ADVERTISEMENT

ಬೆಂಗಳೂರು ಗ್ರಾಮಾಂತರ ಜಿಲ್ಲೆ ನರೇಗಾ ಯೋನನೆಗೆ ₹44.88ಕೋಟಿ ಬಿಡುಗಡೆ 

ಜಿಲ್ಲಾ ಅಭಿವೃದ್ಧಿ ಸಮನ್ವಯ ಮೇಲ್ವಿಚಾರಣಾ ಸಮಿತಿ ಸಭೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2020, 12:40 IST
Last Updated 7 ಮಾರ್ಚ್ 2020, 12:40 IST
ಮೇಲ್ವಿಚಾರಣಾ ಸಮಿತಿ ಸಭೆಯಲ್ಲಿ ಬಿ.ಎನ್.ಬಚ್ಚೇಗೌಡ ಉಪಸ್ಥಿತರಿದ್ದರು .
ಮೇಲ್ವಿಚಾರಣಾ ಸಮಿತಿ ಸಭೆಯಲ್ಲಿ ಬಿ.ಎನ್.ಬಚ್ಚೇಗೌಡ ಉಪಸ್ಥಿತರಿದ್ದರು .   

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ ನರೇಗಾ ಯೋಜನೆಯವಿವಿಧ ಕಾಮಗಾರಿಗಳಿಗೆ 2019–20ನೇ ಸಾಲಿನಲ್ಲಿ ₹ 61.88 ಕೋಟಿ ಗುರಿ ಹೊಂದಲಾಗಿದ್ದು, ಇದರಲ್ಲಿ ₹ 44.88 ಕೋಟಿ ಬಿಡುಗಡೆಯಾಗಿದೆ ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕರಿಯಪ್ಪ ಹೇಳಿದರು.

ಇಲ್ಲಿನ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಮೇಲ್ವಿಚಾರಣಾ ಸಮಿತಿ (ದಿಶಾ) ಸಭೆಯಲ್ಲಿ ಅವರು ಮಾಹಿತಿ ನೀಡಿದರು.

ಸ್ಥಳೀಯರಿಗೆ ಉದ್ಯೋಗ ನೀಡುವ ಮುಖ್ಯ ಯೋಜನೆ ನರೇಗಾದಲ್ಲಿ ಒಬ್ಬರಿಗೆನಿತ್ಯ ₹ 249 ರೂಪಾಯಿ ನೀಡಲಾಗುತ್ತಿದೆ. ಕಳೆದ ವರ್ಷ 11.25 ಲಕ್ಷ ಮಾನವ ದಿನಗಳನ್ನು ಸೃಷ್ಠಿಸಲಾಗಿತ್ತು. ಜಾಬ್‌ ಕಾರ್ಡ್ ಹೊಂದಿರುವ 82,640 ಮಂದಿ ನಾಗರಿಕರಲ್ಲಿ 44,000 ಮಂದಿಗೆ ಉದ್ಯೋಗ ನೀಡಲಾಗಿತ್ತು. ಇವರು ಯೋಜನೆಯ ವಿವಿಧ ಕಾಮಗಾರಿಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ ಎಂದು ಸಭೆಗೆ ಮಾಹಿತಿ ನೀಡಿದರು.

ADVERTISEMENT

ಸಂಸದ ಹಾಗೂ ಮೇಲ್ವಿಚಾರಣಾ ಸಮಿತಿ ಅಧ್ಯಕ್ಷ ಬಿ.ಎನ್.ಬಚ್ಚೇಗೌಡ ಮಾತನಾಡಿ, ನರೇಗಾ ಯೋಜನೆಯಡಿ ಕೆಲವು ಕಡೆ ಅಕ್ರಮವಾಗಿದೆ ಎಂದು ದೂರುಗಳು ಬಂದ ಹಿನ್ನಲೆಯಲ್ಲಿ, ಕೇಂದ್ರ ಸರ್ಕಾರ ನರೇಗಾಕ್ಕೆ ಮೀಸಲಿಟ್ಟ ವಾರ್ಷಿಕ ₹ 69,000 ಕೋಟಿ ಪೈಕಿ ₹ 61,000 ಕೋಟಿ ಬಿಡುಗಡೆ ಮಾಡಿದೆ. ಚೆಕ್ ಡ್ಯಾಂಗಳಿಗೆ ಒತ್ತು ನೀಡಿ ಜಿಲ್ಲೆಯ ಜಲಮೂಲಗಳನ್ನು ಸಂರಕ್ಷಿಸಬೇಕು ಎಂದು ಹೇಳಿದರು.

ಉಪಕಾರ್ಯದರ್ಶಿ ಕರಿಯಪ್ಪ ಮಾತನಾಡಿ, ಜಿಲ್ಲೆಯಲ್ಲಿ 100 ಸರ್ಕಾರಿ ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಶಾಲಾ ಅಂಗಳದಲ್ಲಿ ಉದ್ಯಾನ ಬೆಳೆಸುವುದು ಮತ್ತು ಶಿಕ್ಷಣಕ್ಕೆ ಪೂರಕ ವಾತಾವರಣ ನಿರ್ಮಿಸಲು ಯೋಜನೆ ರೂಪಿಸಿಲಾಗಿದೆ ಎಂದು ಹೇಳಿದರು.

ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಎಂಜಿನಿಯರ್ ವಿಶ್ವನಾಥ್ ಮಾಹಿತಿ ನೀಡಿ, ಯೋಜನೆಯಡಿ ಜಿಲ್ಲೆಯಲ್ಲಿ 97 ಕಿ.ಮೀ ರಸ್ತೆ ನಿರ್ಮಾಣ ಮಾಡಲು ತಾಂತ್ರಿಕ ಅನುಮಾದನೆಗೆ ಕಳುಹಿಸಲಾಗಿದೆ. ದೇವನಹಳ್ಳಿಯಲ್ಲಿ 21.77 ಕಿ.ಮೀ, ದೊಡ್ಡಬಳ್ಳಾಪುರದಲ್ಲಿ 23.13 ಕಿ.ಮೀ, ಹೊಸಕೋಟೆಯಲ್ಲಿ 29.26 ಕಿ.ಮೀ ಹಾಗೂ ನೆಲಮಂಗಲ ತಾಲ್ಲೂಕಿನಲ್ಲಿ 23.78 ಕಿ.ಮೀ ಸೇರಿ ಒಟ್ಟು 58 ಕೋಟಿ ವೆಚ್ಚದ ಕಾಮಗಾರಿ ಇದಾಗಿದೆ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಜಗದೀಶ್ ಕೆ.ನಾಯ್ಕ ಮಾತನಾಡಿ ವಿವಿಧ ವರ್ಗದಲ್ಲಿ 35,530 ಅರ್ಹರು ಸಾಮಾಜಿಕ ಭದ್ರತಾ ಯೋಜನೆಯಡಿ ಫಲಾನುಭವಿಗಳಿದ್ದಾರೆ ಅರ್ಹರನ್ನು ಪತ್ತೆ ಮಾಡಿ ಯೋಜನೆಯಡಿ ತರಲಾಗುತ್ತಿದೆ. ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣವನ್ನು ಹಾಕಲಾಗುತ್ತಿದೆ ಎಂದು ಹೇಳಿದರು.

ಗ್ರಾಮೀಣ ಪ್ರದೇಶದಲ್ಲಿ 2016–17ನೇ ಸಾಲಿನಲ್ಲಿ ಖಾಸಗಿಯಾಗಿ ನೀರು ಪೂರೈಕೆ ಮಾಡಿರುವ ಮಾಲೀಕರಿಗೆ ಗ್ರಾಮ ಪಂಚಾಯಿತಿಯಿಂದ ಹಣ ಬಿಡುಗಡೆಯಾಗಿಲ್ಲ. ಈಗಾಗಲೇ ನೀರಿನ ಅಭಾವ ಹೆಚ್ಚುತ್ತಿದೆ ಹೀಗಾದರೆ ಹೇಗೆ ಎಂದು ದಿಶಾ ಸಮಿತಿ ಸದಸ್ಯೆ ಚೈತ್ರಾ ಸಭೆಯ ಗಮನ ಸೆಳೆದರು .

