ADVERTISEMENT

ವೇಣುಗೋಪಾಲಸ್ವಾಮಿ ಲಕ್ಷದೀಪೋತ್ಸವ

ಅಂದಾಜು ₹ 2 ಕೋಟಿ ವೆಚ್ಚದಲ್ಲಿ ಅದ್ಧೂರಿ ಆಚರಣೆಗೆ ಪೂರ್ವಭಾವಿ ಸಭೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2016, 18:26 IST
Last Updated 14 ಆಗಸ್ಟ್ 2016, 18:26 IST
ದೇವನಹಳ್ಳಿ ಪಟ್ಟಣದ ಐತಿಹಾಸಿಕ ವೇಣುಗೋಪಾಲಸ್ವಾಮಿ ಲಕ್ಷ ದೀಪೋತ್ಸವ ಧಾರ್ಮಿಕ ಆಚರಣೆಗಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಶಾಸಕ ಪಿಳ್ಳಮುನಿಶಾಮಪ್ಪ, ತಹಶೀಲ್ದಾರ್‌ ಅಜಿತ್‌ಕುಮಾರ್‌ ರೈ, ಮಾಜಿ ಶಾಸಕ ಜಿ.ಚಂದ್ರಣ್ಣ  ಇದ್ದರು
ದೇವನಹಳ್ಳಿ ಪಟ್ಟಣದ ಐತಿಹಾಸಿಕ ವೇಣುಗೋಪಾಲಸ್ವಾಮಿ ಲಕ್ಷ ದೀಪೋತ್ಸವ ಧಾರ್ಮಿಕ ಆಚರಣೆಗಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಶಾಸಕ ಪಿಳ್ಳಮುನಿಶಾಮಪ್ಪ, ತಹಶೀಲ್ದಾರ್‌ ಅಜಿತ್‌ಕುಮಾರ್‌ ರೈ, ಮಾಜಿ ಶಾಸಕ ಜಿ.ಚಂದ್ರಣ್ಣ ಇದ್ದರು   

ದೇವನಹಳ್ಳಿ: ಪಟ್ಟಣದ ಐತಿಹಾಸಿಕ ವೇಣುಗೋಪಾಲಸ್ವಾಮಿ ಲಕ್ಷ ದೀಪೋತ್ಸವ ಧಾರ್ಮಿಕ ಆಚರಣೆಗಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ₹ 2 ಕೋಟಿ ಅಂದಾಜು ವೆಚ್ಚ ಆಗಬಹುದೆಂದು ಸರ್ವ ಸಮ್ಮತವಾಗಿ ಸಭೆ ನಿರ್ಣಯಿಸಿತು.

ಪಟ್ಟಣದ ಐತಿಹಾಸಿಕ ವೇಣುಗೋಪಾಲಸ್ವಾಮಿ ದೇವಾಲಯ ಆವರಣದಲ್ಲಿ ನಡೆದ ಸಭೆಯಲ್ಲಿ ವಿವಿಧ ಪಕ್ಷಗಳ ಮುಖಂಡರು, ಪ್ರಗತಿಪರ ಸಂಘಟನೆ ಪದಾಧಿಕಾರಿಗಳು, ಪುರಸಭೆ ಸದಸ್ಯರು ಹಾಜರಿದ್ದರು.

‘ಬಯಾಪ’ ಮಾಜಿ ಅಧ್ಯಕ್ಷ ಅಶ್ವಥನಾರಾಯಣ ಮಾತನಾಡಿ 850 ವರ್ಷಗಳ ಇತಿಹಾಸವಿರುವ  ವೇಣುಗೋಪಾಲಸ್ವಾಮಿ ದೇವಾಲಯವನ್ನು ಬೆಂಗಳೂರು ನಾಡಪ್ರಭು ಕೆಂಪೇಗೌಡರ ವಂಶಜ ತಾಲ್ಲೂಕಿನ ಆವತಿ ನಾಡಪ್ರಭು ರಣಭೈರೇಗೌಡರ ಮಗ ದೇವಣ್ಣಗೌಡರಿಂದ ಅಭಿವೃದ್ಧಿಗೊಂಡು ಪ್ರತಿಷ್ಠಾಪಿತ ವಾದ ಐತಿಹಾಸಿಕ ಪರಂಪರೆ ಇದೆ ಎಂದರು.

