ADVERTISEMENT

ಯೋಜನೆಗಳಿಗೆ ತಡೆ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2011, 6:10 IST
Last Updated 17 ಮಾರ್ಚ್ 2011, 6:10 IST
ಯೋಜನೆಗಳಿಗೆ ತಡೆ: ಪ್ರತಿಭಟನೆ
ಯೋಜನೆಗಳಿಗೆ ತಡೆ: ಪ್ರತಿಭಟನೆ   

ದೊಡ್ಡಬಳ್ಳಾಪುರ: ವೃದ್ದಾಪ್ಯ ವೇತನ, ವಿಧವಾ ವೇತನ, ಅಂಗವಿಕಲರ ವೇತನ, ಸಂಧ್ಯಾ ಸುರಕ್ಷಾ ಯೋಜನೆ ಫಲಾನುಭವಿಗಳ ಪರಿಶೀಲನೆ ನೆಪದಲ್ಲಿ ಈ ಯೋಜನೆಗಳ ಅಡಿಯಲ್ಲಿ ಅರ್ಜಿ ಸ್ವೀಕರಿಸುವುದನ್ನು ಮತ್ತು ಹೊಸ ಮಂಜೂರಾತಿಯನ್ನು ತಡೆ ಹಿಡಿದಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ  ಕನ್ನಡ ಪಕ್ಷದ ನೇತೃತ್ವದಲ್ಲಿ ತಾಲ್ಲೂಕು ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಲಾಯಿತು.

ಕನ್ನಡ ಪಕ್ಷದ ಅಧ್ಯಕ್ಷ ಎಂ.ಸಂಜೀವನಾಯಕ್, ಪ್ರಧಾನ ಕಾರ್ಯದರ್ಶಿ ಡಿ.ಪಿ.ಆಂಜನೇಯ, ನಗರಸಭಾ ಸದಸ್ಯೆ ಮಂಜುಳಾ, ಜಯಮ್ಮ, ಉಪಾಧ್ಯಕ್ಷ ಪರಮೇಶ್,ಮಂಜುನಾಥ್ ಇತರರು ಮಾತನಾಡಿ, ರಾಜ್ಯದ ಬಿಜೆಪಿ ಸರ್ಕಾರ ವೃದ್ದಾಪ್ಯ ವೇತನ, ವಿಧವಾ ವೇತನ, ಅಂಗವಿಕಲರ ವೇತನ, ಸಂಧ್ಯಾ ಸುರಕ್ಷಾ ಯೋಜನೆ ಫಲಾನುಭವಿಗಳ ಪರಿಶೀಲನೆ ನೆಪದಲ್ಲಿ ಈ ಯೋಜನೆಗಳಡಿ ಅರ್ಜಿ ಸ್ವೀಕರಿಸುವುದನ್ನು ಮತ್ತು ಹೊಸ ಮಂಜೂರಾತಿಯನ್ನು ತಡೆ ಹಿಡಿದಿರುವುದು ಖಂಡನೀಯ. ಯೋಜನೆಗಳ ಫಲಾನುಭವಿಗಳು ಈಗಾಗಲೇ, ಕಚೇರಿಗಳಿಗೆ ಅಲೆದು ಸುಸ್ತಾಗಿದ್ದಾರೆ. ಅರ್ಹ ಫಲಾನುಭವಿಗಳಿಗೆ ಸೂಕ್ತ ಸಮಯದಲ್ಲಿ ವೇತನ ಪಾವತಿಸದೇ, ಅರ್ಜಿ ಹಾಕಿದವರನ್ನೂ ವರ್ಷಗಟ್ಟಲೇ ತಿರುಗಿಸಲಾಗುತ್ತಿದೆ.

ಈ ಕೂಡಲೇ ಸರ್ಕಾರ ಯೋಜನೆಗಳಿಗೆ ತಡೆ ನೀಡಿರುವ ಆದೇಶವನ್ನು ಹಿಂಪಡೆದು, ಅರ್ಹ ಫಲಾನುಭವಿಗಳಿಗೆ ವೇತನ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.ವೃದ್ದಾಪ್ಯ ವೇತನ ಪಡೆಯುತ್ತಿರುವ ಜಂಗಮಪ್ಪ, ಅಂಗವಿಕಲ ನಾರಾಯಣ, ತಮ್ಮ ಸಮಸ್ಯೆಗಳನ್ನು ತೋಡಿಕೊಂಡರು. ಈ ಬಗ್ಗೆ ಪ್ರತಿಕ್ರಿಯಿಸಿದ ಕಂದಾಯ ಇಲಾಖೆ ಅಧಿಕಾರಿಗಳು ಅನರ್ಹರು, ಸ್ಥಿತಿವಂತರು ಯೋಜನೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಈ ಕುರಿತು ಪರಿಶೀಲಿಸುವ ಸಲುವಾಗಿ ಸದರಿ ಯೋಜನೆಗಳಿಂದ ಅರ್ಜಿ ಸ್ವೀಕರಿಸುವುದನ್ನು ಮತ್ತು ಹೊಸ ಮಂಜೂರಾತಿಯನ್ನು ತಡೆ ಹಿಡಿಯಲಾಗಿದೆ. ಅರ್ಹರಿಗೆ ವಿಳಂಬವಾಗುತ್ತಿರುವ ಕುರಿತು ಸಂಬಂಧಪಟ್ಟವರ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.