ADVERTISEMENT

ಹಸಿದ ರೈತ ಸಂಕುಲದಲ್ಲಿ ಮಂದಹಾಸ...

​ಪ್ರಜಾವಾಣಿ ವಾರ್ತೆ
Published 5 ಮೇ 2012, 4:10 IST
Last Updated 5 ಮೇ 2012, 4:10 IST
ಹಸಿದ ರೈತ ಸಂಕುಲದಲ್ಲಿ ಮಂದಹಾಸ...
ಹಸಿದ ರೈತ ಸಂಕುಲದಲ್ಲಿ ಮಂದಹಾಸ...   

ಆನೇಕಲ್: ಪಟ್ಟಣದಲ್ಲಿ ಮೊನ್ನಿನ ಮಂಗಳವಾರ 31.2ಮಿ.ಮೀ. ಹಾಗೂ ಜಿಗಣಿಯಲ್ಲಿ 49ಮಿ.ಮೀ. ಮಳೆಯಾಗಿದ್ದು ರೈತರಲ್ಲಿ ಸಂತಸ ಮೂಡಿಸಿದೆ. ರೈತರು ಬುಧವಾರದಿಂದ ಉಳುಮೆ ಕಾರ್ಯದಲ್ಲಿ ತೊಡಗಿದ್ದ ದೃಶ್ಯ ಅಲ್ಲಲ್ಲಿ ಕಂಡು ಬಂದಿದೆ. 

ಬಿಲಿನಿಂದ ತತ್ತರಿಸಿದ್ದ ಜನತೆಗೆ ಈ ಮಳೆ ತಂಪು ನೀಡಿದೆ. ಅಂತರ್ಜಲ ಬತ್ತಿ ಹೋಗಿದ್ದು ಕೊಳವೆ ಬಾವಿಗಳಲ್ಲಿ ಹೆಚ್ಚಿನ ನೀರನ್ನು ರೈತರು ನಿರೀಕ್ಷಿಸುತ್ತಿದ್ದಾರೆ.

`4 ತಿಂಗಳಿಂದ ಮಳೆಯಿಲ್ಲದೆ ಕೊಳವೆ ಬಾವಿಗಳಲ್ಲಿ ನೀರು ಬರಿದಾಗಿತ್ತು. ಈ ಮಳೆಯಿಂದ ನೀರು ಹೆಚ್ಚಾಗಿದೆ. ಮಳೆ ಇದೇ ರೀತಿ ಮುಂದಿನ ದಿನಗಳಲ್ಲಿ ಚೆನ್ನಾಗಿ ಸುರಿದರೆ ನೀರಿನ ಸಮಸ್ಯೆ ಬಹುತೇಕ ನಿವಾರಣೆಯಾಗಲಿದೆ ಎಂಬುದು ಸೋಲೂರಿನ ರೈತ ಕೃಷ್ಣಪ್ಪ ಅವರ ಅಭಿಪ್ರಾಯ.

`ಸದ್ಯ 10-15 ದಿನಗಳಿಗೊಮ್ಮೆ ಪಟ್ಟಣದಲ್ಲಿ ಕುಡಿಯುವ ನೀರಿನ ಪೂರೈಕೆಯಾಗುತ್ತಿದೆ. ಉತ್ತಮ ಮಳೆಯಾದಲ್ಲಿ ಕೊಳವೆ ಬಾವಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಲಿದ್ದು ಪಟ್ಟಣದ ಜನರನ್ನು ಕಂಗೆಡಿಸಿರುವ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗಲಿದೆ~ ಎಂಬ ಆಶಾಭಾವ ಪುರಸಭೆಯ ನೀರು ನಿರ್ವಹಣ ವಿಭಾಗದ ಚಂದ್ರಪ್ಪ ಅವರದ್ದು.

