ADVERTISEMENT

ಸನಿಹದಲ್ಲೇ ಬೆಂಗಳೂರು... ತಪ್ಪಲಿಲ್ಲ ಬಸ್ಸಿನ ದೂರು

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2011, 19:30 IST
Last Updated 8 ಅಕ್ಟೋಬರ್ 2011, 19:30 IST

ವಿಜಯಪುರ: ಸ್ವಾತಂತ್ರ್ಯ ಬಂದು ಆರು ದಶಕಗಳು ಕಳೆದಿದ್ದರೂ ನಮ್ಮೂರಿಗೆ ಇನ್ನೂ ಬಸ್‌ವ್ಯವಸ್ಥೆ ಕಲ್ಪಿಸಲಾಗಿಲ್ಲ. ರಸ್ತೆಯ ಅವ್ಯವಸ್ಥೆಯಿಂದಾಗಿ  ಬರುತ್ತಿದ್ದ ಖಾಸಗಿ ಬಸ್‌ಕೂಡ ಬರುತ್ತಿಲ್ಲ...

ಹೀಗೆ ತಮ್ಮ ಅಳಲನ್ನು ತೋಡಿಕೊಳ್ಳುವವರು ಸಮೀಪದ ಕೋರಮಂಗಲ ಗ್ರಾಮಸ್ಥರು. `ರಾಜಧಾನಿ ಬೆಂಗಳೂರಿಗೆ ಸನಿಹದಲ್ಲಿಯೇ ಇದ್ದರೂ, ನಮ್ಮೂರಿಗಿನ್ನೂ ಇನ್ನೂ ಸರ್ಕಾರಿ ಬಸ್ಸಿನಲ್ಲಿ ಸಂಚರಿಸುವ ಯೋಗವಿಲ್ಲ.
 
ಎಲ್ಲಿಗೆ ಹೋಗಬೇಕಾದರೂ ಆವತಿ ಬಳಿಯ ರಾಷ್ಟ್ರೀಯ ಹೆದ್ದಾರಿ ಅಥವಾ ವಿಜಯಪುರಕ್ಕೆ ಹೋಗಬೇಕು. ಅಲ್ಲಿಗೆ ಹೋಗಲು ಇರುವುದೊಂದೇ ಸಂಪರ್ಕ ರಸ್ತೆ. ಅದು ಹಳ್ಳಗುಂಡಿಗಳಿಂದ ಕೂಡಿದೆ. ಅವ್ಯವಸ್ಥೆಯಿಂದಾಗಿ ಬರುತ್ತಿದ್ದ ಬಸ್‌ಗಳ ಸಂಚಾರವನ್ನೂ ಸ್ಥಗಿತಗೊಳಿಸಲಾಗಿದೆ. ಸದ್ಯ ಆಟೊಗಳನ್ನೇ ಅವಲಂಬಿಸಬೇಕು~ ಎನ್ನುತ್ತಾರೆ ಹಿರಿಯ ಗ್ರಾಮಸ್ಥ ನಾರಾಯಣಪ್ಪ.

ಆವತಿಯಿಂದ ಕೋರಮಂಗಲದವರೆಗೆ ಕಳೆದ 25 ವರ್ಷಗಳಿಂದಲೂ ರಸ್ತೆಡಾಂಬರು ಮಾಡಲಾಗಿಲ್ಲ. ಅದೇ ರಸ್ತೆಯಲ್ಲಿಯೇ ರಾಜ್ಯದ ಪ್ರಸಿದ್ಧ ಬಯಲು ಬಂಧೀಖಾನೆಯಿದೆ. ಆಗಿಂದಾಗ್ಗೆ ಅಧಿಕಾರಿಗಳು, ಸಚಿವರು ಬಂಧೀಖಾನೆಗೆ ಭೇಟಿನೀಡಿ ಪರಿಶೀಲಿಸುತ್ತಾರೆ. ಆದರೆ ಆ ರಸ್ತೆಯ ಅವ್ಯವಸ್ಥೆ ಹೇಳತೀರದಾಗಿದೆ. ಗೊಬ್ಬರಗುಂಟೆ ಬಳಿಯ ರಸ್ತೆ ಹಾಳಾಗಿದ್ದು ಶಾಲಾಕಾಲೇಜು ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ತೆರಳಲು, ವೃದ್ಧರು-ಮಹಿಳೆಯರು, ರೈತರು ಸಂಚರಿಸಲು ಅನುಕೂಲವೇ ಇಲ್ಲವಾಗಿದೆ ಎಂಬುದು ಗ್ರಾಮಸ್ಥರ ಅಳಲು.

`2007 ರಲ್ಲಿ ಸರ್ಕಾರವು ಜಾರಿಗೆ ತಂದ ಸುವರ್ಣ ಗ್ರಾಮೋದಯ ಯೋಜನೆಯಡಿ ಗ್ರಾಮದ ಅಭಿವೃದ್ಧಿಗೆ ಪೂರಕವಾಗಿ ಯೋಜನೆ ತಯಾರಿಕಾ ಸಂಸ್ಥೆ-ಎನ್.ಆರ್.ಡಿ.ಎಸ್ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಸರ್ಕಾರದ ವಿವಿಧ ಇಲಾಖೆಗಳ ಮುಖ್ಯಸ್ಥರು ಗ್ರಾಮಸ್ಥರೊಂದಿಗೆ ಚರ್ಚಿಸಿ ಕ್ರಿಯಾಯೋಜನೆ ಅಂತಿಮಗೊಳಿಸುವ ಗ್ರಾಮಸಭೆಯಲ್ಲಿ ಮಂಡಿಸಿದ್ದ ಯಾವ ಯೋಜನೆಯೂ ಕಾರ್ಯರೂಪಕ್ಕೆ ಬಂದಿಲ್ಲ~ ಎನ್ನುತ್ತಾರೆ ಮುನಿರಾಜು.

ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡ, ಕಾಂಪೌಂಡ್, ಆಟೊಟಗಳಿಗೆ ಕ್ರೆಡಾಂಗಣ, ಶೌಚಾಲಯ ಮತ್ತು ಮಳೆಕೊಯ್ಲು ಅಳವಡಿಕೆ, ಸ್ತ್ರೀಶಕ್ತಿ ಗುಂಪುಗಳ ಆದಾಯೋತ್ಪನ್ನ ಹೆಚ್ಚಳಕ್ಕೆ ಯೋಜನೆ, ಮಹಿಳಾ ಭವನ ನಿರ್ಮಾಣ, ಸುಗಮ ವಿದ್ಯುತ್ ಪೂರೈಕೆಗಾಗಿ ಅಗತ್ಯವಿರುವಷ್ಟು ವಿದ್ಯುತ್ ಪರಿವರ್ತಕಗಳ ಅಳವಡಿಕೆ.. ಈ ಎಲ್ಲ ಸೌಲಭ್ಯಗಳು ಗ್ರಾಮದಲ್ಲಿ ಕನಸಾಗಿಯೇ ಉಳಿದಿವೆ. ಗ್ರಾಮದಲ್ಲಿ 15 ಕ್ಕೂ ಹೆಚ್ಚು ಅಂಗವಿಕಲರಿದ್ದಾರೆ.

ಪುನರ್ವಸತಿ, ಸಾಧನ-ಸಲಕರಣೆಗಳ ವಿತರಣೆ, ಉದ್ಯೋಗ ತರಬೇತಿ ದೊರೆಯಬೇಕಿದೆ. ಎಂ.ಪಿ.ಸಿ.ಎಸ್‌ನ ಉನ್ನತೀಕರಣ, ಹಾಲಿನ ಚಿಲ್ಲಿಂಗ್ ಸೆಂಟರ್ ಪ್ರಾರಂಭ, ಪಶು ಆಸ್ಪತ್ರೆ ನಿರ್ಮಾಣ, ಸಿಬ್ಬಂದಿ ವಸತಿ ಗೃಹನಿರ್ಮಾಣ ಆಗಬೇಕಿದೆ. ಸಮುದಾಯ ಒಕ್ಕಣೆ ಕಣ ನಿರ್ಮಾಣವಾಗಬೇಕೆಂಬುದು ಕೆಂಪೇಗೌಡ ಅವರ ಅಭಿಪ್ರಾಯ. 

 ಗ್ರಾಮದಲ್ಲಿ 122 ಕ್ಕೂ ಅಧಿಕ ಮಂದಿ ರೇಷ್ಮೆ ಬೆಳೆಗಾರರಿದ್ದು, ಹನಿನೀರಾವರಿ, ಸಾಮೂಹಿಕ ಮೌಂಟಿಂಗ್ ಹಾಲ್ ನಿರ್ಮಾಣ, ಮಣ್ಣು ಪರೀಕ್ಷೆಯ ಸಂಚಾರಿ ಪ್ರಯೋಗಾಲಯ ಅಗತ್ಯವಿದೆ ಎನ್ನುತ್ತಾರೆ ಗ್ರಾಮಸ್ಥರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.