ADVERTISEMENT

ವೈಭವದ ವೆಂಕರಮಣ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 13 ಜನವರಿ 2012, 19:30 IST
Last Updated 13 ಜನವರಿ 2012, 19:30 IST

ಆನೇಕಲ್: ತಾಲ್ಲೂಕಿನ ಮುಗಳೂರಿನ ಬೇಟೆ ವೆಂಕಟೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು.

ಸ್ವಾಮಿಯ ಉತ್ಸವ ಮೂರ್ತಿಗೆ ದೇವಾಲಯದಲ್ಲಿ ಸಾಂಪ್ರದಾಯಿಕ ಪೂಜೆಗಳನ್ನು ನೆರವೇರಿಸಿದ ನಂತರ ಉತ್ಸವ ಮೂರ್ತಿಯನ್ನು ಮಂಗಳವಾದ್ಯಗಳೊಂದಿಗೆ ದೇವಾಲಯದ ಪ್ರದಕ್ಷಿಣೆ ನಡೆಸಿದ ನಂತರ ರಥದಲ್ಲಿ ಕುಳ್ಳರಿಸಲಾಯಿತು.

ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ರಾಮಚಂದ್ರೇಗೌಡ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ವಿ.ಆಂಜಿನಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯ ಮುರಳಿ ಕೃಷ್ಣ, ದೇವಾಲಯ ಸಮಿತಿ ಅಧ್ಯಕ್ಷ ಎನ್.ಚಂದ್ರಯ್ಯ, ಆನೇಕಲ್ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಜಯಣ್ಣ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಗೋವಿಂದ ಸ್ವಾಮಿ ಮತ್ತಿತರ ಮುಖಂಡರು ಸಮ್ಮುಖದಲ್ಲಿ ಪ್ರಧಾನ ಅರ್ಚಕ ರಾಮ ಪ್ರಸಾದಾಚಾರ್ಯ ಅವರು ಪೂಜೆ ನೆರವೇರಿಸಿದ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. 

ದೇವಾಲಯದಿಂದ ಸಾಗಿದ ಸ್ವಾಮಿಯ ರಥವು ವಿವಿಧ ಜಾನಪದ ತಂಡಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.  ಭಕ್ತರು ರಥಕ್ಕೆ ಪೂಜೆ ಸಲ್ಲಿಸಿ, ದವನ ಬಾಳೆಹಣ್ಣು ಎಸೆಯುವ ಮೂಲಕ ಭಕ್ತಿ ಸಮರ್ಪಿಸಿದರು. ಬ್ರಹ್ಮರಥೋತ್ಸವದ ಪ್ರಯುಕ್ತ ದೇವಾಲಯದ ಮೂಲವಿಗ್ರಹಕ್ಕೆ ಅಭಿಷೇಕ, ತಿರುಪತಿ ತಿರುಮಲ ವೆಂಕಟೇಶ್ವರ ಸ್ವಾಮಿಯ ಅಲಂಕಾರ, ಉಂಜಲ್‌ಸೇವೆ, ತಿರುಪ್ಪಾವಡೆ ಸೇವೆ ಏರ್ಪಡಿಸಲಾಗಿತ್ತು.

ರಥೋತ್ಸವದ ಅಂಗವಾಗಿ ಶುಕ್ರವಾರ ರಾತ್ರಿ ವೀರಭದ್ರಸ್ವಾಮಿ ಅಗ್ನಿಕುಂಡ ನಡೆಯಲಿದೆ. ಶನಿವಾರ ಶಯನೋತ್ಸವ, ಭಾನುವಾರ ಹಗಲು ವಸಂತೋತ್ಸವ, ಗ್ರಾಮ ದೇವತೆಗಳ ಪಲ್ಲಕ್ಕಿ ಉತ್ಸವ, ಸೋಮವಾರ ರಾಜಬೀದಿ ಉತ್ಸವ ನಡೆಯಲಿದೆ ಎಂದು ದೇವಾಲಯ ಸಮಿತಿ ಜಂಟಿ ಕಾರ್ಯದರ್ಶಿ ಗೋವಿಂದಸ್ವಾಮಿ ತಿಳಿಸಿದರು.

ದೇವಾಲಯದ ಹಿನ್ನೆಲೆ: ತಾಲ್ಲೂಕಿನ ಗಡಿ ಭಾಗದಲ್ಲಿರುವ ಮುಗಳೂರಿನಲ್ಲಿ ದಕ್ಷಿಣ ಪಿನಾಕಿನಿ ನದಿಯ ದಂಡೆಯ ಮೇಲೆ ದೇವಾಲಯವಿದೆ. ಬ್ಯಾಟರಾಯ ಸ್ವಾಮಿಯು ವೆಂಕಟೇಶ್ವರ ಸ್ವಾಮಿಯಾಗಿದ್ದು ಇಲ್ಲಿಗೆ ವೆಂಕಟೇಶ್ವರ ಸ್ವಾಮಿ ತನ್ನ ಪತ್ನಿ ಪದ್ಮಾವತಿ ಜೊತೆ ಬೇಟೆಗಾಗಿ ಬಂದು, ಪಿನಾಕಿನಿ ನದಿ ದಡದಲ್ಲಿ ನೆಲೆಸಿರುವುದಾಗಿ ಪ್ರತೀತಿ ಇದೆ. ಬೇಟೆಗಾಗಿ ಬಂದ್ದಿದ್ದರಿಂದ ಬೇಟೆ ವೆಂಕಟೇಶ್ವರ ಸ್ವಾಮಿ ಎಂಬುದಾಗಿ ಕರೆಯಲಾಗಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ. ದೇವಾಲಯವು ಸುಮಾರು 600 ವರ್ಷಗಳಿಗೂ ಹೆಚ್ಚಿನ ಪ್ರಾಚೀನತೆಯನ್ನು ಹೊಂದಿದೆ.

ತಮಿಳುನಾಡಿನ ಹೊಸೂರು, ಬಾಗಲೂರು, ನೆರೆಯ ಹೊಸಕೋಟೆ, ಮಾಲೂರು ತಾಲ್ಲೂಕುಗಳಿಂದ ಸಹ ಸ್ವಾಮಿಗೆ ಭಕ್ತರು ಬರುತ್ತಾರೆ ಎಂದು ದೇವಾಲಯದ ಅರ್ಚಕರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.