ADVERTISEMENT

ಮತದಾನ ಜಾಗೃತಿಗೆ ರಂಗೋಲಿ ಸ್ಪರ್ಧೆ

ಮತದಾನಕ್ಕೆ ಹಲವು ಪ್ರೇರಣೆ *‘ಸ್ವೀಪ್‌’ನತ್ತ ಯುವ ಸಮೂಹದ ಆಕರ್ಷಣೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2014, 9:31 IST
Last Updated 20 ಮಾರ್ಚ್ 2014, 9:31 IST

ರಾಮನಗರ: ಜನರನ್ನು ಮತದಾನದಲ್ಲಿ ಪಾಲ್ಗೊಂಡು ತಮ್ಮ ಜನಪ್ರತಿನಿಧಿಯನ್ನು ಆಯ್ಕೆ ಮಾಡಲು ಪ್ರೇರೇಪಿಸುವ ಸಲುವಾಗಿ ಜಿಲ್ಲಾ ‘ಸ್ವೀಪ್’ ಸಮಿತಿ ಹಮ್ಮಿಕೊಂಡಿರುವ ನಾಲ್ಕು ದಿನಗಳ ರಂಗೋಲಿ ಸ್ಪರ್ಧೆಗೆ ಜಿಲ್ಲಾ ಪಂಚಾಯತ್ ಸಿಇಒ ಹಾಗೂ ಜಿಲ್ಲಾ  ಸ್ವೀಪ್ ಸಮಿತಿ ಅಧ್ಯಕ್ಷ ಡಾ. ಎಂ.ವಿ.ವೆಂಕಟೇಶ್ ಬುಧವಾರ ಚಾಲನೆ ನೀಡಿದರು.

ನಗರದ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ಮೊದಲ ದಿನದ ರಂಗೋಲಿ ಸ್ಪರ್ಧೆ­ಯಲ್ಲಿ  16 ವಿದ್ಯಾರ್ಥಿನಿಯರು ಪಾಲ್ಗೊಂಡು ಚುನಾವಣಾ ಮತದಾನ ಮಾಡುವಂತೆ, ರಂಗೋಲಿ ಬಿಡಿಸುವ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸಿದ್ದು ವಿಶೇಷವಾಗಿತ್ತು.

‘ಅಮೂಲ್ಯವಾದ ಮತ ನೀಡಿ’, ‘ಪರಮಾಧಿಕಾರವನ್ನು ಬಳಸಿಕೊಳ್ಳಿ’, ‘ಚುನಾವಣೆಯು ಜನರಿಗೆ ರಾಜಕೀಯ ಶಿಕ್ಷಣ ನೀಡಿದರೆ ಪ್ರಜಾಪ್ರತಿನಿಧಿಗಳಿಗೆ ರಾಜಕೀಯ ತರಬೇತಿ ನೀಡುತ್ತದೆ’,  ‘ಅಮೂ­ಲ್ಯವಾದ ಒಂದು ಮತ ಬಂದೂಕಿನ 7 ಗುಂಡುಗಳಿಗೆ ಸಮ’... ಇತ್ಯಾದಿ ಘೋಷಣೆಗಳು ರಂಗೋಲಿ ಸ್ಪರ್ಧೆಯಲ್ಲಿ ವಿದ್ಯಾರ್ಥಿನಿಯರಿಂದ ಮೂಡಿ ಬಂದವು.

ರಂಗೋಲಿ ಸ್ಪರ್ಧೆಗೆ ಚಾಲನೆ ನೀಡಿದ ಸಿಇಓ ಡಾ. ಎಂ.ವಿ.ವೆಂಕಟೇಶ್, ಚುನಾವಣೆಯಲ್ಲಿ ಯುವ ಸಮು­ದಾಯ ಸಕ್ರಿಯವಾಗಿ ಪಾಲ್ಗೊಂಡು ಇತರ ಮತದಾರರು ಪಾಲ್ಗೊಳ್ಳುವಂತೆ ಪ್ರೇರೇಪಿಸಲು ರಂಗೋಲಿ ಸ್ಪರ್ಧೆ ಸೇರಿದಂತೆ ಹಲವಾರು ಸ್ಪರ್ಧಾತ್ಮಕ ಕಾರ್ಯ­ಕ್ರಮಗಳನ್ನು ಜಿಲ್ಲಾಡಳಿತ ಹಾಗೂ ಸ್ವೀಪ್ ಸಮಿತಿಯಿಂದ ಆಯೋಜಿಸಲಾಗುತ್ತಿದೆ ಎಂದರು.

ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಶಾಂತಿನಿಕೇತನ ಕಾಲೇಜಿನ ಅಂತಿಮ ಬಿಸಿಎ ವಿದ್ಯಾರ್ಥಿನಿ ಗಂಗಾ ಮಾತ­ನಾಡಿ, ‘ನಾನು ಇದೇ ಪ್ರಥಮ ಬಾರಿಗೆ ಮತದಾನ ಮಾಡುವ ಅವ­ಕಾಶ ಪಡೆದಿರುವೆ. ರಂಗೋಲಿಯ ಮೂಲಕ ಹಲವು ಜನರಿಗೆ ಅರಿವು ಮೂಡಿಸು­ತ್ತಿರುವುದರಿಂದ ರೋಮಾಂ­ಚನವಾ­ಗಿದೆ’ ಎಂದರು.

ವಿದ್ಯಾರ್ಥಿನಿ ಕೆ.ದಿವ್ಯಾ ಮಾತನಾಡಿ, ಉತ್ತಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವುದರಿಂದ ನಮ್ಮ ದೇಶ ಅಬಿವೃದ್ಧಿಯತ್ತ ಮುನ್ನಡೆಯಲಿದೆ ಎಂದು ಹೇಳಿದರು.

ಬಹುಮಾನ ವಿತರಣೆ: ರಂಗೋಲಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ ಗಂಗಾ, ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿನಿ ಕೆ.ರಾಧಾ, ತೃತೀಯ ಸ್ಥಾನ ಪಡೆದ ವಿದ್ಯಾರ್ಥಿ­ನಿಯರಾದ ಕೆ.ದಿವ್ಯಾ, ಎನ್‌. ಪ್ರತಿಭಾ, ಜಿ.ಆರ್‌.ಮಮತಾ ಅವರಿಗೆ ಸಿಇಒ ಅವರು ಬಹುಮಾನ ಮತ್ತು ಪ್ರಶಂಸಾ ಪತ್ರ ವಿತರಿಸಿದರು. ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ರಂಗೇಗೌಡ ಇದ್ದರು.

ಮುಕ್ತ ಅವಕಾಶ
ರಂಗೋಲಿ ಸ್ಪರ್ಧೆಯು ಇದೇ 23ರವರೆಗೆ ಪ್ರತಿ ದಿನ ನಗರದ ಡಾ. ಬಿ.ಆರ್.ಅಂಬೇಡ್ಕರ್ ಭವನ ಹಾಗೂ ಗುರುಭವನದಲ್ಲಿ ನಡೆಯಲಿದೆ. ಚುನಾವಣೆ ಹಾಗೂ ಮತದಾನದ ಕುರಿತು ರಂಗೋಲಿ ಮೂಲಕ ಮಾಹಿತಿ ನೀಡಲು ಇಚ್ಚಿಸುವವರು ಇದರಲ್ಲಿ ಪಾಲ್ಗೊಳ್ಳಬಹುದು.

ಪ್ರತಿದಿನ ಬೆಳಿಗ್ಗೆ 11- ಗಂಟೆಗೆ ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿ ವೇದಮೂರ್ತಿ  (ದೂರವಾಣಿ ಸಂ: 9900843509) ಅವರಲ್ಲಿ ಹೆಸರು ನೋಂದಾಯಿಸಿಕೊಂಡು ಸ್ಪರ್ಧೆಗೆ ನೇರವಾಗಿ ಭಾಗವಹಿಸಬಹುದಾಗಿದೆ ಎಂದು ಜಿ.ಪಂ ಸಿಇಓ ಡಾ.ಎಂ.ವಿ.ವೆಂಕಟೇಶ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT