ಆನೇಕಲ್: `ರಾಷ್ಟ್ರ ನಿರ್ಮಾಣ ಮಾಡುವಂತಹ ವ್ಯಕ್ತಿಗಳನ್ನು ರೂಪಿಸುವ ಶಿಕ್ಷಕರು ನಿಸ್ವಾರ್ಥ ಹಾಗೂ ಪ್ರಾಮಾಣಿಕತೆಯಿಂದ ಬೋಧನೆ ಮಾಡಬೇಕು' ಎಂದು ಶಾಸಕ ಬಿ.ಶಿವಣ್ಣ ಹೇಳಿದರು.
ಪಟ್ಟಣದ ಎಎಸ್‌ಬಿ ಸ್ವರ್ಣ ಮಹೋತ್ಸವ ಭವನದಲ್ಲಿ ಗುರು ಪೂರ್ಣಿಮೆ ಅಂಗವಾಗಿ ಜಿಎಂಆರ್ ಎಲೈಟ್ ಅಕಾಡೆಮಿ ವತಿಯಿಂದ ಆಯೋಜಿಸಿದ್ದ ಮಹರ್ಷಿ ವೇದವ್ಯಾಸರ ಜಯಂತಿ ಹಾಗೂ ಜಿ.ಮುನಿರಾಜು ರಚಿಸಿರುವ `ನೀತಿ ಸಾರ ಸುಧೆ' ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
`ಶಿಕ್ಷಕರ ಶ್ರಮ ಹಾಗೂ ಸಾಧನೆ ವಿದ್ಯಾರ್ಥಿಗಳ ಸಾಧನೆಯಲ್ಲಿ ಪ್ರತಿಬಿಂಬಿತವಾಗುತ್ತದೆ. ಹಾಗಾಗಿ ಇತರರಿಗೆ ಮಾದರಿಯಾಗುವಂತಹ ಜೀವನ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಬಿತ್ತಬೇಕು' ಎಂದರು.
`ವಿದ್ಯಾರ್ಥಿ ಜೀವನ ಅತಿ ಸೂಕ್ಷ್ಮವಾದುದು, ವಯಸ್ಸು ಏರುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ. ಇದನ್ನು ಅರಿತು ಮಕ್ಕಳು ತಾವು ಸಾಧಿಸಬೇಕಾದ ನಿಖರ ಗುರಿಯನ್ನು ತಲುಪಲು ಪ್ರಯತ್ನ ಮಾಡಬೇಕು. ಆಟಪಾಠದ ಜೊತೆಗೆ ಸಂಸ್ಕೃತಿಯ ಬಗ್ಗೆಯೂ ಆಸಕ್ತಿ ಬೆಳೆಸಿಕೊಳ್ಳಿ' ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ತಮಿಳುನಾಡಿನ ಡೆಂಕಣಿಕೋಟೆಯ ನಾಗಸಂದ್ರ ಜಂಗಮಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಗುರಿಯಿದ್ದು ಸರಿಯಾದ ಗುರುವಿದ್ದರೆ ಏನನ್ನಾದರೂ ಸಾಧಿಸಬಹುದು. ಗುರುವಿನ ಮಾರ್ಗದರ್ಶನವಿಲ್ಲದೇ ಗುರಿ ಸಾಧಿಸಲು ಸಾಧ್ಯವಿಲ್ಲ ಎಂದರು.
ಜಿ.ಮುನಿರಾಜು ವಿರಚಿತ `ನೀತಿ ಸಾರ ಸುಧೆ' ಕೃತಿಯನ್ನು ಬಿಡುಗಡೆ ಮಾಡಿದ ನಿವೃತ್ತ ಪ್ರಾಚಾರ್ಯ ಎನ್.ಪಿ.ರಾಘವೇಂದ್ರರಾವ್ ಮಾತನಾಡಿ, ಇತ್ತೀಚೆಗೆ ಮನುಷ್ಯರಲ್ಲಿ ಧರ್ಮ, ಪರೋಪಕಾರದಂತಹ ಉತ್ತಮ ಗುಣಗಳು ಹೊರತುಪಡಿಸಿ ಬೇರೆಲ್ಲಾ ವಿಷಯಗಳು ಮನೆ ಮಾಡಿವೆ. ಇದರಿಂದ ಸ್ವಾರ್ಥ ಮನೋಭಾವ ಹೆಚ್ಚುತ್ತದೆಯೇ ಹೊರತು ಲೋಕೋದ್ಧಾರವಾಗದು ಎಂದರು.
ಮೌಲ್ಯಗಳ ಅಧಃಪತನವಾಗುತ್ತಿರುವ ಇಂದಿನ ದಿನಗಳಲ್ಲಿ ಜಿಎಂಆರ್ ಎಲೈಟ್ ಅಕಾಡೆಮಿಯ ಸಂಸ್ಥಾಪಕ ಜಿ.ಮುನಿರಾಜು ಅವರು `ನೀತಿ ಸಾರ ಸುಧೆ' ಕೃತಿಯನ್ನು ಹೊರತಂದಿರುವುದು ಸಂತಸದ ವಿಷಯ ಎಂದರು.
ಜಿ.ಮುನಿರಾಜು, ಆನೇಕಲ್ ಎಸ್‌ಬಿಎಂ ಶಾಖೆಯ ಮ್ಯಾನೇಜರ್ ಕೆ.ಎಸ್.ಸತ್ಯನಾರಾಯಣ, ಪುರಸಭಾ ಸದಸ್ಯ ಮಲ್ಲಿಕಾರ್ಜುನ, ಮುಖಂಡ ರವಿಚೇತನ್, ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ರತ್ನಮ್ಮ, ಎಂ.ಚೇತನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.