಹೆಚ್ಚಿಗೆ ಸರಬರಾಜಾಗುತ್ತಿದೆ. ವಿದ್ಯುತ್ ಬೇಡಿಕೆ ದಿನೇ ದಿನೇ ಹೆಚ್ಚುತ್ತಲಿದ್ದರೂ, ವಿದ್ಯುತ್ ತಯಾರಿಕೆ ಮಾಡುವ ಯಾವ ಹೊಸ ಯೋಜನೆಗಳನ್ನು ಸರ್ಕಾರ ರೂಪಿಸಿಲ್ಲ.  ಬಹುರಾಷ್ಟ್ರೀಯ ಕಂಪೆನಿಗಳಿಗೆ ಮಣೆ ಹಾಕುವ ಸರ್ಕಾರ ವಿದ್ಯುತ್ ಹಂಚಿಕೆಯಲ್ಲಿ ಪ್ರಾದೇಶಿಕ ಅಸಮತೋಲನ ಮಾಡುತ್ತಿದೆ. ಗೃಹ ಕೈಗಾರಿಕೆಗಳನ್ನು ನಿರ್ಲಕ್ಷಿಸುತ್ತಿದೆ. ಈ ತಾರತಮ್ಯವನ್ನು ನಿವಾರಿಸಿ ಗುಡಿ ಕೈಗಾರಿಕೆಯಾದ ನೇಕಾರಿಕೆಗೆ ಆದ್ಯತೆಯ ಮೇರೆಗೆ ಹೆಚ್ಚಿನ ವಿದ್ಯುತ್ ನೀಡಬೇಕು ಎಂದು ಒತ್ತಾಯಿಸಿದರು.

ಬಿಲ್ ಕಟ್ಟದಿದ್ದರೆ ಮಾರನೇ ದಿನವೇ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಇಲಾಖೆ ವಿದ್ಯುತ್ ಸರಬರಾಜು ಮಾಡಲು ಕ್ರಮ ಕೈಗೊಳ್ಳುವುದಿಲ್ಲ. ಒಂದು ವೇಳೆ ವಿದ್ಯುತ್ ಲೋಡ್ ಶೆಡ್ಡಿಂಗ್ ಅನಿವಾರ್ಯ ಆದರೆ ನಿಗದಿತ ವೇಳೆ ಗೊತ್ತು ಪಡಿಸಿ ವಿದ್ಯುತ್ ಕಡಿತಗೊಳಿಸಬೇಕು. ಆದರೆ ಈ ಬಗ್ಗೆ ಅಧಿಕಾರಿಗಳು ಜವಾಬ್ದಾರಿಯಿಂದ ನಡೆದುಕೊಳ್ಳದೇ ಮೂಗಿಗೆ ತುಪ್ಪ ಸವರುತ್ತಿದ್ದಾರೆ. ಈ ಕೂಡಲೇ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ಬೆಸ್ಕಾಂ ಕಾರ್ಯಪಾಲಕ ಎಂಜಿನಿಯರ್ ಮೋಹನ್ ಕುಮಾರ್, ಶ್ರೀನಿವಾಸ ಮೂರ್ತಿ, ಬೇಸಿಗೆ ಕಾಲಿಡುತ್ತಿರುವ  ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವಿದ್ಯುತ್  ಉತ್ಪಾದನೆ ಕಡಿಮೆಯಾಗಿದೆ. ಈ ನಿಟ್ಟಿನಲ್ಲಿ ದೊಡ್ಡಬಳ್ಳಾಪುರ ಸೇರಿದಂತೆ ೧೨ ವಿತರಣಾ ಕೇಂದ್ರಗಳಿಗೆ ದಿನಕ್ಕೆ ೮೦ ಮೆಗಾವ್ಯಾಟ್ ವಿದ್ಯುತ್ ಒದಗಿಸುವಂತೆ ಮೇಲಾಧಿಕಾರಿಗಳಿಂದ ಸೂಚನೆ ಬಂದಿದೆ. ತಾಲ್ಲೂಕಿಗೆ ಪ್ರತಿದಿನ ೧೧ ಮೆಗಾವ್ಯಾಟ್ ವಿದ್ಯುತ್ ನೀಡಬೇಕು ಎಂದು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದು ಕಾರ್ಯಗತವಾಗಲಿದೆ ಎಂದು ಹೇಳಿದರು.

ತಾಲ್ಲೂಕಿನ ಬೆಸ್ಕಾಂ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಬಿ.ಟಿ.ಗಂಗರಾಜು ಮಾತನಾಡಿ, ಕರೇನಹಳ್ಳಿ ಮತ್ತಿತರೆ ಪ್ರದೇಶಗಳಲ್ಲಿ ವಿದ್ಯುತ್ ಮಗ್ಗಗಳಿರುವ ಪ್ರದೇಶಕ್ಕೆ ಫೀಡರ್‌ಗಳಿಂದ ಹೊಸ ಸಂಪರ್ಕ ವ್ಯವಸ್ಥೆ ಮಾಡಲಾಗುತ್ತಿದೆ. ಇಲಾಖೆಯ ಸೂಚನೆಯಂತೆ ನಾವು ನಡೆಯಬೇಕಿದ್ದು, ವಿದ್ಯುತ್ ಲೋಡ್ ಶೆಡ್ಡಿಂಗ್ ಅನಿವಾರ್ಯವಾಗಲಿದೆ. ಈ ನಿಟ್ಟಿನಲ್ಲಿ ನಿಗದಿತ ಸಮಯಕ್ಕೆ ವಿದ್ಯುತ್ ಲೋಡ್ ಶೆಡ್ಡಿಂಗ್ ಮಾಡುವ ಬಗ್ಗೆ ಸೋಮವಾರದಿಂದ  ಪ್ರಕಟಣೆ ನೀಡಲಾಗುವುದು ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ನೇಕಾರರ ಹೋರಾಟ ಸಮಿತಿ ಕಾರ್ಯದರ್ಶಿ ರಾಘವೇಂದ್ರ, ಉಪಾಧ್ಯಕ್ಷರಾದ ಸತ್ಯನಾರಾಯಣ್, ಕೆ.ಸಿ.ಗೊಪಾಲ್, ಡಿವೈಎಪ್‌ಐ  ತಾಲ್ಲೂಕು ಅಧ್ಯಕ್ಷ ಸಿ.ಅಶ್ವತ್ಥ್, ಪವರ್ ಲೂಂ ಕಾರ್ಮಿಕರ ಸಂಘದ ಪಿ.ಎ.ವೆಂಕಟೇಶ್,  ರಘು ಸೇರಿದಂತೆ ನೂರಾರು ನೇಕಾರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.