ದೇವಣಾಪುರ, ದೇವನದೊಡ್ಡಿ ನಂತರ ದೇವನಹಳ್ಳಿ ಎಂದು ಇತಿಹಾಸದಲ್ಲಿ ಉಲ್ಲೇಖಗೊಂಡಿರುವ ತಾಲ್ಲೂಕಿನಲ್ಲಿ ಧಾರ್ಮಿಕ ಆಚರಣೆಗೆ ಕೊರತೆ ಇರಲಿಲ್ಲ. ಇಡಿ ತಾಲ್ಲೂಕಿನ ಆರಾಧ್ಯ ದೈವದ ಲಕ್ಷದೀಪೋತ್ಸವ ಐತಿಹಾಸಿಕ ಮತ್ತು ಸಾರ್ಥಕವಾಗಿ ಶಾಶ್ವತವಾಗಿ ಉಳಿಯುವಂತಾಗಬೇಕು. ಒಂದು ಸಮುದಾಯಕ್ಕೆ ಸೀಮಿತವಾಗದೆ ಎಲ್ಲಾರು ಪರಸ್ಪರ ತನು ಮನ ಧನದಿಂದ ಕೈಜೋಡಿಸಬೇಕು ಎಂದರು.

ಬ್ಲಾಕ್‌ ಕಾಂಗ್ರೆಸ್‌  ಮಾಜಿ ಅಧ್ಯಕ್ಷ ಸಿ.ಜಗನ್ನಾಥ್‌ ಮಾತನಾಡಿ, ಕಳೆದ 18 ವರ್ಷಗಳ ಹಿಂದೆ ಲಕ್ಷ ದೀಪೋತ್ಸವದ ಒಟ್ಟಾರೆ ವೆಚ್ಚ ₹ 28 ಲಕ್ಷವಾಗಿತ್ತು . ಪ್ರಸ್ತುತ ಪ್ರತಿಯೊಂದು ವಸ್ತುಗಳ ಬೆಲೆ ಏರಿಕೆಯಾಗಿದೆ. ಪಟ್ಟಣದ ಹತ್ತಾರು ದೇವಾಲಯಗಳು ಸುಣ್ಣಬಣ್ಣ ಬಳಿಯಬೇಕು.

ಕನಿಷ್ಠ ಐದಾರು ದಿನ ಎಲ್ಲ  ದೇವಾಲಯಗಳಿಗೆ ವಿದ್ಯುತ್‌ ದೀಪ ಅಲಂಕಾರ ಮಾಡಬೇಕು. ಲಕ್ಷಾಂತರ ಭಕ್ತಾದಿಗಳು ಬರುವುದರಿಂದ ಅನ್ನ ದಾಸೋಹ ವ್ಯವಸ್ಥೆ, ಕುಡಿಯುವ ನೀರು, ಆಂಬುಲೆನ್ಸ್‌, ಪೊಲೀಸ್‌ ಭದ್ರತೆ, ಸುಗಮ ಸಂಚಾರ ವ್ಯವಸ್ಥೆ, ಸಾರ್ವಜನಿಕರಿಗೆ ಶೌಚಾಲಯ ಸೇರಿದಂತೆ ಮೂಲಸೌಲಭ್ಯಕ್ಕೆ ಒತ್ತು ನೀಡಬೇಕು. ಹೀಗಾಗಿ ಕನಿಷ್ಠ ₹ 1.75 ಕೋಟಿಯಿಂದ ₹ 2 ಕೋಟಿ ಹಣದ ಅವಶ್ಯಕತೆ ಇದೆ. ಹಿರಿಯರ ಸಲಹೆ ಪಡೆದು ಕಾರ್ಯಕ್ರಮ ನಡೆಸಬೇಕಾಗಿದೆ ಎಂದರು.

ತಹಶೀಲ್ದಾರ್‌ ಅಜಿತ್‌ಕುಮಾರ್‌ ರೈ ಮಾತನಾಡಿ ರಾಜ್ಯದಲ್ಲಿ 8 ಸಾವಿರ ಮುಜರಾಯಿ ದೇವಾಲಯಗಳಿವೆ, ಈ ಪೈಕಿ ಮೇಲುಕೋಟೆ  ಚೆಲುವನಾರಾಯಣಸ್ವಾಮಿ ಮೊದಲ ಸ್ಥಾನದಲ್ಲಿದ್ದರೆ ನಂತರ ಸ್ಥಾನದಲ್ಲಿ ದೇವನಹಳ್ಳಿ ವೇಣುಗೋಪಾಲಸ್ವಾಮಿ ದೇವಾಲಯ ಇದೆ ಎಂದರು.

