ADVERTISEMENT

ಸಹಭಾಗಿತ್ವದಿಂದಲೇ ಯಶಸ್ಸು

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2012, 19:30 IST
Last Updated 22 ಫೆಬ್ರುವರಿ 2012, 19:30 IST

ಆನೇಕಲ್: ರಾಷ್ಟ್ರದ ಅಭಿವೃದ್ಧಿಯಲ್ಲಿ ಸಮಾಜ ಮತ್ತು ಸರ್ಕಾರದ ಪಾತ್ರ ಮಹತ್ವವಾದುದ್ದು. ಇವೆರಡೂ ಅಂಗಗಳು ಕುಟುಂಬದ ತಂದೆ ತಾಯಿಇದ್ದಂತೆ ಎಂದು ಪೇಜಾವರ ಮಠದ ವಿಶ್ವೇಶ ತೀರ್ಥ ಶ್ರೀಗಳು ನುಡಿದರು.

ತಾಲ್ಲೂಕಿನ ಅತ್ತಿಬೆಲೆಯ ಜಯಭಾರತಿ ವಿದ್ಯಾಸಂಸ್ಥೆಯಲ್ಲಿ ಅಂದಾಜು 50ಲಕ್ಷ ರೂಪಾಯಿ ವೆಚ್ಚದಲ್ಲಿ ದಾನಿಗಳ ನೆರವಿನಿಂದ ನಿರ್ಮಿಸಿರುವ ಸುವರ್ಣ ಮಹೋತ್ಸವ ಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಾರ್ವಜನಿಕರ ಸಹಭಾಗಿತ್ವದಿಂದ ಏನಾದರೂ ಉನ್ನತ ಸಾಧನೆ ಮಾಡಬಹುದು ಎಂದರು.

ಎಲ್ಲವನ್ನು ಸರ್ಕಾರವೇ ಮಾಡಲಿ ಎಂಬ ತಾತ್ಸರ ಭಾವನೆ ಸಲ್ಲದು. ದೇಶ ಕಟ್ಟುವ ಕಾರ್ಯಗಳಲ್ಲಿ ಸಮಾಜವು ಸಕ್ರಿಯವಾಗಿ ಪಾಲ್ಗೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.

ವ್ಯಕ್ತಿಗಳಿಗೆ ವಯಸ್ಸಾದಂತೆ ಆತಂಕ ಪ್ರಾರಂಭವಾಗುತ್ತದೆ. ಅಸ್ಥಿರತೆ ಕಾಡುತ್ತದೆ ಆದರೆ ಸಂಸ್ಥೆಗಳು ವಯಸ್ಸಾದಂತೆ ಚಿರಂಜೀವಿಗಳಾಗುತ್ತವೆ. ಈ ದಿಸೆಯಲ್ಲಿ 50ವರ್ಷ ಪೂರ್ಣಗೊಳಿಸಿರುವ ಜಯಭಾರತಿ ಸಂಸ್ಥೆಯು ಮತ್ತಷ್ಟು ಅಭಿವೃದ್ಧಿಯಾಗಲಿ ಎಂದು ಶ್ರೀಗಳು ಹಾರೈಸಿದರು.

ದೇಶ, ಭಾಷೆ, ಸಂಸ್ಕೃತಿಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಅಭಿಮಾನ ಬೆಳಸಬೇಕು. ಇತ್ತೀಚಿನ ದಿನಗಳಲ್ಲಿ ಕನ್ನಡ ಭಾಷೆಯಲ್ಲಿ ಮಾತನಾಡುವುದೇ ಅವಮಾನ ಎಂಬ ಭಾವನೆ ಬೆಳೆಯುತ್ತಿದೆ. ಅತಿಯಾದ ಆಂಗ್ಲ ಭಾಷೆಯ ವ್ಯಾಮೋಹ ಸಲ್ಲದು ಎಂದು ಪೇಜಾವರ ಶ್ರೆಗಳು ನುಡಿದರು.

ಸಮಾಜ ಕಲ್ಯಾಣ ಸಚಿವ ಎ.ನಾರಾಯಣ ಸ್ವಾಮಿ ಮಾತನಾಡಿ, ಪ್ರತಿಯೊಬ್ಬರೂ ತಂತಮ್ಮ ಬದುಕನ್ನು ತಾವೇ ರೂಪಿಸಿಕೊಳ್ಳುವ ಸಾಮರ್ಥ್ಯವನ್ನು ಶಿಕ್ಷಣದ ಮೂಲಕ ಬೆಳೆಸುವಂತಾಗಬೇಕು. ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆಗಳ ಅರಿವಿನಿಂದ ಮಕ್ಕಳಲ್ಲಿ ಪರಿವರ್ತನೆ ಮೂಡಬೇಕು ಎಂದರು.