ವಾಡಿಕೆಯ ಮಳೆ ಜನವರಿ ತಿಂಗಳಲ್ಲಿ 5.3, ಫೆಬ್ರುವರಿ 6.3, ಮಾರ್ಚ್ 8.8, ಏಪ್ರಿಲ್ 46.2, ಮೇ ತಿಂಗಳಿನಲ್ಲಿ 118.6ರಷ್ಟು ಆಗಬೇಕಾಗಿತ್ತು ಆದರೆ ಈ ವರ್ಷ ಜನವರಿಯಿಂದ ಮಾರ್ಚ್‌ವರೆಗೆ ಒಂದು ಹನಿ ಸಹಾ ಮಳೆ ಬೀಳಲಿಲ್ಲ. ಕಳೆದ ವರ್ಷ ಏಪ್ರಿಲ್ ತಿಂಗಳಿನಲ್ಲಿ 139.7 ಮಿ.ಮೀ. ಹಾಗೂ ಮೇ ತಿಂಗಳಿನಲ್ಲಿ 154.25 ಮಿ.ಮೀ. ಮಳೆಯಾಗಿತ್ತು ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ. ಈ ವರ್ಷ ಏಪ್ರಿಲ್ ತಿಂಗಳಿನಲ್ಲಿ ಕೇವಲ 24.6 ಮಿ.ಮೀ. ಮಾತ್ರ ಮಳೆಯಾಗಿದೆ.

ಧರಣಿಯ ದಾಹಕ್ಕೆ ತಂಪೆರದ ಭರಣಿ
ವಿಜಯಪುರ: ಈ ವರ್ಷದ ತುಂತುರು ಭರಣಿ ಮಳೆ ನಿಜಕ್ಕೂ ಧರಣಿಯನ್ನು ತಂಪಾಗಿಸಿದೆ. ಬೇಸಿಗೆಯ ಬಿಸಿ, ಬರದ ಛಾಯೆಯಿಂದ ತತ್ತರಿಸಿದ್ದ ವಿಜಯಪುರ ಸುತ್ತಮುತ್ತಲಿನ ಭೂ ಪ್ರದೇಶ ಭರಣಿ ಮಳೆಯ ತಂಪು ಸಿಂಚನಕ್ಕೆ ಒಂದಷ್ಟು ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ.

ಕೆರೆ ಕುಂಟೆಗಳು ತುಂಬಿ ನೀರಿನ ಬರ ನೀಗಿಸುವಷ್ಟು ಮಳೆ ಬಂದಿಲ್ಲವಾದರೂ ವಾತಾವರಣವನ್ನು ತಂಪಾಗಿಸಿದೆ. ಕಳೆದ ವರ್ಷ ಏಪ್ರಿಲ್‌ನಲ್ಲಿ 4ದಿನ ಮಳೆ (149 ಎಂ.ಎಂ) ಯಾಗಿತ್ತು. ಇದರಿಂದ ಸ್ವಲ್ಪ ಮಟ್ಟಿಗೆ ದ್ರಾಕ್ಷಿಗೆ ಹಾನಿಯಾಗಿತ್ತು. ಈ ವರ್ಷ ಏಪ್ರಿಲ್ ಕೊನೆಯ ವಾರದಲ್ಲಿ 2 ದಿನ ಒಟ್ಟು 9 ಮಿ.ಮೀ.ನಷ್ಟು ಮಳೆಯಾಗಿದೆ. ದ್ರಾಕ್ಷಿ ಬೆಳೆಗೆ ಯಾವುದೇ ಹಾನಿಯಾಗಿಲ್ಲ. ವಾತಾವರಣವೂ ತಂಪಾಗಿದ್ದು ಉಳುಮೆಗೆ ಭೂಮಿ ಹಸನಾಗಿದೆ.

ಭರಣಿ ಮಳೆ ತಕ್ಕ ಸಮಯದಲ್ಲಿ ಆದರೆ ಮುಂದಿನ ಮಳೆಗಳು ಚೆನ್ನಾಗಿ ಆಗುತ್ತವೆ ಎಂಬ ನಂಬಿಕೆ ಜನರಲ್ಲಿದೆ. ಆದರೂ ಬರ ಪರಿಸ್ಥಿತಿ ಮತ್ತು ಮೇವಿನ ತೊಂದರೆಯಂತೂ ಯಥಾಸ್ಥಿತಿಯಲ್ಲೇ ಮುಂದುವರಿದಿದೆ.

`ರಾಗಿ ಬಿತ್ತನೆಗೆ ಇನ್ನೂ 2 ತಿಂಗಳು ಇರುವುದರಿಂದ ಬರುವ ತಿಂಗಳಲ್ಲಿ ಇದೇ ರೀತಿ 5-6 ದಿನ ಮಳೆಯಾದರೆ ಉಳುಮೆಗೆ ಅನುಕೂಲವಾಗಲಿದೆ~ ಎನ್ನುತ್ತಾರೆ ಚೀಮಾಚನಹಳ್ಳಿ ರೈತ ದೇವರಾಜ್ ಅವರು.

ಗರಿಗೆದರಿಲ್ಲ ಕೃಷಿ...
ದೇವನಹಳ್ಳಿ: ಏಪ್ರಿಲ್ ತಿಂಗಳಿನಲ್ಲಿ ಈವರೆಗೆ ಕೇವಲ 16 ಮಿ.ಮೀ ಮಳೆಯಾಗಿದೆ. ಕಳೆದ ಬಾರಿ ಇದೇ ಅವಧಿಯಲ್ಲಿ 26 ಮಿ.ಮೀ. ಮಳೆಯಾಗಿತ್ತು. ಹೋಲಿಕೆ ಮಾಡಿದಾಗ ಈ ಬಾರಿ 10 ಮಿ.ಮೀ. ಮಳೆ ಕಡಿಮೆಯಾಗಿದ್ದು ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ.   ಏಪ್ರಿಲ್ ತಿಂಗಳಾಂತ್ಯಕ್ಕೆ 2 ದಿನ ಮಳೆ ಸುರಿದಿದೆ.

ಆದರೆ ವಾಡಿಕೆ ಪ್ರಮಾಣದ ಮಳೆ ಸುರಿದಿಲ್ಲ. ಚನ್ನರಾಯಪಟ್ಟಣ ಹೋಬಳಿಯಲ್ಲಿ 26 ಮಿ.ಮೀ. ಮಳೆ ಬಿದ್ದಿದ್ದು ತಾಲ್ಲೂಕಿನಲ್ಲಿ ಗರಿಷ್ಠ ಮಳೆಯಾಗಿರುವ ಹೋಬಳಿ ಎನಿಸಿದೆ. ವಿಜಯಪುರ ಹೋಬಳಿಯಲ್ಲಿ 9.2ಮಿ.ಮೀ, ದೇವನಹಳ್ಳಿ ಪಟ್ಟಣ ಮತ್ತು ಕಸಬಾ ಹೋಬಳಿಯಲ್ಲಿ ಕನಿಷ್ಠ 6 ಮಿ.ಮೀ ಮಳೆ ಬಿದ್ದಿದೆ. ತಾಲ್ಲೂಕಿನಲ್ಲಿ ಒಟ್ಟು ಸರಾಸರಿ 16 ಮಿಮಿ. ಮಳೆಯಾಗಿದೆ. 

ಕಳೆದ ವರ್ಷ ಈ ವೇಳೆಗೆ ತಾಲ್ಲೂಕಿನಾದ್ಯಂತ 28 ಹೆಕ್ಟೇರ್‌ನಷ್ಟು ಸೆಣಬಿನ ಬಿತ್ತನೆಯಾಗಿತ್ತು. ಕೃಷಿ ಚಟುವಟಿಕೆಯೂ ಬಿರಸು ಪಡೆದಿತ್ತು. ಆದರೆ ಈ ಬಾರಿ ಕೃಷಿ ಚಟುವಟಿಕೆ ಆರಂಭವಾಗಿದ್ದರೂ ಬಿತ್ತನೆ ಮತ್ತು ಕೃಷಿ ಚಟುವಟಿಕೆಗಳಿಗೆ ಹಿನ್ನೆಡೆಯಾಗಿದೆ.
 
ಹವಾಮಾನ ಇಲಾಖೆಯ ಮಾಹಿತಿಯಂತೆ ಪ್ರಸಕ್ತ ವರ್ಷ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ. ಈಗಾಗಲೇ ಗ್ರಾಮಾಂತರ ಜಿಲ್ಲೆಯ ಇತರೆ ತಾಲ್ಲೂಕುಗಳಲ್ಲಿ ಉತ್ತಮ ಮಳೆಯಾಗಿದೆಯಾದರೂ ದೇವನಹಳ್ಳಿ ತಾಲ್ಲೂಕಿನತ್ತ ವರುಣನ ಕೃಪೆ ಆಗಿಲ್ಲ. ವಾಡಿಕೆ ಪ್ರಮಾಣದ ಮಳೆ ಮಳೆ ಬಂದಲ್ಲಿ ಕೃಷಿ ಚಟುವಟಿಕೆಯ ಸಿದ್ಧತೆಗಳು ಚುರುಕುಗೊಳ್ಳಲಿವೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.

