ADVERTISEMENT

ಶೇ 93.34ರಷ್ಟು ಮುಂಗಾರು ಬಿತ್ತನೆ ಪೂರ್ಣ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2017, 5:14 IST
Last Updated 21 ಅಕ್ಟೋಬರ್ 2017, 5:14 IST
ಮಳೆ ನೀರಿನಿಂದ ತುಂಬಿರುವ ಬೆಟ್ಟಕೋಟೆ ಕೆರೆ
ಮಳೆ ನೀರಿನಿಂದ ತುಂಬಿರುವ ಬೆಟ್ಟಕೋಟೆ ಕೆರೆ   

ದೇವನಹಳ್ಳಿ: ನಾಲ್ಕು ವರ್ಷಗಳಿಂದ ಸತತ ಬರಗಾಲಕ್ಕೆ ಸಿಲುಕಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಶೇ 93.34ರಷ್ಟು ಬಿತ್ತನೆಯಾಗಿದೆ. ಜತೆಗೆ ಹಿಂಗಾರು ಬಿತ್ತನೆ ಚುರುಕು ಪಡೆದಿದೆ.

2017ರ ಸೆಪ್ಟೆಂಬರ್‌ ತಿಂಗಳ ಅಂತಿಮ ವಾರದಿಂದ ಅಕ್ಟೋಬರ್‌ 14 ರವರೆಗೆ ನಿರಂತರ ಸುರಿದ ಮಳೆ ಕಳೆದ ಹತ್ತು ವರ್ಷಗಳ ದಾಖಲೆಯನ್ನು ಮೀರಿಸಿತ್ತು. ನಂತರ ಒಂದು ವಾರದಿಂದ ಅತಿಯಾದ ತೇವಾಂಶದೊಂದಿಗೆ ನಲುಗಿದ ಏಕದಳ ಮತ್ತು ದ್ವಿದಳ ಹಾಗೂ ಸಿರಿಧಾನ್ಯದ ಬೆಳೆಗಳಿಗೆ ವರುಣನು ಬಿಡುವು ನೀಡಿದ್ದಾನೆ.

ಇದರಿಂದ ಮುಂಗಾರಿನಲ್ಲಿ ಬಿತ್ತನೆಯಾದ ಎಲ್ಲಾ ಬೆಳೆಗಳು ಹಚ್ಚ ಹಸಿರಿನ ಪೈರಿನೊಂದಿಗೆ ಸಮೃದ್ಧವಾಗಿವೆ. ಇದರಿಂದ ರೈತರಲ್ಲಿ ಅಪಾರ ಸಂತಸ ಮನೆ ಮಾಡಿದ್ದು ಸಮೃದ್ಧ ಫಸಲು ಇಳುವರಿಯ ನಿರೀಕ್ಷೆಯಲ್ಲಿದ್ದಾರೆ.

ADVERTISEMENT

ಕಳೆದ ಸಾಲಿನಲ್ಲಿ ಅಲ್ಪ ಸ್ವಲ್ಪ ವಾಡಿಕೆ ಮಳೆಯ ಅಭಾವದ ನಡುವೆ ಶೇ 83.35 ರಷ್ಟು ಬಿತ್ತನೆಯಾಗಿತ್ತು. ಬಿತ್ತನೆಯಾದ ಶೇ 70 ರಷ್ಟು ಬೆಳೆ ಸಕಾಲದಲ್ಲಿ ವಾಡಿಕೆ ಮಳೆ ಇಲ್ಲದೆ ಸಂಪೂರ್ಣ ನೆಲಕಚ್ಚಿತ್ತು. ಇದರಿಂದ ಪಶುಗಳಿಗೆ ಕನಿಷ್ಠ ಮೇವೂ ದೊರಕಿರಲಿಲ್ಲ.

ಜತೆಗೆ ಜಲಕ್ಷಾಮ ಹೆಚ್ಚಾಗಿ ಕುಡಿಯುವ ನೀರಿಗೂ ಹಾಹಾಕಾರವಾಗಿತ್ತು. ಪ್ರಸ್ತುತ ಬರಲಿರುವ ಬೇಸಿಗೆಯಲ್ಲಿ ಅಂತಹ ಪರಿಸ್ಥಿತಿ ಬರುವುದಿಲ್ಲ. ಸಕಾಲದಲ್ಲಿ ಬಿತ್ತನೆ ಮಾಡಿದ ರಾಗಿ ಬೆಳೆ ಪೈರು ತೆನೆ ಹೊರ ಬರುವ ಹಂತದಲ್ಲಿದೆ.

