ADVERTISEMENT

ವಿಜಯಪುರ --– ಕೆರೆಗಳ ಜಾಲಿ ಮರ ತೆರವಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2017, 3:59 IST
Last Updated 22 ಅಕ್ಟೋಬರ್ 2017, 3:59 IST

ವಿಜಯಪುರ: ಮಳೆಯಿಂದ ತಾಲ್ಲೂಕಿ ನಲ್ಲಿನ ಹಲವು ಕೆರೆಗಳು ಭರ್ತಿಯಾಗಿ ಕೋಡಿ ಹರಿದಿವೆ, ಬಹುತೇಕ ಕೆರೆಗಳಿಗೆ ಶೇ 80 ರಷ್ಟು ನೀರು ಬಂದಿವೆ. ವಿಜಯಪುರ ಸುತ್ತಮುತ್ತಲಿನ ಯಾವ ಕೆರೆಗಳಿಗೂ ನಿರೀಕ್ಷಿತ ಮಟ್ಟದಲ್ಲಿ ನೀರು ಹರಿದು ಬಂದಿಲ್ಲವೆಂಬ ಬೇಸರ ಜನತೆಯನ್ನು ಕಾಡುತ್ತಿದೆ.

ಅರಣ್ಯ ಇಲಾಖೆ ಹಾಗೂ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಕೆರೆಗಳಲ್ಲಿರುವ ಜಾಲಿ ಮರಗಳನ್ನು ತೆರವುಗೊಳಿಸಬೇಕು. ಕೆರೆಗಳಿಗೆ ಬಂದಿರುವ ಅಲ್ಪಸ್ವಲ್ಪ ನೀರು ಬೇಗನೆ ಇಂಗಿಹೋಗದಂತೆ ನೋಡಿಕೊಳ್ಳಬೇಕು ಎಂದು ಜನರು ಒತ್ತಾಯಿಸಿದ್ದಾರೆ.

ನೀಲಗಿರಿ ಮತ್ತು ಆಕೇಶಿಯಾ ಮರಗ ಳನ್ನು ತೆರವುಗೊಳಿಸಬೇಕು ಎನ್ನುವ ನಿಯಮವಿದ್ದರೂ ಅರಣ್ಯ ಇಲಾಖೆ ಗಮನ ಹರಿಸಿಲ್ಲ. ಜಾಲಿಮರಗಳು ಹೆಚ್ಚಿನ ಪ್ರಮಾಣದಲ್ಲಿ ನೀರು ಹೀರಿಕೊಂಡು ಭೂಮಿಯನ್ನು ಬರಡುಗೊಳಿಸುತ್ತವೆ. ಅವುಗಳನ್ನು ತೆರವುಗೊಳಿಸುವಂತೆ ಮಾಡಿದ್ದ ಮನವಿಗಳಿಗೆ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಮುಖಂಡ ಮಂಡಿಬೆಲೆ ದೇವರಾಜಪ್ಪ ಆರೋಪಿಸಿದ್ದಾರೆ.

ADVERTISEMENT

ಈ ಹಿಂದೆ ಬಯಲುಸೀಮೆಯ ಬಹುತೇಕ ಕೆರೆಗಳು, ಕುಂಟೆಗಳು ನೀರಿಲ್ಲದೆ ಬತ್ತಿಹೋಗಿದ್ದವು. ಅಂತರ್ಜಲದ ಮಟ್ಟ ತೀವ್ರವಾಗಿ ಕುಸಿತ ಕಂಡು ಕೊಳವೆಬಾವಿಗಳ ನೀರು 1,500 ಅಡಿಗಳಿಗೆ ಕುಸಿದಿತ್ತು. ಈಚೆಗೆ ಸುರಿದ ಮಳೆಯಿಂದಾಗಿ ತಾಲ್ಲೂಕಿನಲ್ಲಿ 10 ಕ್ಕೂ ಹೆಚ್ಚು ಕೆರೆಗಳು ತುಂಬಿ ಕೋಡಿ ಹರಿದಿವೆ. ಉಳಿದ ಕೆರೆಗಳಿಗೆ ಶೇ 20 ರಷ್ಟು ನೀರು ಬಂದಿಲ್ಲ. ರಾಜಕಾಲುವೆಗಳ ಒತ್ತುವರಿಯೇ ಇದಕ್ಕೆ ಕಾರಣ ಎಂದು ಜನಶಕ್ತಿ ರಂಗದ ತಾಲ್ಲೂಕು ಘಟಕದ ಅಧ್ಯಕ್ಷ ಬೈರೇಗೌಡ ಹೇಳಿದ್ದಾರೆ.

ಒತ್ತುವರಿಯಾಗಿರುವ ಕಾಲುವೆ ಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಚಾಲನೆ ನೀಡಿದ್ದರು. ಆದರೆ, ಒಂದು ಕಾಲುವೆಯನ್ನೂ ತೆರವುಗೊಳಿಸಲಿಲ್ಲ. ಈ ಕಾರ್ಯಕ್ರಮ ಚಾಲನೆಗಷ್ಟೇ ಸೀಮಿತವಾಗಿದೆ ಎಂದಿದ್ದಾರೆ.

ಇದರಿಂದ ಕೆರೆಗಳಿಗೆ ಬರಬೇಕಾಗಿದ್ದ ನೀರು ಕಾಲುವೆಗಳಲ್ಲಿ ಹರಿಯಲಿಲ್ಲ. ಮಳೆಯಿಂದ ಬಿದ್ದ ನೀರು ಭೂಮಿಗೆ ಇಂಗಿಹೋಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ವಿಜಯಪುರ ಹೋಬಳಿಯ ವಿಜಯಪುರ ಅಮಾನಿಕೆರೆ, ಬಿಜ್ಜವಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇರಿಗೇನ ಹಳ್ಳಿ, ಗೋಣೂರು, ಗೊಲ್ಲಹಳ್ಳಿ, ಕೋರಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಂಡಿಗಾನಹಳ್ಳಿ ಕೆರೆ, ಗುಡುವನಹಳ್ಳಿ ಕೆರೆ, ಕೋರಮಂಗಲ ಕೆರೆ, ಗೊಡ್ಲುಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭಟ್ರೇನಹಳ್ಳಿ ಕೆರೆ, ನಾರಾಯಣಪುರ ಕೆರೆ, ವೆಂಕಟಗಿರಿಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುದುಗುರ್ಕಿ ಕೆರೆ, ಗಳ ಪೈಕಿ ಯಾವ ಕೆರೆಗಳು ಪೂರ್ಣ ಪ್ರಮಾಣದಲ್ಲಿ ತುಂಬಿಲ್ಲ.

ಚನ್ನರಾಯಪಟ್ಟಣ ಹೋಬಳಿಯ ಚನ್ನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹರಳೂರು ಕೆರೆ, ತೆಲ್ಲೋಹಳ್ಳಿ ಅಗ್ರಹಾರ ಕೆರೆ, ನಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಲ್ಲಪ್ಪನಹಳ್ಳಿ ಕೆರೆ, ಗಂಗವಾರ ಚೌಡಪ್ಪನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೋಮತ್ತನಹಳ್ಳಿ ಕೆರೆ, ಗಂಗವಾರ–ಚೌಡಪ್ಪನಹಳ್ಳಿ ಕೆರೆ, ನಾಗೇನಹಳ್ಳಿಕೆರೆ, ಬೂದಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಂದ್ರಹಳ್ಳಿ ಕೆರೆ, ಯಲಿಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿನ್ನಮಂಗಲ ಕೆರೆ, ಗೋಕರೆಕೆರೆ ಸೇರಿದಂತೆ ಯಾವುದೇ ಕೆರೆಗಳು ಭರ್ತಿಯಾಗಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.