ಇನ್ನೂ ಹದಗೊಳ್ಳದ ಭೂಮಿ
ದೊಡ್ಡಬಳ್ಳಾಪುರ: ತಾಲ್ಲೂಕಿನಲ್ಲಿ 2011ರ ನವೆಂಬರ್ ನಂತರ ಏಪ್ರಿಲ್ 27 ರಿಂದ ಎರಡು ದಿನ ಮಾತ್ರ ಮಳೆ ಬಿದ್ದಿದೆ. ಮಧುರೆ ಹೋಬಳಿಯಲ್ಲಿ 33.5 ಮಿ.ಮೀ. ಕಸಬಾ ಹೋಬಳಿ 15 ಮಿ.ಮೀ. ಸಾಸಲು ಹೋಬಳಿ 17 ಮಿ.ಮೀ ಮಳೆಯಾಗಿದೆ ಎಂದು ಕೃಷಿ ಇಲಾಖೆ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಶ್ರೀರಾಮರೆಡ್ಡಿ ತಿಳಿಸಿದ್ದಾರೆ. 

ತಾಲ್ಲೂಕಿನ ಬೆಟ್ಟದ ಸಾಲಿನಲ್ಲಿ ಬರುವ ಗುಂಡಮಗೆರೆ, ಚಿಕ್ಕರಾಯಪ್ಪನ ಹಳ್ಳಿ ಸೇರಿದಂತೆ ಮೂರ‌್ನಾಲ್ಕು ಕೆರೆಗಳನ್ನು ಹೊರತುಪಡಿಸಿದರೆ ಉಳಿದಂತೆ ತಾಲ್ಲೂಕಿನ ಯಾವುದೇ ಕೆರೆಯಲ್ಲೂ ನೀರು ಇಲ್ಲ. ತಾಲ್ಲೂಕಿನಲ್ಲಿ ಹದವಾಗಿ ಮಳೆಯಾಗಿ ರಾಗಿ, ಜೋಳ ಸೇರಿದಂತೆ ಮಳೆ ಆಶ್ರಯದಲ್ಲಿ ಬೆಳೆಯಲಾಗಿದ್ದ ಬೆಳೆ ಬಂದಿದೆಯೇ ವಿನಃ ಕಳೆದ ವರ್ಷದ ಮಳೆಗಾಲದಲ್ಲಿ ಯಾವುದೇ ಕೆರೆಗಳು ತುಂಬಿಲ್ಲ. ಹೀಗಾಗಿ ಕುಡಿಯುವ ನೀರಿನ ಕೊರತೆ ತೀವ್ರವಾಗಿದೆ. ತಾಲ್ಲೂಕಿನ ಆರು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ನೀರಿನ ಕೊರತೆ ಇರುವ ಗ್ರಾಮಗಳಿಗೆ ಟ್ಯಾಂಕರ್‌ಗಳ ಮೂಲಕವೇ ನೀರು ಸರಬರಾಜು ಮಾಡಲಾಗುತ್ತಿದೆ.

`2011ಕ್ಕೆ ಹೋಲಿಕೆ ಮಾಡಿದರೆ ಏಪ್ರಿಲ್ ತಿಂಗಳ ವೇಳೆಗಾಗಲೆ ಎರಡು ಬಾರಿ ತಾಲ್ಲೂಕಿನಾದ್ಯಂತ ಜೋರು ಮಳೆಯಾಗಿ ಕೆರೆ,ಕುಂಟೆಗಳಿಗೆ ನೀರು ಹರಿದಿತ್ತು. ಅಲ್ಲದೆ ಮೇ ತಿಂಗಳಲ್ಲೇ ಮುಂಗಾರು ಉಳುಮೆ ಆರಂಭವಾಗಿತ್ತು.  ಈ ಬಾರಿ ಮೇ ತಿಂಗಳು ಪ್ರಾರಂಭವಾದರೂ ಉಳುಮೆ ಮಾಡಲು ಹದವಾಗುವಷ್ಟು ಮಳೆ ಆಗಿಲ್ಲ~ ಎನ್ನುತ್ತಾರೆ ತಾಲ್ಲೂಕಿನ ತೂಬಗೆರೆ ಹೋಬಳಿಯ ಚನ್ನಾಪುರ ಗ್ರಾಮದ ಮುನಿನಂಜಪ್ಪ.

ಬಿಸಿಲಿನ ತಾಪ:  ತಾಲ್ಲೂಕಿನಲ್ಲಿ ಈ ವರ್ಷವೂ ಬಿಸಿಲಿನ ತಾಪ ಏರಿಕೆಯಾಗಿದ್ದು ಮಧ್ಯಾಹ್ನದ ವೇಳೆಯ ದೈನಂದಿನ ತಾಪಮಾನ 32 ಡಿಗ್ರಿಯಷ್ಟು ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.