ADVERTISEMENT

ಎಕರೆ ಭೂಮಿಗೆ ₹32 ಲಕ್ಷ ದರ

ಬೈರಗೊಂಡ್ಲು ಜಲಾಶಯಕ್ಕೆ ಬಳಕೆ–ಎತ್ತಿನಹೊಳೆಯಿಂದ ನೀರು ಸಂಗ್ರಹ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2019, 6:54 IST
Last Updated 6 ಮಾರ್ಚ್ 2019, 6:54 IST
ಶಾಸಕ ಟಿ.ವೆಂಕಟರಮಣಯ್ಯ ಸಾಗುವಳಿ ಪತ್ರಗಳನ್ನು ವಿತರಣೆ ಮಾಡಿದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಚ್.ವಿ.ಶ್ರಿವತ್ಸ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕನ್ಯಾಕುಮಾರಿ ಇದ್ದರು.
ಶಾಸಕ ಟಿ.ವೆಂಕಟರಮಣಯ್ಯ ಸಾಗುವಳಿ ಪತ್ರಗಳನ್ನು ವಿತರಣೆ ಮಾಡಿದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಚ್.ವಿ.ಶ್ರಿವತ್ಸ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕನ್ಯಾಕುಮಾರಿ ಇದ್ದರು.   

ದೊಡ್ಡಬಳ್ಳಾಪುರ: ಸಾಸಲು ಹೋಬಳಿಯಲ್ಲಿ ಎತ್ತಿನಹೊಳೆಯಿಂದ ಬರುವ ನೀರು ಸಂಗ್ರಹಣೆಗೆ ನಿರ್ಮಿಸ ಲಾಗುತ್ತಿರುವ ಬೈರ ಗೊಂಡ್ಲು ಜಲಾಶಯಕ್ಕಾಗಿ ಮುಳುಗಡೆ ಯಾಗಲಿರುವ ರೈತರ ಕೃಷಿ ಭೂಮಿಗೆ ಸರ್ಕಾರಿ ಬೆಲೆಗಿಂತಲು ಒಂದಕ್ಕೆ ನಾಲ್ಕು ಪಟ್ಟು ಪರಿಹಾರ ನೀಡಲು ಸರ್ಕಾರ ತೀರ್ಮಾನಿಸಿದೆ. ಒಂದು ಎಕರೆಗೆ ₹32 ಲಕ್ಷ ಪರಿಹಾರ ರೈತರಿಗೆ ದೊರೆಯಲಿದೆ ಎಂದು ಶಾಸಕ ಟಿ.ವೆಂಕಟರಮಣಯ್ಯ ಹೇಳಿದರು.

ತಾಲ್ಲೂಕಿನ ಸಾಸಲು, ದೊಡ್ಡ ಬೆಳವಂಗಲ ಹೋಬಳಿ ವ್ಯಾಪ್ತಿಯಲ್ಲಿ ಮಂಗಳವಾರ ಆಯೋಜಿಸಿದ್ದ ಸಾಗುವಳಿ ಭೂಮಿ ಮಂಜೂರಾತಿ ಹಕ್ಕುಪತ್ರ ಹಾಗೂ ಪಿಂಚಣಿ ಗುರುತಿನ ಚೀಟಿ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಯಲು ಸೀಮೆಯಲ್ಲಿನ ನೀರಿನ ಬವಣೆಯನ್ನು ನೀಗಿಸಲು ಸಂಸತ್ ಸದಸ್ಯ ಎಂ.ವೀರಪ್ಪಮೊಯಿಲಿ ಅವರು ಮಹತ್ವಾಕಾಂಕ್ಷಿ ಯೋಜನೆಯಾದ ಎತ್ತಿನ ಹೋಳೆ ಯೋಜನೆ ಕಾಮಗಾರಿ ಸಕಲೇಶಪುರದವರೆಗೂ ಪೂರ್ಣಗೊಂಡಿದೆ. ತಾಲ್ಲೂಕಿನ ಸಾಸಲು ಬೈರಗೊಂಡ್ಲು ಬಳಿ ನಿರ್ಮಾಣ ವಾಗಲಿರುವ ಎತ್ತಿನಹೊಳೆ ಯೋಜನೆಗೆ ಅಣೆಕಟ್ಟು ನಿರ್ಮಾಣಕ್ಕೆ 7 ಗ್ರಾಮಗಳು ಮತ್ತು 2,500 ಎಕರೆ ಕೃಷಿ ಭುಮಿ ಮುಳುಗಡೆಯಾಗುತ್ತಿದೆ. ರೈತರ ಹಿತವನ್ನು ಕಾಪಾಡಲು ಒಂದಕ್ಕೆ ನಾಲ್ಕು ಪಟ್ಟು ಪರಿಹಾರ ನಿಗದಿಪಡಿಸುವ ಮೂಲಕ ಸಮ್ಮಿಶ್ರ ಸರ್ಕಾರ ಎಕರೆಗೆ ₹8ಲಕ್ಷ ಇದ್ದ ಪರಿಹಾರದ ಮೊತ್ತವನ್ನು ₹32ಲಕ್ಷಕ್ಕೆ ಏರಿಕೆ ಮಾಡಿ ಅಧಿವೇಶನದಲ್ಲಿ ನಿರ್ಣಯ ಅಂಗೀಕರಿಸಲಾಗಿದೆ ಎಂದರು.

ADVERTISEMENT

2018ರಲ್ಲಿ ಅರ್ಜಿಸಲ್ಲಿಸಿದ ರೈತರಿಗೆ ಸಾಂಕೇತಿವಾಗಿ ಹಕ್ಕು ಪತ್ರ ವಿತರಿಸುತ್ತಿದ್ದು 2018ಕ್ಕೂ ಮುಂಚೆ ಸಲ್ಲಿಸಿದ ಅರ್ಹ ಫಲಾನುಭವಿಗಳಿಗೆ ಲೋಕಸಭೆ ಚುನಾವಣೆ ಮುಕ್ತಾಯವಾದ ನಂತರ ಅದಾಲತ್ ಕಾರ್ಯಕ್ರಮವನ್ನು ನಡೆಸಲು ತೀರ್ಮಾನಿಸಲಾಗಿದೆ. ಪಿಂಚಣಿ, ಕಂದಾಯ ಅದಾಲತ್ ನಂತೆಯೇ ಸ್ಥಳದಲ್ಲಿಯೇ ಸಾಗುವಳಿ ಚೀಟಿ ಗೊಂದಲವನ್ನು ಪರಿಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದು ಹಕ್ಕುಪತ್ರ ದೊರಕದ ರೈತರು ಆತಂಕಕ್ಕೆ ಒಳಗಾಗಬಾರದು ಎಂದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಚ್.ವಿ.ಶ್ರಿವತ್ಸ ಮಾತನಾಡಿ, 2018ರಲ್ಲಿ ಅರ್ಜಿ ಸಲ್ಲಿಸಿದ ರೈತರಿಗೆ ಸಾಂಕೇತಿಕವಾಗಿ ಸಾಸಲು ವ್ಯಾಪ್ತಿಯಲ್ಲಿ 37, ದೊಡ್ಡಬೆಳವಂಗಲ ವ್ಯಾಪ್ತಿಯಲ್ಲಿ 42, ಮಧುರೆ ಹೋಬಳಿಯಲ್ಲಿ 8 ಜನ ರೈತರಿಗೆ ಸಾಗುವಳಿ ಪತ್ರಗಳನ್ನು ನೀಡಲಾಗಿದೆ. ಈ ಮುಂಚೆ ಅರ್ಜಿಸಲ್ಲಿಸಿದ ರೈತರಿಗೂ ಹಕ್ಕು ಪತ್ರ ಒದಗಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿದ್ದಾರೆ, ಸಾಗುವಳಿ ಅರ್ಜಿ ಸಲ್ಲಿಸಲು ಮಾರ್ಚ್‌ 31ರವರೆಗೂ ಅವಕಾಶವಿದ್ದು ರೈತರು ಅರ್ಜಿ ಸಲ್ಲಿಬಹುದು ಎಂದರು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕನ್ಯಾಕುಮಾರಿ ಶ್ರೀನಿವಾಸ್, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಡಿ.ಸಿ.ಶಶಿಧರ್, ಪದ್ಮಾವತಿ ಅಣ್ಣಯ್ಯಪ್ಪ, ಮುತ್ತುಲಕ್ಷ್ಮೀ ವೆಂಕಟೇಶ್, ಭೂ ಮಂಜೂರಾತಿ ಸಮಿತಿ ಸದಸ್ಯರಾದ ಎಂ.ಬೈರೇಗೌಡ, ಸಾಸಲು ಪಿಡಿಒ ತಿರುಪತಿ, ಮುಖಂಡರಾದ ರಾಜ್ ಕುಮಾರ್, ಅಣ್ಣಯ್ಯಪ್ಪ, ಪಿ.ಸಿ.ನರಸಿಂಹಮೂರ್ತಿ, ಡಿ.ಜಿ.ಕೃಷ್ಣಮೂರ್ತಿ, ಲಾವಣ್ಯನಾಗರಾಜ್, ರಾಜಗೋಪಾಲ್, ಗಂಗಾಧರ್ ಇದ್ದರು.

ಹಕ್ಕುಪತ್ರ ವಿತರಣೆ

ತಹಶೀಲ್ದಾರ್ ಎಂ.ಕೆ.ರಮೇಶ್ ಮಾತನಾಡಿ, ಬಗುರ್ ಹುಕುಂ ಸಾಗುವಳಿ ಫಲಾನುಭವಿಗಳಿಗೆ ಹಕ್ಕುಪತ್ರ ಹಾಗೂ ಪಿಂಚಣಿಯ ಗುರುತಿನ ಚೀಟಿಯನ್ನು ವಿತರಿಸಲಾಗುತ್ತಿದ್ದು, ಕೆಲ ಗೊಂದಲಗಳಿಂದ ವಿತರಣೆ ಯಾಗದ ಹಕ್ಕುಪತ್ರ ಹಾಗೂ ಗುರುತಿನ ಚೀಟಿಗಳನ್ನು ತ್ವರಿತವಾಗಿ ಪರಿಶೀಲನೆ ನಡೆಸಿ ನಾಲ್ಕು ತಿಂಗಳ ಒಳಗಾಗಿ ವಿತರಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.