ಇವೆರಡೂ ಸಮಕಾಲಿನ ದೇವಸ್ಥಾನಗಳು ಎಂಬುದಕ್ಕೆ ಎರಡು ದೇವಾಲಯಗಳಲ್ಲಿನ ಚಿನ್ನವಜ್ರಾಭರಣಗಳು ಸಾಕ್ಷಿಯಾಗಿವೆ. ಲಕ್ಷದೀಪೋತ್ಸವಕ್ಕೆ ಅಗತ್ಯವಿರುವ ಸಹಕಾರವನ್ನು ಇಲಾಖೆಯಿಂದ ನೀಡಲಾಗುವುದು ಎಂದರು.

ಶಾಸಕ ಪಿಳ್ಳಮುನಿಶಾಮಪ್ಪ ಮಾತನಾಡಿ, ಧಾರ್ಮಿಕ ಆಚರಣೆಗೆ ಯಾವುದೇ ಪಕ್ಷದ ಕಟ್ಟುಪಾಡಿನ ಸೋಂಕು ಬೇಡ. ಜಾತಿ ಮತ ಧರ್ಮಸಲ್ಲದು. ವಿಚಾರವಂತರು ಮತ್ತು ಪ್ರಜ್ಞಾವಂತರ ಸಲಹೆಗಳು ಬೇಕು ತಾಲ್ಲೂಕಿನ ಎಲ್ಲ  ಇಲಾಖೆ ಅಧಿಕಾರಿಗಳ ಸಹಕಾರ ಬೇಕು ಡಿ.14 ರಂದು ನಡೆಯುವ ಲಕ್ಷ ದೀಪೋತ್ಸವ ಇತಿಹಾಸ ಬರೆಯುವ ದಿನವಾಗಬೇಕೆಂದರು.

ಮಾಜಿ ಶಾಸಕ ಜಿ.ಚಂದ್ರಣ್ಣ, ತಾ.ಪಂ ಸದಸ್ಯ ಕಾರಹಳ್ಳಿ ಶ್ರೀನಿವಾಸ್‌, ಜೆಡಿಎಸ್‌ ಅಧ್ಯಕ್ಷ ವೆಂಕಟೇಗೌಡ, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಮುನೇಗೌಡ, ರೈತ ಸಂಘ ಉಪಾಧ್ಯಕ್ಷ ವೆಂಕಟನಾರಾಯಣಪ್ಪ, ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ ರವಿಕುಮಾರ್‌, ಕರವೇ (ಶಿವರಾಮೇಗೌಡ) ತಾಲ್ಲೂಕು ಅಧ್ಯಕ್ಷ ಎಸ್‌.ಆರ್‌.ಮುನಿರಾಜು,

ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಬೇಕರಿ ಮಂಜುನಾಥ್‌, ಪುರಸಭೆ ಸದಸ್ಯ ರವೀಂದ್ರ, ವೈ.ಸಿ.ಸತೀಶ್‌, ಶಶಿಕುಮಾರ್‌, ಎಂ.ನಾರಾಯಣಸ್ವಾಮಿ, ವಿ.ಗೋಪಾಲ, ಗೋಪಾಲಕೃಷ್ಣ, ಎಂ.ಕುಮಾರ್, ಜಿ.ಎನ್‌.ವೇಣುಗೋಪಾಲ್‌, ರಘು,  ಟೌನ್‌ ಜೆಡಿಎಸ್‌ ಅಧ್ಯಕ್ಷ ಮುನಿನಂಜಪ್ಪ, ಪುರಸಭೆ ಮಾಜಿ ಅಧ್ಯಕ್ಷ ವಸಂತಬಾಬು, ತಾಲ್ಲೂಕು ಯಾದವ ಸಂಘ ಅಧ್ಯಕ್ಷ ರವಿಕುಮಾರ್‌, ತಾಲ್ಲೂಕು ಜೆಡಿಎಸ್‌ ಯುವ ಘಟಕ ಅಧ್ಯಕ್ಷ ದೊಡ್ಡಸಣ್ಣೆ ಮುನಿರಾಜು ಉಪಸ್ಥಿತರಿದ್ದರು.

*
ಕಳೆದ 18 ವರ್ಷಗಳ ಹಿಂದೆ ಇಲ್ಲಿ ಲಕ್ಷ ದೀಪೋತ್ಸವ ನಡೆದಿತ್ತು. ನಂತರ ವಿವಿಧ ಕಾರಣಗಳಿಂದ ಸಾಧ್ಯವಾಗಿರಲಿಲ್ಲ. ಈಗ ಕಾಲ ಕೂಡಿಬಂದಿದೆ
-ಸಿ.ಜಗನ್ನಾಥ್‌,
ಬ್ಲಾಕ್‌ ಕಾಂಗ್ರೆಸ್‌  ಮಾಜಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT