ADVERTISEMENT

‘ರೈತರ ಬೆಳೆಗೆ ಉತ್ತಮ ಮಾರುಕಟ್ಟೆ ವ್ಯವಸ್ಥೆ’

ವಿಜಯಪುರದ ನಲ್ಲೂರು ಗಂಗಾದೇವಿ ದೇವಾಲಯ ಸಮೀಪದಲ್ಲಿ ಸಂತೆ ಮಳಿಗೆ ನಿರ್ಮಾಣಕ್ಕೆ ಪೂಜೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2018, 6:55 IST
Last Updated 15 ಜನವರಿ 2018, 6:55 IST

ವಿಜಯಪುರ: ಗ್ರಾಮಾಂತರ ಪ್ರದೇಶಗಳಲ್ಲಿ ರೈತರು ಬೆಳೆಯುವ ಬೆಳೆಗಳಿಗೆ ಉತ್ತಮ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು. ಅಲ್ಲದೆ, ಸಂತೆ ಮಳಿಗೆಗಳನ್ನು ರೈತರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜಿಲ್ಲಾಪಂಚಾಯಿತಿ ಉಪಾಧ್ಯಕ್ಷೆ ಅನಂತಕುಮಾರಿ ಚಿನ್ನಪ್ಪ ಸಲಹೆ ನೀಡಿದರು.

ನಲ್ಲೂರು ಗಂಗಾದೇವಿ ದೇವಾಲಯ ಸಮೀಪದಲ್ಲಿ ₹15 ಲಕ್ಷ ವೆಚ್ಚದಲ್ಲಿ ಸಂತೆ ಮಳಿಗೆಗಳು ನಿರ್ಮಾಣ ಮಾಡಲು ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಗ್ರಾಮ ಪಂಚಾಯಿತಿಗಳ ಮಟ್ಟದಲ್ಲಿ ಸಂತೆ ಮಾರುಕಟ್ಟೆಗಳು ನಿರ್ಮಾಣವಾದರೆ, ರೈತರಿಗೆ ಅನುಕೂಲವಾಗಲಿದೆ. ರೈತರು ಬೆಳೆದ ತರಕಾರಿಗಳನ್ನು ನಿಗದಿತ ಸಮಯದಲ್ಲಿ ಮಾರುಕಟ್ಟೆಗೆ ತರಲು ಅನುಕೂಲವಾಗಲಿದೆ ಎಂದರು.

ADVERTISEMENT

ಮಾರುಕಟ್ಟೆ ನಿರ್ವಹಣೆಯನ್ನು ಪಂಚಾಯಿತಿಗಳು ಸಮರ್ಪಕವಾಗಿ ನಿಭಾಯಿಸಬೇಕು. ಇದರಿಂದ ಬರುವ  ಆದಾಯವನ್ನು ಪಂಚಾಯಿತಿ ಅಭಿವೃದ್ಧಿಗಾಗಿ ಉಪಯೋಗಿಸಿಕೊಳ್ಳ
ಬೇಕು ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಲಕ್ಷ್ಮೀನಾರಾಯಣಪ್ಪ ಮಾತನಾಡಿ, ಗ್ರಾಮಾಂತರ ಪ್ರದೇಶಗಳಲ್ಲಿನ ರೈತರು ಬೆಳೆಯುತ್ತಿರುವ ಬೆಳೆಗಳಿಗೆ ವೈಜ್ಞಾನಿಕವಾದ ಬೆಲೆಗಳು ಸಿಗಬೇಕು ಎಂದರು.

ಸ್ಥಳೀಯ ಮಾರುಕಟ್ಟೆಗಳಿಗೆ ಬರುವಂತಹ ತರಕಾರಿಗಳ ಮಾರಾಟಕ್ಕೆ ಅನುಕೂಲಕರವಾದ ವಾತಾವರಣ ನಿರ್ಮಾಣವಾಗಬೇಕು. ರೈತರು ಮತ್ತು ವ್ಯಾಪಾರಸ್ಥರ ನಡುವೆ ನೇರವಾದ ಸಂಪರ್ಕವಿರಬೇಕು. ಮಧ್ಯವರ್ತಿಗಳಿಗೆ ಅವಕಾಶ ನೀಡಬೇಡಿ ಎಂದರು.

ದೊಡ್ಡಬಳ್ಳಾಪುರ ಎ.ಪಿ.ಎಂ.ಸಿ ಅಧ್ಯಕ್ಷೆ ಅಮರಾವತಿ ಮಾತನಾಡಿ, ಸಂಸ್ಥೆವತಿಯಿಂದ ಬರುವ ಎಲ್ಲಾ ಸೌಲಭ್ಯಗಳನ್ನು ನೇರವಾಗಿ ರೈತರಿಗೆ ತಲುಪು
ವಂತೆ ಕ್ರಮವಹಿಸಲಾಗುತ್ತಿದೆ. ಈಗಾಗಲೇ ಸರ್ಕಾರ ರೈತರಿಂದ ₹2300 ಬೆಂಬಲ ನೀಡಿ, ರಾಗಿ ಖರೀದಿ ಮಾಡುತ್ತಿದೆ ಎಂದರು.

ಖರೀದಿಸುವ ಅಧಿಕಾರವನ್ನು ಎ.ಪಿ.ಎಂ.ಸಿ ಗೆ ನೀಡಿದ್ದಾರೆ. ಇದರಿಂದ ರೈತರು ನೇರವಾಗಿ ರಾಗಿಯನ್ನು ಮಾರಾಟ ಮಾಡಬಹುದಾಗಿದೆ ಎಂದರು.

ಕಾಂಗ್ರೆಸ್ ನಾಯಕ ಮುನಿನರಸಿಂಹಯ್ಯ ಮಾತನಾಡಿ, ಸರ್ಕಾರ ಜಾರಿಗೆ ತಂದಿರುವ ಹಲವಾರು ಅಭಿವೃದ್ಧಿ ಯೋಜನೆಗಳ ಜೊತೆಗೆ ರೈತರ
ಅನುಕೂಲಕ್ಕಾಗಿ ಜಾರಿಗೆ ತಂದಿರುವ ಎಲ್ಲಾ ಯೋಜನೆಗಳು ಸದ್ಭಳಕೆಯಾಗಬೇಕು. ಕಾಮಗಾರಿಗಳ ಗುತ್ತಿಗೆ ಪಡೆಯುವಂತಹ ಗುತ್ತಿಗೆದಾರರು ನಿಗದಿ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸಿ, ಗುಣಮಟ್ಟ ಕಾಪಾಡಬೇಕು ಎಂದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಭಾರತಿ ಲಕ್ಷ್ಮಣಗೌಡ, ನಲ್ಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಾವಿತ್ರಮ್ಮ ಕೆಂಪೇಗೌಡ, ತಾಲ್ಲೂಕು ಪಂಚಾಯಿತಿ ಸದಸ್ಯ ಮಂಜುನಾಥ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನವೀನ್, ಸದಸ್ಯರಾದ ಆಂಜಿನಪ್ಪ, ಮಹಾದೇವಿ ವೀರಭದ್ರಪ್ಪ, ಮಂಜುಳಾ ಮಂಜುನಾಥ್, ಮಮತಾ ಕೃಷ್ಣ, ಮಹಾಲಕ್ಷ್ಮೀ ಲಲಿತೇಶ್, ಸೋಮಶೇಖರ್, ಆಂಜಿನಮ್ಮ ಕೃಷ್ಣಪ್ಪ, ಕೃಷಿಕ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ರವಿಕುಮಾರ್, ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀನಿವಾಸ್‌ಗೌಡ, ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಛಲವಾದಿ ನಾರಾಯಣಸ್ವಾಮಿ, ಜಿಲ್ಲಾ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಲೊಕೇಶ್, ವಿಜಯಪುರ ಕಿಸಾನ್ ಕೇತ್ ಮಸ್ದೂರ್ ಅಧ್ಯಕ್ಷ ಭೈರೇಗೌಡ, ಮುನಿನಾರಾಯಣಪ್ಪ, ಕೃಷ್ಣಾನಂದ ಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.