ADVERTISEMENT

ರೇಷ್ಮೆ:ರೆಂಬೆ ಸಾಕಾಣಿಕೆ ವಿಧಾನ ಲಾಭದಾಯಕ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2011, 19:30 IST
Last Updated 26 ಅಕ್ಟೋಬರ್ 2011, 19:30 IST

ದೊಡ್ಡಬಳ್ಳಾಪುರ: ರೇಷ್ಮೆ ಹುಳು ಸಾಕಾಣಿಕೆಯಲ್ಲಿ ಇತ್ತೀಚೆಗೆ ಅನೇಕ ವೈಜ್ಞಾನಿಕ ವಿಧಾನಗಳು ಪರಿಚಯವಾಗುತ್ತಿದ್ದು, ಇದರಲ್ಲಿ ಶೂಟ್ ರೈವಿಂಗ್ (ರೆಂಬೆ ಸಾಕಾಣಿಕೆ ಪದ್ಧತಿ) ವಿಧಾನ ಅತ್ಯಂತ ಸರಳ ಹಾಗೂ ಲಾಭದಾಯಕ.

ಈ ವಿಧಾನದಲ್ಲಿ ಮೂರು ಅಂತಸ್ತುಗಳಲ್ಲಿ ರೇಷ್ಮೆ ಹುಳು ಸಾಕಾಣಿಕೆಗೆ ಅನುಕೂಲ ಇದೆ. ಪ್ರತಿ ದಿನವು ಹುಳುಗಳ ಹಿಕ್ಕೆ ಬದಲಿಸುವ ಕಷ್ಟವಿಲ್ಲ. ಒಂದು ಬೆಳೆಗೆ ಒಮ್ಮೆ ಮಾತ್ರ ಸ್ವಚ್ಛಗೊಳಿಸಿದರೆ ಸಾಕು. ಅಲ್ಲದೆ ಸೊಪ್ಪು ಕತ್ತರಿಸದೆ ರೆಕ್ಕೆಗಳನ್ನು ಹುಳುಗಳ ಮೇಲೆ ಹಾಸುವುದರಿಂದ ಶ್ರಮ ಮತ್ತು ಕಾರ್ಮಿಕರ ಉಳಿತಾಯವಾಗಲಿದೆ.

ದೊಡ್ಡಬಳ್ಳಾಪುರ ತಾಲ್ಲೂಕು ಗಂಗಸಂದ್ರ ಗ್ರಾಮದ ರೈತ ಬಾಲಚಂದ್ರ ಈ ವಿಧಾನದಲ್ಲಿ ರೇಷ್ಮೆ ಬೆಳೆದು ಯಶಸ್ವಿಯಾಗಿದ್ದಾರೆ. ಕಳೆದ ಆರು ವರ್ಷ ಗಳಿಂದ ರೇಷ್ಮೆ ಹುಳು ಸಾಕಾಣಿಕೆಯಲ್ಲಿ ಹಲವು ವಿಧಾನಗಳನ್ನು ಪರಿಶೀಲಿಸಿ ಶೂಟ್‌ರೈವಿಂಗ್ ವಿಧಾನವೇ ಅತ್ಯುತ್ತಮ ಎಂದು ಕಂಡುಕೊಂಡಿದ್ದಾರೆ. ಈ ವಿಧಾನದಲ್ಲಿ 150 ರೇಷ್ಮೆ ಮೊಟ್ಟೆ ಹುಳು ಸಾಕಾಣಿಕೆಗೆ ಮೂರು ಜನ ಕೆಲಸಗಾರರು ಸಾಕು. ರೋಗ ಬಾಧೆಯೂ ಕಡಿಮೆ. ಒಂದು ಬೆಳೆಗೆ  90 ರಿಂದ 110 ಕೆಜಿ ಗೂಡು ಸಿಗುತ್ತದೆ. ವರ್ಷಕ್ಕೆ 10 ಬೆಳೆ ಪಡೆಯಲು ಸಾಧ್ಯ.

