ADVERTISEMENT

ಹೃದ್ರೋಗ: ಕಾಳಜಿ ವಹಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2011, 19:30 IST
Last Updated 8 ಅಕ್ಟೋಬರ್ 2011, 19:30 IST

ದೊಡ್ಡಬಳ್ಳಾಪುರ: `ಮನುಷ್ಯನ ಹೃದಯಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಆದರೆ ಸೂಕ್ತ ಸಮಯಲ್ಲಿ ಪರೀಕ್ಷೆ ಮಾಡಿಸಿಕೊಂಡರೆ ಕೇವಲ ಒಂದು ರೂಪಾಯಿ ಮಾತ್ರೆಯಿಂದ ಹೃದಯಾಘಾತ ತೆಡೆಯಲು ಸಾಧ್ಯ~ ಎಂದು ಡಾ.ಎಚ್.ಜಿ.ವಿಜಯಕುಮಾರ್ ಹೇಳಿದರು.

ಅವರು ತಾಲ್ಲೂಕಿನ ವೀರಾಪುರ ಗ್ರಾಮದಲ್ಲಿ ಬಿರ್ಲಾ ಸೂಪರ್ ಬಲ್ಕ್ ಟರ್ಮಿನಲ್, ಶ್ರೀರಾಮ ಆಸ್ಪತ್ರೆ, ಬೆಂಗಳೂರಿನ ಎಂ.ವಿ.ಜೆ ವೈದ್ಯಕೀಯ ವಿದ್ಯಾಲಯದ ಸಹಯೋಗದೊಂದಿಗೆ ಶನಿವಾರ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

`ಗ್ರಾಮೀಣ ಪ್ರದೇಶದ ಜನರಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಕಡಿಮೆ. ಕಾಯಿಲೆ ಉಲ್ಬಣವಾದಾಗ ಲಕ್ಷಾಂತರ ರೂಪಾಯಿ ಕರ್ಚು ಮಾಡಿದರು ಕಾಯಿಲೆ ವಾಸಿಯಾಗುವುದಿಲ್ಲ ಎನ್ನುವ ಸತ್ಯದ ಅರಿವು ಕಡಿಮೆ. ಗ್ರಾಮಗಳಲ್ಲಿ ಉಚಿತ ಆರೋಗ್ಯ ಶಿಬಿರಗಳು ನಡೆಸುವುದರಿಂದ ನಮಗೆ ತಿಳಿಯದೇ ಇರುವ ರಕ್ತದ ಒತ್ತಡ, ಸಕ್ಕರೆ ಕಾಯಿಲೆಗಳ ಪತ್ತೆಯಾಗುತ್ತವೆ. ಬಹುತೇಕ ಕಾಯಿಲೆಗಳು ಗುಣವಾಗದೇ ಇರಲು ಸಕ್ಕರೆ ಕಾಯಿಲೆಯೇ ಕಾರಣವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ರಕ್ತದ ಪರೀಕ್ಷೆ ಮುಖ್ಯ. ಅಲ್ಲದೆ ಸಮತೋಲ ಆಹಾರ ಸೇವನೆ ಕಡೆಗೆ ಹೆಚ್ಚು ಒತ್ತು ನೀಡಬೇಕು~ ಎಂದು ಹೇಳಿದರು.

`ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ತಿ.ರಂಗರಾಜು ಮಾತನಾಡಿ, ವೀರಾಪುರ, ಮಜರಾಹೊಸಹಳ್ಳಿ, ಹಾಗೂ ತಿಪ್ಪಾಪುರ ಗ್ರಾಮಗಳು ತಾಲ್ಲೂಕಿನಲ್ಲೇ ಅತ್ಯಂತ ಕೆಟ್ಟ ಪರಿಸರ ಹೊದಿರುವ ಗ್ರಾಮಗಳಾಗಿವೆ. ಬಾಶೆಟ್ಟಿಹಳ್ಳಿಯಲ್ಲಿ ಕೈಗಾರಿಕೆಗಳು ಸ್ಥಾಪನೆಯಾದ ಮೇಲೆ ವೀರಾಪುರ, ಚಿಕ್ಕತುಮಕೂರು ಕೆರೆಗಳು ಕಲುಷಿತ ನೀರಿನಿಂದ ತುಂಬಿ ಹೋಗಿವೆ. ಅಂತರ್ಜಲ ಸಂಪೂರ್ಣವಾಗಿ ಕಲುಷಿತವಾಗಿದ್ದು, ಕುಡಿಯಲು ನೀರು ಖರೀದಿಸಲಾಗುತ್ತಿದೆ. ಇಲ್ಲಿನ ಜನರ ಬದುಕು ನರಕಯಾತನೆಯಾಗಿವೆ. ಚರ್ಮದ ಕಾಯಿಲೆಗಳಂತು ತರೆವಾರಿಯಾಗಿವೆ. ಈ ಬಗ್ಗೆ ಜನ ಸಂಘಟಿತರಾಗಿ ಹೋರಾಟ ಮಾಡುವ ಮೂಲಕ ಕೈಗಾರಿಕೆಗಳಿಂದ ಶುಧೀಕರಿಸದೆ ಕೆರೆಗೆ ನೀರು ಬಿಡುವುದನ್ನು ನಿಲ್ಲಿಸಲು ಸಾಧ್ಯವಾಗಲಿದೆ~ ಎಂದು ಕರೆ ನೀಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಎಚ್.ಪಿ.ಸುಬ್ಬೇಗೌಡ ವಹಿಸಿದ್ದರು.  ಬಿರ್ಲಾ ಸೂಪರ್ ಬಲ್ಕ್ ಟರ್ಮಿನಲ್ ವ್ಯವಸ್ಥಾಪಕ ಎಸ್.ವೆಂಕಟರಾಮನ್, ಹಣಕಾಸು ವಿಭಾಗದ ಶ್ರೀಕಾಂತ್, ಗ್ರಾ.ಪಂ.ಸದಸ್ಯ ರಂಗಪ್ಪ, ಎಸ್‌ಡಿಎಂಸಿ ಸದಸ್ಯ ಮುನಿಯಪ್ಪ, ಗ್ರಾ.ಪಂ.ಮಾಜಿ ಅಧ್ಯಕ್ಷ ಶಿವಕುಮಾರ್, ಗ್ರಾ.ಪಂ.ಉಪಾಧ್ಯಕ್ಷೆ ಇಂಧಿರಮ್ಮ, ಗ್ರಾ.ಪಂ.ಮಾಜಿ ಸದಸ್ಯ ಬಸವರಾಜ್, ಎಂಪಿಸಿಎಸ್ ಅಧ್ಯಕ್ಷ ಕೆಂಪಣ್ಣ, ಬಿರ್ಲಾ ಸೂಪರ್ ಬಲ್ಕ್ ಟರ್ಮಿನಲ್ ಮಂಜುನಾಥ್ ಮುಂತಾದವರು ಹಾಜರಿದ್ದರು.      

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.