ADVERTISEMENT

ಸ್ಪರ್ಧಿಗಳಿಗೆ ಪ್ರಯಾಣ ಭತ್ಯೆ; ಸಂತಸ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2011, 19:30 IST
Last Updated 7 ಅಕ್ಟೋಬರ್ 2011, 19:30 IST

ಪ್ರಜಾವಾಣಿ ಫಲಶ್ರುತಿ

ದೇವನಹಳ್ಳಿ: ಧಾರವಾಡದಲ್ಲಿ ಇದೇ ತಿಂಗಳು 10 ರಿಂದ 12ರವರೆಗೆ ಮೂರುದಿನಗಳು ನಡೆಯಲಿರುವ ರಾಜ್ಯ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದಿಂದ ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸಲಿರುವ ತಾಲ್ಲೂಕಿನ 16 ಕುಸ್ತಿ ಪಟುಗಳಿಗೆ ಶಿಕ್ಷಣ ಇಲಾಖೆ ಪ್ರಯಾಣ ಭತ್ಯೆ ನೀಡಲು ಒಪ್ಪಿದೆ.

ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸುವ ಕುಸ್ತಿ ಹಾಗೂ ಟೇಬಲ್ ಟೆನ್ನಿಸ್ ಕ್ರೀಡಾಪಟುಗಳಿಗೆ ಪ್ರಯಾಣ ಭತ್ಯೆ ನೀಡದ ಕುರಿತು ಪ್ರಜಾವಾಣಿ ಪತ್ರಿಕೆ ಗುರುವಾರದ ಸಂಚಿಕೆಯಲ್ಲಿ `ಭತ್ಯೆ ಇಲ್ಲ; ಅತಂತ್ರದಲ್ಲಿ ಸ್ಪರ್ಧಿಗಳು~ ಎಂಬ ವರದಿ ಪ್ರಕಟಿಸಿತ್ತು.

ವರದಿಗೆ ಸ್ಪಂದಿಸಿದ  ಶಿಕ್ಷಣ ಇಲಾಖೆ ಜಿಲ್ಲಾ ದೈಹಿಕ ಶಿಕ್ಷಣ ಅಧೀಕ್ಷಕ ಮಲ್ಲಪ್ಪ, `ಹಿರಿಯ ಅಧಿಕಾರಿಗಳ ಒಪ್ಪಿಗೆ ಪಡೆಯಲಾಗಿದ್ದು, ಈಗಾಗಲೇ ಜಿಲ್ಲಾ ಮಟ್ಟದಲ್ಲಿ ಆಯ್ಕೆಗೊಂಡಿರುವ 16 ಸ್ಪರ್ಧಿಗಳು ಮತ್ತು ತಂಡದ ವ್ಯವಸ್ಥಾಪಕರಿಗೆ ಪ್ರಯಾಣ ಭತ್ಯೆ ಹಾಗೂ ಪ್ರತಿ ದಿನ ಊಟಕ್ಕಾಗಿ 90 ರೂ. ಗಳನ್ನು  ನೀಡಲು ಮುಂದಾಗಿದೆ ಎಂದು ತಿಳಿಸಿದ್ದಾರೆ.

ಪತ್ರಿಕೆಯ ವರದಿ, ಇಲಾಖೆಯ ಸ್ಪಂದನೆ ಕುರಿತು ಸಂತಸ ವ್ಯಕ್ತಪಡಿಸಿದ ಕುಸ್ತಿ ಪಟು ಮನೋಜ್ ಮತ್ತು ಚೇತನ್, `ರಾಜ್ಯಮಟ್ಟದ ಪಂದ್ಯಗಳಲ್ಲಿ ಜಯಗಳಿಸಿ, ನಮ್ಮ ಮಾರುತಿ ವ್ಯಾಯಾಮ ಶಾಲೆಗೆ ಹಾಗೂ ಗುರುಗಳಾದ ಪೈಲ್ವಾನ್ ಮಂಜುನಾಥ್ ಅವರಿಗೆ ಹೆಸರು ತರುತ್ತೇವೆ~ ಎಂದು `ಪತ್ರಿಕೆ~ಗೆ ತಿಳಿಸಿದ್ದಾರೆ.

`ಅಳಿವಿನಂಚಿನಲ್ಲಿರುವ ಪಾರಂಪರಿಕ ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚು ಪ್ರೋತ್ಸಾಹ ನೀಡುವ ಅವಶ್ಯಕತೆ ಇದೆ.  ಇತ್ತೀಚೆಗೆ ಕ್ರೀಡಾ ಇಲಾಖೆಯೇ ಇಂಥ ಕ್ರೀಡೆಗಳಿಗೆ ಹೆಚ್ಚು ಉತ್ತೇಜನ ನೀಡುತ್ತಿಲ್ಲ. ಇಂಥ ಹೊತ್ತಿನಲ್ಲಿ `ಪತ್ರಿಕೆ~ ಕ್ರೀಡಾಪಟುಗಳ ನೋವನ್ನು ಅರ್ಥ ಮಾಡಿಕೊಂಡು ವರದಿ ಪ್ರಕಟಿಸಿದೆ. ಪತ್ರಿಕೆಗೆ ಧನ್ಯವಾದಗಳು~ ಎಂದು ತರಬೇತುದಾರ ಪೈಲ್ವಾನ್ ಮಂಜುನಾಥ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT