ಆನೇಕಲ್ : ಆನೇಕಲ್ ವಿಧಾನಸಭಾ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪ್ರಚಾರ ಮಾಡುವ ಮೂಲಕ ಬಿಜೆಪಿಯವರ ಸುಳ್ಳು ಅಪಾದನೆಗಳಿಗೆ ತಕ್ಕ ಉತ್ತರ ನೀಡಬೇಕು ಎಂದು ಶಾಸಕ ಬಿ.ಶಿವಣ್ಣ ಹೇಳಿದರು.
ಅವರು ತಾಲ್ಲೂಕಿನ ಬೊಮ್ಮಸಂದ್ರದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ರೆಡ್ಡಿ ಜನಾಂಗದ ಮುಖಂಡರಿಂದ ಮನವಿ ಪತ್ರ ಸ್ವೀಕರಿಸಿ ಮಾತನಾಡಿದರು.
ಹಲವಾರು ಅಭಿವೃದ್ಧಿ ಕಾರ್ಯಗಳು ನಡೆದಿದ್ದರೂ ಸಹ ಅದನ್ನು ಪ್ರಚಾರ ಮಾಡುವಲ್ಲಿ ಹಾಗೂ ಸಂಘಟನೆಯ ಕೊರತೆ ಪಕ್ಷದಲ್ಲಿದೆ.
ಇದನ್ನು ಸರಿಪಡಿಸುವ ಸಲುವಾಗಿ ಬ್ಲಾಕ್ ಕಾಂಗ್ರೆಸ್ ಹಾಗೂ ಇತರ ಘಟಕಗಳನ್ನು ಸಹ ಪುನರ್‌ರಚಿಸಿ ಪ್ರಾಮಾಣಿಕ ಕಾರ್ಯಕರ್ತರಿಗೆ ಅವಕಾಶಗಳನ್ನು ಕಲ್ಪಿಸಿಕೊಡಲಾಗುವುದು. ಬನಹಳ್ಳಿಯ ರಾಮಚಂದ್ರರೆಡ್ಡಿ ಅವರನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕ ಮಾಡುವಂತೆ ಮನವಿ ಸಲ್ಲಿಸಲಾಗಿದೆ.
ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಸಂಸದ ಡಿ.ಕೆ.ಸುರೇಶ್ ಹಾಗೂ ಹೈಕಮಾಂಡ್‌ನೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಕಾಂಗ್ರೆಸ್ ಮುಖಂಡ ತಿಮ್ಮರಾಯರೆಡ್ಡಿ ಮಾತನಾಡಿ ಬ್ಲಾಕ್ ಕಾಂಗ್ರೆಸ್ ಸಮಿತಿಯನ್ನು ಪುನರ್‌ರಚನೆ ಮಾಡಬೇಕು. ಕಾರ್ಯಕರ್ತರೊಂದಿಗೆ ನಿರಂತರ ಸಂಪರ್ಕ ಇರುವಂತಹ ವ್ಯಕ್ತಿಗಳನ್ನು ನೇಮಕ ಮಾಡಿ ಪಕ್ಷದ ವರ್ಚಸ್ಸನ್ನು ಹೆಚ್ಚಿಸಬೇಕು. ಈ ನಿಟ್ಟಿನಲ್ಲಿ ಸಂವಹನ ಕೊರತೆಯನ್ನು ನಿವಾರಿಸಿ ಸಮರ್ಥವಾಗಿ ಕಾರ್ಯಕರ್ತರನ್ನು ಕೊಂಡೊಯ್ಯುವ ಹಾಗೂ ಬಿಜೆಪಿಗೆ ತಕ್ಕ ಉತ್ತರ ನೀಡುವ ಮತ್ತು ರೆಡ್ಡಿ ಜನಾಂಗವನ್ನು ಸಂಘಟಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೃಷ್ಣಾರೆಡ್ಡಿ ಮಾತನಾಡಿ ಪಕ್ಷದ ಸಂಘಟನೆಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಓಲೈಸುವವರಿಂದ ಯಾವುದೇ ಉಪಯೋಗವಿಲ್ಲ. ಪಕ್ಷಕ್ಕಾಗಿ ದುಡಿಯುವ ಪ್ರಾಮಾಣಿಕ ವ್ಯಕ್ತಿಗಳನ್ನು ಗುರುತಿಸಿ ಅವಕಾಶ ನೀಡುವಂತೆ ಒತ್ತಾಯಿಸಿದರು.
ಪದವೀಧರ ವೇದಿಕೆಯ ಅಧ್ಯಕ್ಷ ಬನಹಳ್ಳಿ ರಾಮಚಂದ್ರರೆಡ್ಡಿ ಮಾತನಾಡಿ ಯಾವುದೇ ಅವಕಾಶ ನೀಡಿದರೇ ಸಮರ್ಥವಾಗಿ ನಿರ್ವಹಿಸಿ ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ದು ಪಕ್ಷದ ಸಂಘಟನೆ ಮಾಡುವುದಾಗಿ ಹೇಳಿದರು.
ಆನೇಕಲ್ ಯೋಜನಾ ಪ್ರಾಧಿಕಾರದ ಸದಸ್ಯ ಎಂ.ಕೆಂಪರಾಜು, ಮುಖಂಡರಾದ ಸುಬ್ಬಾರೆಡ್ಡಿ, ಬಳ್ಳೂರು ಜಿ.ನಾರಾಯಣರೆಡ್ಡಿ, ಗೋಪಾಲರೆಡ್ಡಿ, ಕೇಶವರೆಡ್ಡಿ, ಶಿವರಾಮರೆಡ್ಡಿ, ಓ.ದೇವರಾಜು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.