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಂ.ಎನ್.ನಾಗರಾಜ್, ಕೆಲವೊಂದು ತಾಂತ್ರಿಕ ತೊಂದರೆಯಿಂದಾಗಿ ₹ 50 ಲಕ್ಷ ಬಾಕಿ ಇದೆ. ಇದರ ಬಗ್ಗೆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಶೀಘ್ರದಲ್ಲೆ ಹಣ ಬಿಡುಗಡೆಯಾಗಲಿದೆ. ಪ್ರಸ್ತುತ ಟ್ಯಾಂಕರ್‌ನಿಂದ ನೀರು ಪೂರೈಕೆ ಮಾಡಲು ಯಾವುದೇ ಸಮಸ್ಯೆ ಇಲ್ಲ ಎಂದು ವಿವರಿಸಿದರು.

ಸಕೋಟೆ ಶಾಸಕ ಶರತ್ ಬಚ್ಚೇಗೌಡ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜಯಮ್ಮ, ಉಪಾಧ್ಯಕ್ಷ ಕನ್ಯಾಕುಮಾರಿ, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು .

ವಸತಿ ಯೋಜನೆ: ಸ್ಥಗಿತಗೊಂಡ ಕಾಮಗಾರಿ

ವಸತಿ ಯೋಜನಾಧಿಕಾರಿ ಗಂಗರಾಜು ಮಾತನಾಡಿ, ಪ್ರಸ್ತುತ ಜಿಲ್ಲೆಯಲ್ಲಿ 4,088 ವಸತಿ ನಿರ್ಮಾಣ ಮಾಡುವ ಉದ್ದೇಶ ಹೊಂದಲಾಗಿತ್ತು. ಕಾಮಗಾರಿ ಸ್ಥಗಿತಗೊಂಡಿದ್ದು, ಶೇ. 50ರಷ್ಟು ಕಾಮಗಾರಿ ಮಾತ್ರ ಪೂರ್ಣಗೊಂಡಿದೆ. ಕಳೆದ 8 ತಿಂಗಳಿಂದ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ. ಹೀಗಾಗಿಕಾಮಗಾರಿ ಮುಂದುವರಿದಿಲ್ಲ ಎಂದು ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿ ವಿನೂತರಾಣಿ ಮಾಹಿತಿ ನೀಡಿ, ಜಿಲ್ಲೆಯಲ್ಲಿರುವ 105 ಗ್ರಾಮ ಪಂಚಾಯಿತಿಗಳಿಗೆ ನೀಡಿರುವ ವರದಿ ಅನ್ವಯ 10,940 ಅರ್ಹರಿಗೆ ವಸತಿ ಇಲ್ಲ. 19,855 ಅರ್ಹರಿಗೆ ನಿವೇಶನಗಳಿಲ್ಲ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ,ಸಂಸದ ಬಿ.ಎನ್.ಬಚ್ಚೇಗೌಡ, ‘ಪಕ್ಷಾತೀತವಾಗಿ ಫಲಾನುಭವಿಗಳನ್ನು ಗುರುತಿಸಬೇಕು. ರಾಜಕಾರಣ ಬೇಡ. ಅರ್ಹತೆ ಇದ್ದವರಿಗೆ ಜಾಗ ಗುರುತಿಸಿ ನಿವೇಶನ ನೀಡಿ. ಬಜೆಟ್‌ನಲ್ಲಿ 2.4 ಲಕ್ಷ ಮನೆ ನಿರ್ಮಾಣ ಮಾಡುವ ಗುರಿಯನ್ನು ರಾಜ್ಯ ಸರ್ಕಾರ ಇಟ್ಟುಕೊಂಡಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.