ADVERTISEMENT

ಸಮಾನತೆಯಿಂದ ಮಾತ್ರ ಅಭಿವೃದ್ಧಿ ಸಾಧ್ಯ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2012, 19:30 IST
Last Updated 4 ಫೆಬ್ರುವರಿ 2012, 19:30 IST
ಸಮಾನತೆಯಿಂದ ಮಾತ್ರ ಅಭಿವೃದ್ಧಿ ಸಾಧ್ಯ
ಸಮಾನತೆಯಿಂದ ಮಾತ್ರ ಅಭಿವೃದ್ಧಿ ಸಾಧ್ಯ   

ದೇವನಹಳ್ಳಿ: ಪ್ರತಿಯೊಂದು ಜನ ಸಮುದಾಯಕ್ಕೂ ಎಲ್ಲಾ ಕ್ಷೇತ್ರಗಳಲ್ಲಿ ಸಾಮಾಜಿಕ ಮತ್ತು ಆರ್ಥಿಕ ಸಮಾನತೆ ಇದ್ದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ.ಎಸ್.ಆರ್.ನಾಯಕ್ ಅಭಿಪ್ರಾಯಪಟ್ಟರು.

ಇಲ್ಲಿನ ನಂದಿ ರೂರಲ್ ಶಿಕ್ಷಣ ಸಂಸ್ಥೆಯು ಶಾಂತಿ ನಿಕೇತನ ಶಾಲಾ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.

 ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಬದುಕುವ ಹಕ್ಕಿದೆ. ವರದಕ್ಷಿಣೆ, ಮಲ ಹೊರುವ ಪದ್ಧತಿ, ಮೂಢನಂಬಿಕೆಗಳ ಬಗ್ಗೆ ತಳಮಟ್ಟದಿಂದಲೇ ಅರಿವು ಮೂಡಿಸಬೇಕು. ಈ ಹಿನ್ನೆಲೆಯಲ್ಲಿ ಶಾಲಾ, ಕಾಲೇಜು ಮತ್ತು  ವಿಶ್ವವಿದ್ಯಾನಿಲಯಗಳಲ್ಲಿ ಈ ಬಗ್ಗೆ ಬೋಧಿಸಬೇಕು ಎಂದು ಅವರು ಹೇಳಿದರು.

  ದೇಶದ ಅಭಿವೃದ್ಧಿಗೆ  ಶಿಕ್ಷಣ ಸಂಸ್ಥೆಗಳ ಕೊಡುಗೆ ಅಪಾರ. ಶಿಕ್ಷಣ ಸಂಸ್ಥೆಗಳು ಮಾದರಿ ಪ್ರಜೆಗಳನ್ನು ರೂಪಿಸಬೇಕು.  ವಿದ್ಯಾರ್ಥಿಗಳು ದೇಶದ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡುವ ರೀತಿಯಲ್ಲಿ ಶಿಕ್ಷಣ ನೀಡಬೇಕು.  ವಿಶ್ವಗುರು ಬಸವಣ್ಣ, ಡಾ.ಅಂಬೇಡ್ಕರ್, ಬುದ್ಧರಂತೆ  ಸುಂದರ ಸಮಾಜ ನಿರ್ಮಿಸಲು ಶಿಕ್ಷಕರು ಕಾಳಜಿವಹಿಸಬೇಕು ಎಂದರು. 

ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪ ಮಾತನಾಡಿದರು. ನಂದಿ ರೂರಲ್ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಕಾರ್ಯದರ್ಶಿ ವೈ.ಕೆ.ಚಂದ್ರಶೇಖರ್, ಶಿಕ್ಷಣ ಸಂಯೋಜಕ ರವಿಪ್ರಕಾಶ್, ಭಾರತ ಜನಜಾಗೃತಿ ಸೇನೆ ರಾಜ್ಯ ಘಟಕದ ಅಧ್ಯಕ್ಷ ಮುನಿಯಪ್ಪ, ಕಾರ್ಯದರ್ಶಿ ನಾಗರಾಜು, ತಾಲ್ಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಉಷಾ ಪೂರ್ಣಚಂದ್ರ, ಪಾರ್ವತಿ, ಲಲಿತಾ ಮತ್ತಿತರರು ಇದ್ದರು. ಈ ಸಂದರ್ಭದಲ್ಲಿ ವೈದ್ಯರಾದ ಶ್ರಿನಿವಾಸ್, ಸತೀಶ್ ಹಾಗೂ ಅಂತರ ರಾಷ್ಟ್ರೀಯ ಕ್ರೀಡಾಪಟು ಪ್ರಸನ್ನಹಳ್ಳಿ ನಟರಾಜ್ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿನಿ ಸನ್ನಿಧಿ ಪ್ರಾರ್ಥಿಸಿದರು. ಮುಖ್ಯ ಶಿಕ್ಷಕ ಮಂಜುನಾಥ್ ವಾರ್ಷಿಕ ವರದಿ ವಾಚಿಸಿದರು. ಶಿಕ್ಷಕ ಅರಸೇಗೌಡ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.