ADVERTISEMENT

‘ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ’

​ಪ್ರಜಾವಾಣಿ ವಾರ್ತೆ
Published 6 ಜನವರಿ 2018, 6:43 IST
Last Updated 6 ಜನವರಿ 2018, 6:43 IST

ವಿಜಯಪುರ : ‘2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಸ್ಪಷ್ಟ ಬಹುಮತ ಪಡೆದು ಸರ್ಕಾರ ರಚಿಸಲಿದೆ’ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ಬಿಜೆಪಿ ಘಟಕದ ಅಧ್ಯಕ್ಷ ಬಿ.ರಾಜಣ್ಣ ವಿಶ್ವಾಸ ವ್ಯಕ್ತಪಡಿಸಿದರು.

ಚನ್ನರಾಯಪಟ್ಟಣ ಹೋಬಳಿ ಭಟ್ಟರ ಮಾರೇನಹಳ್ಳಿ ಗ್ರಾಮದ ಬಿಜೆಪಿ ಮುಖಂಡ ಮುರಳಿ ನಿವಾಸದಲ್ಲಿ, ಚನ್ನರಾಯಪಟ್ಟಣ ಶಕ್ತಿ ಕೇಂದ್ರದ ವತಿಯಿಂದ ಬುಧವಾರ ಆಯೋಜಿಸಿದ್ದ ಕಾರ್ಯಕರ್ತರ ಸಭೆ ಹಾಗೂ ಜನವರಿ 16 ರಂದು ನಡೆಯಲಿರುವ ಪರಿವರ್ತನಾ ರ‍್ಯಾಲಿ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿ ಬಿಜೆಪಿ ಆಡಳಿತದಲ್ಲಿ ರೈತರು ಉತ್ಪಾದನೆ ಮಾಡುವ ಹಾಲಿಗೆ ₹2 ರೂ ಪ್ರೋತ್ಸಾಹ ಧನ ನೀಡುವ ಮೂಲಕ ಹೈನುಗಾರಿಕೆಗೆ ಹೊಸ ಚೇತರಿಕೆ ನೀಡಲಾಗಿತ್ತು. ಕಾಂಗ್ರೆಸ್ ಸರ್ಕಾರ ಯೋಜನೆಯನ್ನು ಮುಂದುವರೆಸಿಕೊಂಡು ಹೋಗುತ್ತಿದೆ ಎಂದರು.

ADVERTISEMENT

ಅನ್ನಭಾಗ್ಯ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದು, ಕೇಂದ್ರದಿಂದ ಹೆಚ್ಚು ಅನುದಾನ ನೀಡುವುದರಿಂದ ಅನ್ನ ಭಾಗ್ಯ ಸಿಗುತ್ತಿದೆ. ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪ ನೇತೃತ್ವದಲ್ಲಿ ಪರಿವರ್ತನಾ ಯಾತ್ರೆ ನಡೆಯುತ್ತಿದ್ದು, ಎಲ್ಲೆಡೆ ಕೇಂದ್ರ ಸರ್ಕಾರದ ಯೋಜನೆಗಳನ್ನು ನೆಚ್ಚಿಕೊಂಡಿರುವ ಜನರು ಸಾವಿರಾರು ಸಂಖ್ಯೆಯಲ್ಲಿ ಸೇರುವ ಮೂಲಕ ಉತ್ತಮ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ ಎಂದರು.

ತಾಲ್ಲೂಕಿನಾದ್ಯಂತ 15 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಈ ಸಭೆಗೆ ಬರಲಿದ್ದಾರೆ. ಬೂತ್ ಮಟ್ಟದಿಂದಲೇ ಪ್ರತಿ ಬೂತ್ ಗೆ 9 ಜನ ಸದಸ್ಯರನ್ನು ನೇಮಿಸಲಾಗಿದೆ. ಪಕ್ಷದ ಕಾರ್ಯಕರ್ತರು ಹೆಚ್ಚಿನ ಶ್ರಮ ವಹಿಸಿ ಪ್ರಧಾನಿ ನರೇಂದ್ರಮೋದಿ ಅವರು ಜಾರಿಗೆ ತಂದಿರುವ ಜನಪರವಾದ ಯೋಜನೆಗಳನ್ನು ಮನೆ ಮನೆಗೆ ತಿಳಿಸಿ ಜನರನ್ನು ಸೇರಿಸುವ ಕೆಲಸ ಮಾಡಬೇಕು ಎಂದರು.

ಬಿಜೆಪಿ ಮುಖಂಡ ಡಿ.ಆರ್.ನಾರಾಯಣಸ್ವಾಮಿ ಮಾತನಾಡಿ, ಕರ್ನಾಟದಲ್ಲಿ ಮತ್ತೆ ಬಿಜೆಪಿ ಪರ ಗಾಳಿ ಬೀಸುತ್ತಿದ್ದು, ಜನರ ಆಶೀರ್ವಾದ ದೊರಕಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್‌ ಷಾ ಅವರ ನಿರೀಕ್ಷೆಯಂತೆ ಮತ್ತೆ ಬಿಜೆಪಿ ಪಕ್ಷಕ್ಕೆ ಬಹುಮತ ಸಿಗಲಿದೆ ಎಂದರು.

ಎಲ್ಲ ಸ್ಥಳೀಯ ಸಂಸ್ಥೆಗಳಲ್ಲಿ ಶೇ 50 ರಷ್ಟು ಮೀಸಲಾತಿ ನೀಡುವ ಮೂಲಕ ಪುರುಷರಷ್ಟೇ ಸಮಾನ ಸ್ಥಾನ ಕಲ್ಪಿಸಿದ ಹೆಗ್ಗಳಿಕೆ ಬಿಜೆಪಿಗೆ ಇದೆ. ಹೀಗಾಗಿ ಸ್ತ್ರೀಶಕ್ತಿ ಸಂಘ, ವಿವಿಧ ಮಹಿಳಾ ಸಂಘಟನೆಗಳು ಬಿಜೆಪಿ ಅಭ್ಯರ್ಥಿ ಗೆಲ್ಲಿಸಲು ಸಂಕಲ್ಪ ಮಾಡುವ ಮೂಲಕ ಸರ್ಕಾರ ರಚನೆಗೆ ಸಹಕರಿಸಬೇಕು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹಗಲು ದರೋಡೆ ಮೂಲಕ ರಾಜ್ಯದ ಖಜಾನೆಯನ್ನು ಲೂಟಿ ಮಾಡಿದೆ ಎಂದರು. ಬಡವರ ಹಣವನ್ನು ಸಮಾವೇಶದ ಮೂಲಕ ಪೋಲು ಮಾಡಲಾಗುತ್ತಿದೆ. ಭ್ರಷ್ಟ ಸರ್ಕಾರ ಕಿತ್ತೆಸೆದು ಬಿಜೆಪಿ ಅಧಿಕಾರಕ್ಕೆ ತರಲು ಸಹಕರಿಸಿ ಎಂದು ಮನವಿ ಮಾಡಿದರು.

ತಾಲ್ಲೂಕು ಘಟಕದ ಅಧ್ಯಕ್ಷ ಸಿ.ನಾಗರಾಜಗೌಡ, ಚನ್ನರಾಯಪಟ್ಟಣ ಶಕ್ತಿ ಕೇಂದ್ರದ ಅಧ್ಯಕ್ಷ ರಾಮಾಂಜಿನೇಯ ಉಪಾಧ್ಯಕ್ಷ ಕೆ.ಸಿ.ಮುನಿರಾಜು, ಪ್ರಧಾನ ಕಾರ್ಯದರ್ಶಿ ಸೊಣ್ಣೇಗೌಡ, ಎಂ.ಪಿ.ಸಿ.ಎಸ್ ಅಧ್ಯಕ್ಷ ಕಾಳಪ್ಪ, ರಾಜ್ಯಪರಿಷತ್ ಸದಸ್ಯ ದೇ.ಸು.ನಾಗರಾಜ್, ತಾಲ್ಲೂಕು ರೈತ ಮೋರ್ಚಾ ಅಧ್ಯಕ್ಷ ಅಗ್ರಹಾರ ರಾಜಣ್ಣ, ಉಪಾಧ್ಯಕ್ಷ ಗೋಕರೆ ಜಿ.ಎನ್.ಗೋಪಾಲ್, ಯುವ ಮೋರ್ಚಾ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಡಿ.ಆರ್.ಬಾಲರಾಜ್, ಮುಖಂಡ ಕಮಲೇಶ್, ಹರೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.