ADVERTISEMENT

ಸರ್ಕಾರದ ವಿವಿಧ ಆರೋಗ್ಯ ಸೇವೆಗಳ ಯೋಜನೆ ಜಾರಿಗೆ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2016, 11:21 IST
Last Updated 10 ಆಗಸ್ಟ್ 2016, 11:21 IST
ದೇವನಹಳ್ಳಿ ತಾಲ್ಲೂಕು ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಪಿಳ್ಳ ಮುನಿಶಾಮಪ್ಪ , ತಾ.ಪಂ. ಅಧ್ಯಕ್ಷೆ ಭಾರತಿ ಲಕ್ಷ್ಮಣಗೌಡ ಉಪಾಧ್ಯಕ್ಷೆ ನಂದಿನಿ, ಪುರಸಭೆ ಅಧ್ಯಕ್ಷೆ ಶಾರದಮ್ಮ, ಉಪಾಧ್ಯಕ್ಷೆ ಗಾಯತ್ರಿ ಉಪಸ್ಥಿತರಿದ್ದರು
ದೇವನಹಳ್ಳಿ ತಾಲ್ಲೂಕು ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಪಿಳ್ಳ ಮುನಿಶಾಮಪ್ಪ , ತಾ.ಪಂ. ಅಧ್ಯಕ್ಷೆ ಭಾರತಿ ಲಕ್ಷ್ಮಣಗೌಡ ಉಪಾಧ್ಯಕ್ಷೆ ನಂದಿನಿ, ಪುರಸಭೆ ಅಧ್ಯಕ್ಷೆ ಶಾರದಮ್ಮ, ಉಪಾಧ್ಯಕ್ಷೆ ಗಾಯತ್ರಿ ಉಪಸ್ಥಿತರಿದ್ದರು   

ದೇವನಹಳ್ಳಿ: ಸಮಾಜದಲ್ಲಿ ಆರ್ಥಿಕವಾಗಿ ದುರ್ಬಲರಾಗಿರುವ ತಳ ಸಮುದಾಯದ ಅಭ್ಯುದಯಕ್ಕಾಗಿ ಸರ್ಕಾರ ವಿವಿಧ ರೀತಿಯ ಆರೋಗ್ಯ ಸೇವೆಗಳ ಯೋಜನೆ ಜಾರಿಗೆ ತಂದಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಉಪನಿರ್ದೇಶಕ ಡಾ. ಧನಂಜಯ ತಿಳಿಸಿದರು.

ತಾಲ್ಲೂಕು ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಸುವರ್ಣ ಆರೋಗ್ಯ ಸುರಕ್ಷ ಟ್ರಸ್ಟ್‌ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಪರಿಶಿಷ್ಟರಿಗೆ ಹಾಗೂ ಸಾರ್ವಜನಿಕರಿಗೆ ವಿಶೇಷ ಆರೋಗ್ಯ ಜಾಗೃತಿ ಅಭಿಯಾನ ಮತ್ತು ಉಚಿತ ಆರೋಗ್ಯ ತಪಾಸಣಾ ಚಿಕಿತ್ಸಾ ಶಿಬಿರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಕಳೆದ 2010 ರಲ್ಲಿ ಕೆಲವೊಂದು ಯೋಜನೆಗಳು ಆರಂಭಗೊಂಡಿದ್ದರು ಯೋಜನೆಗಳ ಬಗ್ಗೆ ಮಾಹಿತಿ ಮತ್ತು ಜಾಗೃತಿ  ಕೊರತೆಯಿಂದ ಪರಿಣಾಮ ಕಾರಿಯಾಗಿ ಅನುಷ್ಠಾನ ಗೊಂಡಿರಲಿಲ್ಲ, ಪ್ರಸ್ತುತ ತಾಲ್ಲೂಕಿನಲ್ಲಿ ಆಯ್ದ ಪ್ರಮುಖ 70 ಗ್ರಾಮಗಳಲ್ಲಿ 7 ದಿನಗಳ ಕಾಲ ಐದು ವಾಹನಗಳಲ್ಲಿ ಪ್ರಯಾಣಿಸಿ ಬೀದಿ ನಾಟಕದ ಮೂಲಕ ಜಾಗೃತಿ ಮೂಡಿಸಲಾಗಿದೆ ಎಂದರು.

ಎಪಿಎಲ್‌ ಮತ್ತು ಬಿಪಿಎಲ್‌ ವ್ಯಾಪ್ತಿಯಲ್ಲಿರುವ ಕುಟುಂಬಗಳಿಗೆ ವಿವಿಧ ರೋಗಗಳಿಗೆ ಮತ್ತು ಶಸ್ತ್ರಚಿಕಿತ್ಸೆಗೆ ತಗಲುವ ಶೇಕಡ 70ರಷ್ಟು ಉಚಿತವಾಗಲಿದೆ, ಶೇಕಡ 30 ರಷ್ಟು ಮಾತ್ರ ರೋಗಿಗಳು ಭರಿಸಬೇಕಾಗುತ್ತದೆ ಪರಿಶಿಷ್ಠರಿಗೆ ಸಂಪೂರ್ಣ ಉಚಿತವಿದೆ ಎಂದರು.

ತಾ.ಪಂ ಅಧ್ಯಕ್ಷೆ ಭಾರತಿ ಲಕ್ಷ್ಮಣಗೌಡ ಮಾತನಾಡಿ, ಸರ್ಕಾರ ಸಹ ರಾಜ್ಯದ ಎಲ್ಲ  ವರ್ಗದವರಿಗೂ ಉತ್ತಮ ಸೇವೆ ಒದಗಿಸಲು ಪರಿಣಾಮಕಾರಿ ಆರೋಗ್ಯ ಯೋಜನೆಗಳನ್ನು ಜಾರಿಗೆ ತಂದಿದೆ.  ದುಬಾರಿ ವೆಚ್ಚದ ಚಿಕಿತ್ಸೆ ಮತ್ತು ಶಸ್ತ್ರ ಚಿಕಿತ್ಸೆ ಹಾಗೂ ವೈದ್ಯಕೀಯ ಸೇವೆಗಳು ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಲಭ್ಯವಾಗುವಂತೆ ಅನುಕೂಲ ಮಾಡಿದೆ ಎಂದರು.

ಶಾಸಕ ಪಿಳ್ಳಮುನಿಶಾಮಪ್ಪ ಮಾತನಾಡಿ, ಮೂಢನಂಬಿಕೆ, ಕಂದಾಚಾರ, ಕಲುಷಿತ ವಾತಾವರಣ, ಸೇವಿಸುವ ಆಹಾರ, ದೈಹಿಕ ಚಟುವಟಿಕೆಯಿಂದ ಹೊರಗುಳಿಯುವುದು ಸೇರಿದಂತೆ ವಿವಿಧ ರೀತಿಯಿಂದ ಅನಾರೋಗ್ಯ ಹೆಚ್ಚುತ್ತಿದೆ. ಅಪೌಷ್ಠಿಕತೆ ಮತ್ತು ಅನುವಂಶೀಯ ಗುಣಗಳಿಂದ ಅಂಗವಿಕಲತೆ ಉಂಟಾಗುತ್ತದೆ ಎಂದು  ಹೇಳಿದರು.

ತಾಲ್ಲೂಕಿನಲ್ಲಿ 12 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ ಸದುಪ ಯೋಗವಾಗಬೇಕು ಹುಚ್ಚು ನಾಯಿ ಕಡಿತ ಮತ್ತು ಹಾವು ಕಚ್ಚಿದಾಗ ತುರ್ತಾಗಿ ಔಷಧಿಯನ್ನು ದಾಸ್ತಾನು ಮಾಡಿಕೊಳ್ಳಬೇಕು ಹೆಚ್ಚುತ್ತಿರುವ ಡಯಾಲಿಸಿಸ್‌ ರೋಗಿಗಳ ಅನುಕೂಲಕ್ಕಾಗಿ ವಿಜಯಪುರ ಮತ್ತು ದೇವನಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್‌ ಕೇಂದ್ರ ಆರಂಭಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ  ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.

ತಾಲೂಕು ಪಂಚಾಯ್ತಿ ಉಪಾಧ್ಯಕ್ಷೆ ನಂದಿನಿ ವೆಂಕಟೇಶ್‌ ಮಾತನಾಡಿದರು. ಪುರಸಭೆ ಅಧ್ಯಕ್ಷೆ ಶಾರದಮ್ಮ, ಉಪಾಧ್ಯಕ್ಷೆ ಗಾಯಿತ್ರಿ, ತಾಲ್ಲೂಕು ಆರೋಗ್ಯಾಧಿಕಾರಿ ರಷ್ಮಿ, ಸಮುದಾಯ ಆರೋಗ್ಯ ಕೇಂದ್ರ ಆಡಳಿತಾಧಿಕಾರಿ ಡಾ. ರಮೇಶ್‌ ಮತ್ತಿತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.