ಮುಂಗಾರು ಹಂಗಾಮಿನಲ್ಲಿ ಬಿತ್ತನೆಯ ನಂತರ ಬೆಳೆಗಳಿಗೆ ಸೆಪ್ಟೆಂಬರ್‌ ಮತ್ತು ಅಕ್ಟೋಬರ್‌ ಅವಧಿಯಲ್ಲಿ ಸುರಿಯುವ ಮಳೆ ನಿರ್ಣಾಯಕ ಎಂದು ಅನುಭವಿಗಳು ಹೇಳುತ್ತಾರೆ.
ಜಿಲ್ಲೆಯಲ್ಲಿ ಸೆಪ್ಟೆಂಬರ್‌ ತಿಂಗಳ ವಾಡಿಕೆ ಮಳೆ 441 ಮಿ.ಮೀ ಆಗಿದ್ದು, ಸುರಿದಿರುವ ಮಳೆ 503 ಮಿ.ಮೀ. ಅಕ್ಟೋಬರ್‌ 1 ರಿಂದ 10ರವರೆಗೆ ವಾಡಿಕೆ ಮಳೆ 75 ಮಿ.ಮೀ. ಇದ್ದರು ಸುರಿದಿರುವ ಮಳೆ 120 ಮಿ.ಮೀ ಎಂದು ಕೃಷಿ ಇಲಾಖೆ ತಿಳಿಸಿದೆ.

ಜನವರಿಯಿಂದ ಅಕ್ಟೋಬರ್‌ ವರೆಗೆ ವಾಡಿಕೆ ಮಳೆ ಪ್ರಮಾಣ 655 ಮಿಮೀ ಇದೆ. ಆದರೆ, ನಿರೀಕ್ಷೆ ಮೀರಿ 921 ಮಿ.ಮೀ ಸುರಿದಿದೆ ಎಂಬುದು ಕೃಷಿ ಇಲಾಖೆ ನೀಡುವ ಮಾಹಿತಿ. ಅನಿರೀಕ್ಷಿತವಾಗಿ ಸತತ ಹದಿನೈದು ದಿನಗಳ ಕಾಲ ಸುರಿದ ಮಳೆಯಿಂದ ಒತ್ತುವರಿಯಾಗಿರುವ ರಾಜಕಾಲುವೆ, ಕುಂಟೆ, ವಿಲ್ಲಾ ನಿರ್ಮಾಣದ ನಡುವೆ ಅಡೆ ತಡೆ ದಾಟಿ ಚೆಕ್‌ಡ್ಯಾಂ ತುಂಬಿದೆ. ಕೆರೆಗಳಿಗೂ ನೀರು ಹರಿದಿದೆ.

ನೀರು ಹರಿಯುವ ಮಾರ್ಗಗಳು ಸರಾಗವಾಗಿದ್ದರೆ ಬಹುತೇಕ ತಾಲ್ಲೂಕಿನ ಎಲ್ಲಾ ಕೆರೆ ಕುಂಟೆಗಳು ಸಾಮೂಹಿಕವಾಗಿ ಕೋಡಿ ಹರಿಯುತ್ತಿದ್ದವು. ತಾಲ್ಲೂಕಿನಲ್ಲಿರುವ ಏಕೈಕ ದೊಡ್ಡಕೆರೆ ವೆಂಕಟಗಿರಿಕೋಟೆ ಕೆರೆಗೆ ಶೇ 40 ರಷ್ಟು, ಎರಡನೆ ಬೆಟ್ಟಕೋಟೆ ಕೆರೆ ಮೂರು ಅಡಿ ನೀರು ಬಂದರೆ ಮಾತ್ರ ಕೋಡಿ ಹರಿಯಲಿದೆ.

ಮೂರನೆ ದೊಡ್ಡ ಕೆರೆ ದೇವನಹಳ್ಳಿ ಹಿರೆ ಅಮಾನಿಕೆರೆಗೆ ಶೇ 20 ರಷ್ಟು ಮಾತ್ರ ನೀರು ತುಂಬಿದೆ. ಬನ್ನಿಮಂಗಲ ಕೆರೆ ಕೋಡಿಗೆ ಎರಡು ಅಡಿ ಕೋಡಿ ಹರಿಯಲು ಬಾಕಿ ಇದೆ. ತಾಲ್ಲೂಕಿನಲ್ಲಿ ಐದು ಸಣ್ಣ ಕೆರೆಗಳು ಭರ್ತಿಯಾಗಿವೆ. ಉಳಿದ ಕೆರೆಗಳು ಶೇ 50 ರಿಂದ 75 ರಷ್ಟು ತುಂಬಿಕೊಂಡಿವೆ. ಇದರಿಂದ ಬತ್ತಿ ಹೋಗಿದ್ದ ಕೊಳವೆ ಬಾವಿಗಳಿಗೆ ಮರುಜೀವ ಬಂದಿದೆ.

ವಡ್ಡನಹಳ್ಳಿ ಭೋಜ್ಯಾನಾಯ್ಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.