ಶಿಕ್ಷಣಕ್ಕೆ ಜಾತಿ, ಲಿಂಗ, ಅಂತಸ್ತು ಅಡ್ಡಿಬರುವುದಿಲ್ಲ ಸತತ ಶ್ರಮ ಮತ್ತು ಅವಕಾಶದಿಂದ ಮಾತ್ರ ಗುರಿ ಸಾಧಿಸಬಹುದು ಎಂದರು.

ವಿಧಾನ ಪರಿಷತ್ ಸದಸ್ಯ ಬಿ.ಟಿ.ದಯಾನಂದ ರೆಡ್ಡಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳನ್ನು ರೂಪಿಸಿದ್ದರೂ ಸಹ ಗುಣಮಟ್ಟದ ಶಿಕ್ಷಣ ಕನಸಾಗಿ ಉಳಿದಿದೆ. ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರದ ಜೊತೆ ಸಂಘ ಸಂಸ್ಥೆಗಳು, ಉದ್ಯಮಿಗಳು ಕೈಜೋಡಿಸಬೇಕು ಎಂದರು.

ವಿದ್ಯಾರ್ಥಿಗಳಿಗೆ ವಿವಿಧ ಕೌಶಲಗಳಲ್ಲಿ ತರಬೇತಿ ನೀಡಿ ಸ್ವಯಂ ಉದ್ಯೋಗ ಪಡೆಯುವಂತಾಗಲು ಮಾರ್ಗದರ್ಶನ ನೀಡಬೇಕು. ಶೈಕ್ಷಣಿಕ ಜ್ಞಾನ ನೀಡಲು ಜಯ ಭಾರತಿ ಸಂಸ್ಥೆಯ ಆವರಣದಲ್ಲಿ ಸ್ಥಳಾವಕಾಶ ಕಲ್ಪಿಸಿಕೊಟ್ಟಲ್ಲಿ 50ಲಕ್ಷ ರೂಪಾಯಿ ವೆಚ್ಚದಲ್ಲಿ ಉನ್ನತ ತಂತ್ರಜ್ಞಾನದ ಆಧುನಿಕ ಸೌಲಭ್ಯಗಳ ಗ್ರಂಥಾಲಯ ಸ್ಥಾಪಿಸಿ ಮಾರ್ಗದರ್ಶನ ಕೇಂದ್ರ ತೆರೆಯಲು ಪೂರ್ಣ ನೆರವು ನೀಡುವುದಾಗಿ ಪ್ರಕಟಿಸಿದರು.

ಕಟ್ಟಡ ನಿರ್ಮಾಣಕ್ಕೆ ನೆರವು ನೀಡಿದ ದಾನಿಗಳನ್ನು ಸನ್ಮಾನಿಸಲಾಯಿತು. ನಿಕೇತ ಮತ್ತು ತಂಡದವರಿಂದ “ಜಾಗೊ ಭಾರತ್‌” ಗೀತಕಥನ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಸಂಸ್ಥೆಯ ಅಧ್ಯಕ್ಷ ಎನ್. ಬಸವರಾಜು, ಕಾರ್ಯದರ್ಶಿ ಕೆ.ನಟರಾಜ್, ಕಾರ್ಯ ನಿರ್ವಾಹಕ ನಿರ್ದೇಶಕ ಆರ್.ನಾಗರಾಜು, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸಿ.ನಾರಗಾಜನ್, ಅತ್ತಿಬೆಲೆ ಗ್ರಾಮ ಪಂಚಾಯಿತಿ ಅಧ್ಯಕ್ಷ ನರಸಿಂಹಮೂರ್ತಿ, ಉಪಾಧ್ಯಕ್ಷೆ ಸುವರ್ಣಮ್ಮ, ಜಿ.ಪಂ.ಮಾಜಿ ಸದಸ್ಯ ಸಂಪಂಗಿ ರಾಮಯ್ಯ, ಸದಸ್ಯ ನಾರಾಯಣಪ್ಪ, ಸಹಕಾರ ಸಂಘಗಳ ಉಪ ನಿಬಂಧಕ ಲಿಂಗರಾಜು, ಬಿಜೆಪಿ ಮುಖಂಡರಾದ ಕೆ.ಜಯಣ್ಣ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಾ.ವೀರಭದ್ರಪ್ಪ ಮತ್ತಿತರರು ಹಾಜರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.