ADVERTISEMENT

ಮೂರು ವರ್ಷ ಕಳೆದರೂ ಬಳಕೆಗೆ ಬಾರದ ಕೊಳವೆ ಬಾವಿ!

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2012, 19:30 IST
Last Updated 3 ಫೆಬ್ರುವರಿ 2012, 19:30 IST
ಮೂರು ವರ್ಷ ಕಳೆದರೂ ಬಳಕೆಗೆ ಬಾರದ ಕೊಳವೆ ಬಾವಿ!
ಮೂರು ವರ್ಷ ಕಳೆದರೂ ಬಳಕೆಗೆ ಬಾರದ ಕೊಳವೆ ಬಾವಿ!   

ದೇವನಹಳ್ಳಿ: ಬೇಸಿಗೆ ಆರಂಭಕ್ಕೂ ಮುನ್ನವೇ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಕೆಲವೆಡೆ ತಲೆದೋರಿದ್ದರೆ, ಮೂರು ವರ್ಷಗಳ ಹಿಂದೆ ಜಿಲ್ಲಾ ಪಂಚಾಯಿತಿಯಿಂದ ನೀರಿನ ಸಮಸ್ಯೆ ನಿವಾರಣೆಗಾಗಿ ತೆಗೆಸಿದ ಕೊಳವೆ ಬಾವಿಯನ್ನು ಸಾರ್ವಜನಿಕ ಉಪಯೋಗಕ್ಕೆಬಾರದಂತೆ ನಿರ್ಲಕ್ಷಿಸಿರುವ ಪ್ರಸಂಗ ತಾಲ್ಲೂಕಿನ ಬಿದಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾವಕನಹಳ್ಳಿ ಗ್ರಾಮದಲ್ಲಿ ನಡೆದಿದೆ. 

ಪಟ್ಟಣದಿಂದ ಕೇವಲ 3.ಕಿ.ಮೀ ದೂರದ ಸಾವಕನಹಳ್ಳಿಯಲ್ಲಿ 2008-09ನೇ ಸಾಲಿನ ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ಕೊಳವೆ ಬಾವಿಯನ್ನು ತೆಗೆಸಲಾಗಿತ್ತು. 1000 ಅಡಿ ಆಳದ ಬಾವಿಯಲ್ಲಿ ಸಮೃದ್ಧವಾಗಿ ನೀರಿದೆ.

ಆದರೆ ಕೊಳವೆ ಬಾವಿಗೆ ಸಂಪರ್ಕ ಕಲ್ಪಿಸುವ ವಿಚಾರ ಮಾತ್ರ ನೆನೆಗುದಿಗೆ ಬಿದ್ದಿವೆ.  ಕೊಳವೆ ಬಾವಿಗೆ ಮೋಟಾರ್ ಅಳವಡಿಸಲಾಗಿದೆ, ವಿದ್ಯುತ್ ಸರಬರಾಜಿಗಾಗಿ 25 ಕೆ. ವಿ ವಿದ್ಯುತ್ ಪರಿವರ್ತಕ ಅಳವಡಿಸಲಾಗಿದೆ. ಅಲ್ಲದೆ ನೀರು ಸಂಗ್ರಹದ ಸಿಮೆಂಟ್ ತೊಟ್ಟಿಗಳನ್ನು ತರಲಾಗಿದೆ. ವಿದ್ಯುತ್ ಸಂಪರ್ಕ ಸೇರಿದಂತೆ ಎಲ್ಲಾ ರೀತಿಯ ಕೆಲಸವಾಗಿದೆ, ಆದರೆ ಸಂಪರ್ಕ ಕಲ್ಪಿಸಿ ಗ್ರಾಮಕ್ಕೆ ಕುಡಿಯುವ ನೀರು ಸರಬರಾಜು ಮಾಡಲು ಜಿಲ್ಲಾ ಪಂಚಾಯಿತಿ ಮುಂದಾಗಿಲ್ಲ ಎಂದು ಗ್ರಾಮದ ಮುಖಂಡರಾದ ಗೊಪಾಲಸ್ವಾಮಿ, ದೇವರಾಜ್, ಕರ್ನಾಟಕ ದಲಿತ ವೇದಿಕೆ ರಾಜ್ಯ ಸಂಘಟನಾ ಕಾರ್ಯದರ್ಶಿ ದೊಡ್ಡರಂಗಪ್ಪ ಆರೋಪಿಸುತ್ತಾರೆ.

ಗ್ರಾಮದಲ್ಲಿ 2000 ಜನಸಂಖ್ಯೆ ಇದ್ದು, ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವುದು, ಒಂದೇ ಕೊಳವೆ ಬಾವಿ ಮಾತ್ರ. ಆದ್ದರಿಂದ ಐದಾರು ದಿನಗಳಿಗೆ ಒಮ್ಮೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಜಿಲ್ಲಾ ಪಂಚಾಯಿತಿ ತೆಗೆಸಿರುವ ಕೊಳವೆ ಬಾವಿಯನ್ನು ಸಾರ್ವಜನಿಕರಿಗೆ ಅನುಕೂಲಕ್ಕೆ ಮುಕ್ತಗೊಳಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸುತ್ತಾರೆ.  ಈ ಸಂಬಂಧ ಜನ ಪ್ರತಿನಿಧಿಗಳು, ಅಧಿಕಾರಿಗಳು ಗಮನ ಹರಿಸಬೇಕು ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.