ಸಾವಯವ ಗೊಬ್ಬರ:
  ರೇಷ್ಮೆಹುಳುಗಳ ಜೀವನಪದ್ಧತಿಯನ್ನು ಸೂಕ್ಷ್ಮವಾಗಿ ಗಮನಿಸಿರುವ ಬಾಲಚಂದ್ರ, ಹಿಪ್ಪು ನೇರಳೆ ಸೊಪ್ಪು ಬೆಳೆಯುವ ವಿಧಾನವನ್ನು ತಮ್ಮದೇ ಆದ ರೀತಿಯಲ್ಲಿ ಅಭಿವೃದ್ಧಿಪಡಿಸಿಕೊಂಡಿದ್ದಾರೆ.
ಕೆರೆ ಮಣ್ಣು, ಕೊಟ್ಟಿಗೆ ಗೊಬ್ಬರ ಹಾಗೂ ಎರೆ ಹುಳುಗೊಬ್ಬರ ಬಳಕೆಗೆ ಹೆಚ್ಚು ಒತ್ತು ನೀಡಿದ್ದಾರೆ. ಎರೆಹುಳು ಗೊಬ್ಬರ ತಯಾರಿಕೆಗಾಗಿ ವೈಜ್ಞಾನಿಕ ವಿಧಾನದ ತೊಟ್ಟಿ ನಿರ್ಮಿಸಿಕೊಂಡಿದ್ದಾರೆ.

ರೇಷ್ಮೆ ಹುಳುಗಳ ಹಿಕ್ಕೆ ಸೇರಿದಂತೆ ತೋಟದ ಸುತ್ತ ದೊರೆಯುವ ಹಸಿರೆಲೆಗಳನ್ನು ಬಳಸಿ ಎರೆಹುಳು ಗೊಬ್ಬರ ತಯಾರಿಸಿಕೊಳ್ಳುತ್ತಾರೆ.

ಹುಳು ಚಾಕಿ:  ರೇಷ್ಮೆ ಕೃಷಿಯಲ್ಲಿ ಚಾಕಿ ಕೇಂದ್ರದಿಂದಲೇ ಹೆಚ್ಚು ಲಾಭ ಎನ್ನುವುದು ಬಾಲಚಂದ್ರ ಅವರ ಅಭಿಮತ. ಈ ಕೇಂದ್ರದಲ್ಲಿ ವರ್ಷವಿಡೀ ಕೆಲಸ ಇರುತ್ತದೆ. 100 ಮೊಟ್ಟೆ ಹುಳುವನ್ನು ಒಂದು (1ನೇ ಜ್ವರ) ಹಂತದವರೆಗೆ ಸಾಕಾಣಿಕೆ ಮಾಡಿಕೊಡಲು ಒಂದು ಸಾವಿರ ರೂಪಾಯಿ ಪಡೆಯಲಾಗುತ್ತದೆ.

ರೇಷ್ಮೆ ಹುಳು ಸಾಕುವ ರೈತರು ಇತ್ತೀಚಿನ ದಿನಗಳಲ್ಲಿ ಚಾಕಿ ಹುಳು ಮಾಡಲು ಹಿಂಜರಿಯುತ್ತಿದ್ದಾರೆ. ಸ್ವಚ್ಛ ಕೊಠಡಿ, ಉತ್ತಮ ವಾತಾವರಣ ಇರುವ ಸ್ಥಳದಲ್ಲಿ ಮಾತ್ರ ಚಾಕಿ ಹುಳುಗಳನ್ನು ಸಾಕಾಣಿಕೆ ಮಾಡಬೇಕು. ಆಗ ಮಾತ್ರ ಉತ್ತಮ ರೇಷ್ಮೆ ಗೂಡು ಬೆಳೆಯಲು ಸಾಧ್ಯ. ಸೌಲಭ್ಯದ ಕೊರತೆಯಿಂದಾಗಿ ರೈತರು ಚಾಕಿ ಹುಳು ಸಾಕಾಣಿಕೆ ಕೇಂದ್ರಗಳಲ್ಲಿಯೇ ಚಾಕಿ ಮಾಡಿಸುವುದು ಸಾಮಾನ್ಯವಾಗಿದೆ.  ಇದರಿಂದಾಗಿ ದೊಡ್ಡಬಳ್ಳಾಪುರ ತಾಲ್ಲೂಕಿನ ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ತಜ್ಞರಿಂದ ಚಾಕಿ ಸಾಕಾಣಿಕೆ ಕುರಿತು ತರಬೇತಿ ಪಡೆದಿರುವ ಬಾಲಚಂದ್ರ ಚಾಕಿ ಸಾಕಾಣಿಕೆಯಲ್ಲೂ ಯಶಸ್ವಿಯಾಗಿದ್ದಾರೆ. ಕೇಂದ್ರ ರೇಷ್ಮೆ ಮಂಡಳಿಯಿಂದ ದೇವನಹಳ್ಳಿ, ವಿಜಯಪುರ ಹಾಗೂ ದೊಡ್ಡಬಳ್ಳಾಪುರ ತಾಲ್ಲೂಕಿನ ರೇಷ್ಮೆ ಬೆಳೆಗಾರರಿಗೆ ಅಧಿಕೃತ ಚಾಕಿ ಹುಳು ಪೂರೈಸಲು ಅಧಿಕೃತ ಪರವಾನಗಿಯನ್ನು ನೀಡಿದ್ದಾರೆ. 

