ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಅಧಿಕಾರಿಯೂ ಅದ ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್ ಅವರು ಬುಧವಾರ ಅಧಿಸೂಚನೆ ಹೊರಡಿಸಿದ್ದು, ಮೊದಲ ದಿನ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ.
20ರಂದು ಕಾಂಗ್ರೆಸ್ ನಾಮಪತ್ರ: ಹಾಲಿ ಸಂಸದ ಹಾಗೂ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಅವರು ಗುರುವಾರ (ಮಾ.20)ಉಮೇದುವಾರಿಕೆ ಸಲ್ಲಿಸಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ತಿಳಿಸಿದೆ.
ಸುರೇಶ್ ಅವರು ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ಬೆಳಿಗ್ಗೆ 9 ಗಂಟೆಗೆ ನಗರದ ಶಕ್ತಿ ದೇವತೆ ಚಾಮುಂಡೇಶ್ವರಿ ದೇವಿಯ ದೇವಾಲಯಕ್ಕೆ ಹೋಗಿ ಪೂಜೆ ನೆರವೇರಿಸಲಿದ್ದಾರೆ. ಬಳಿಕ ಚರ್ಚ್ ಮತ್ತು ಮಸೀದಿಗೆ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿ ಚುನಾವಣಾ ಅಧಿಕಾರಿ ಕಚೇರಿಗೆ ಮುಖಂಡರೊಂದಿಗೆ ತೆರಳುವರು ಎಂದು ಗೊತ್ತಾಗಿದೆಜಿಲ್ಲಾ ಉಸ್ತುವಾರಿ ಸಚಿವರೂ ಆದ ಇಂಧನ ಸಚಿವ ಡಿ.ಕೆ.ಶಿವಕುಮಾರ್, ಮುಖಂಡರಾದ ಸಿ.ಎಂ.ಲಿಂಗಪ್ಪ, ಮರಿದೇವರು, ಎ.ಮಂಜುನಾಥ್, ಡಿಸಿಸಿ ಅಧ್ಯಕ್ಷ ಸೈಯದ್ ಜಿಯಾವುಲ್ಲಾ ಅವರು ಸುರೇಶ್ ಅವರೊಂದಿಗೆ ಭಾಗವಹಿಸುವರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರೂ ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ಮುಖಂಡರು ತಿಳಿಸಿದ್ದಾರೆ.
22ರಂದು ಎಎಪಿ: ಆಮ್ ಆದ್ಮಿ ಪಕ್ಷದ (ಎಎಪಿ) ಅಭ್ಯರ್ಥಿ ರವಿ ಕೃಷ್ಣಾರೆಡ್ಡಿ ಅವರು ಇದೇ 22ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಸೇರಿದಂತೆ ಹಲವು ಮುಖಂಡರು, ಎಎಪಿ ಕಾರ್ಯಕರ್ತರು ಪಾಲ್ಗೊಳ್ಳುವರು ಎಂದು ಗೊತ್ತಾಗಿದೆ.
24ರಂದು ಜೆಡಿಎಸ್: ಜೆಡಿಎಸ್ ಅಭ್ಯರ್ಥಿ ಪ್ರಭಾಕರ ರೆಡ್ಡಿ ಅವರು ಇದೇ 24ರಂದು ನಾಮಪತ್ರ ಸಲ್ಲಿಸುತ್ತಾರೆ ಎಂದು ತಿಳಿದು ಬಂದಿದೆ. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ, ಶಾಸಕ ಎಚ್.ಸಿ.ಬಾಲಕೃಷ್ಣ, ಜಿ.ಪಂ ಅಧ್ಯಕ್ಷ ಎಚ್.ಸಿ.ರಾಜಣ್ಣ, ಮುಖಂಡರಾದ ಕೆ.ರಾಜು, ರಾಜಶೇಖರ್, ಕೂಟಗಲ್ ದೇವೇಗೌಡ ಇತರರು ಭಾಗವಹಿಸುವರು ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.
26ರಂದು ಬಿಜೆಪಿ: ಉಮೇದುವಾರಿಕೆ ಸಲ್ಲಿಸುವ ಕೊನೆಯ ದಿನವಾದ ಇದೇ 26ರಂದು ಬಿಜೆಪಿ ಅಭ್ಯರ್ಥಿ ಮುನಿರಾಜುಗೌಡ ಅವರು ನಾಮಪತ್ರ ಸಲ್ಲಿಸುವರು. ಪಕ್ಷದ ಹಿರಿಯ ಮುಖಂಡರಾದ ಬಿ.ಎಸ್.ಯಡಿಯೂರಪ್ಪ, ಅನಂತಕುಮಾರ್, ಆರ್.ಅಶೋಕ ಸೇರಿದಂತೆ ಹಲವರು ಭಾಗವಹಿಸುವರು ಎಂದು ಪಕ್ಷದ ಮೂಲಗಳು ತಿಳಿಸಿವೆ. ಬಿಜೆಪಿ ಅಭ್ಯರ್ಥಿ ಗುರುವಾರವೇ (20) ನಾಮಪತ್ರ ಸಲ್ಲಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.