ರೇಷ್ಮೆ ಜೊತೆಗಿನ ಸಂಗಾತಿ ಬೆಳೆಗಳು

ಆರು ಎಕರೆ ಭೂಮಿ ಹೊಂದಿರುವ ಬಾಲಚಂದ್ರ, ಒಂದು ಎಕರೆಯಲ್ಲಿ ಬೆಂಗಳೂರು ಬ್ಲೂ ದ್ರಾಕ್ಷಿ, ಎರಡು ಎಕರೆ ಹಿಪ್ಪುನೇರಳೆ ಸೊಪ್ಪು, ಮುಕ್ಕಾಲು ಎಕರೆಯಲ್ಲಿ ರಾಗಿ, 20 ಗುಂಟೆ ಮೇವಿನ ಜೋಳ, ಉಳಿದ ಪ್ರದೇಶದಲ್ಲಿ  ಕುರಿ ಸಾಕಾಣಿಕೆ, ಮನೆಗೆ ಅಗತ್ಯ ಇರುವಷ್ಟು ತರಕಾರಿಯನ್ನು ಬೆಳೆದುಕೊಳ್ಳುತ್ತಾರೆ.

ಇದಲ್ಲದೆ ರೇಷ್ಮೆ ಹುಳುಗಳು ಅರ್ಧ ತಿಂದು ಬಿಟ್ಟ ಹಾಗೂ ಹಿಪ್ಪುನೇರಳೆ ಸೊಪ್ಪಿನ ಕಡ್ಡಿಯ ತಳಭಾಗದಲ್ಲಿ  ಕತ್ತರಿಸಿ ಬಿಸಾಡುವ ಸೊಪ್ಪಿನ ಯೋಗ್ಯ ಬಳಕೆಗಾಗಿ ನಾಲ್ಕು ಕುರಿ, ಮೂರು ಹಸು ಸಾಕಿಕೊಂಡಿದ್ದಾರೆ. ಕುರಿಯ ಹಿಕ್ಕೆ ಮತ್ತು ಹಸುವಿನ ಸೆಗಣಿಯಿಂದ ಎರೆಗೊಬ್ಬರ ತಯಾರಿಸುತ್ತಾರೆ. ದ್ರಾಕ್ಷಿ, ಹಿಪ್ಪು ನೇರಳೆ ತೋಟಕ್ಕೆ ಹೆಚ್ಚಾಗಿ ಎರೆಹುಳು, ಕೊಟ್ಟಿಗೆ ಗೊಬ್ಬರವನ್ನೇ ಬಳಸುತ್ತಾರೆ. ನಮ್ಮದು ಸಂಪೂರ್ಣ ಸಾವಯವ ಕೃಷಿ ಅಲ್ಲ. ಆ ನಿಟ್ಟಿನಲ್ಲಿ ಮುಂದುವರೆಯುವ ಸಿದ್ಧತೆಗಳನ್ನು ಪ್ರಾರಂಭಿಸಿದ್ದೇನೆ ಎನ್ನುವುದು ಅವರ ಅಭಿಪ್ರಾಯ.                                                   
-                                                              

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.