ADVERTISEMENT

ಮೋದಿ ಮಹಾ ಸುಳ್ಳುಗಾರ: ಟೀಕೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2018, 9:37 IST
Last Updated 7 ಫೆಬ್ರುವರಿ 2018, 9:37 IST
ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಮುಖಂಡರು
ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಮುಖಂಡರು   

ದೇವನಹಳ್ಳಿ: ರಾಜ್ಯದಲ್ಲಿ ಜಲ್ವಂತ ಸಮಸ್ಯೆಗಳಿದ್ದರೂ ಬಾಯಿ ಬಿಡದ ಪ್ರಧಾನಿ ನರೇಂದ್ರ ಮೋದಿ ಮಹಾ ಸುಳ್ಳುಗಾರ ಎಂದು ಕೆಪಿಸಿಸಿ ರಾಜ್ಯ ಘಟಕ ಪ್ರಧಾನ ಕಾರ್ಯದರ್ಶಿ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಕಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪರಿವರ್ತನಾ ಸಮಾರಂಭದಲ್ಲಿ ಮಾತನಾಡಿರುವ ಕುರಿತು ಪ್ರಸ್ತಾಪಿಸಿದ ಅವರು, ಮೈಸೂರಿನಲ್ಲಿ ನಡೆದ ಪರಿವರ್ತನಾ ಯಾತ್ರೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಬಂದಾಗ ಕರ್ನಾಟಕ ಬಂದ್ ಆಗಿತ್ತು. ಮೋದಿ ಬಂದಾಗ ಮಹದಾಯಿ ಸಮಸ್ಯೆ ಬಗೆಹರಿಸಲು ಪ್ರಗತಿಪರ ಸಂಘಟನೆಗಳು ಕರಾಳ ದಿನವನ್ನಾಗಿ ಆಚರಿಸಿದ್ದಾರೆ. ಮಹದಾಯಿ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಪರಿಹಾರ ಪೋಷಿಸುವ ನಿರೀಕ್ಷೆ ಹುಸಿಯಾಗಿದೆ ಎಂದು ದೂರಿದರು.

ರಾಜ್ಯದಲ್ಲಿ ಪರ್ಸೆಂಟೇಜ್‌ ಆಡಳಿತವಿದೆ. ಭ್ರಷ್ಟಾಚಾರ ಮಿತಿ ಮೀರಿದೆ ಎಂದು ಸಾಮಾನ್ಯ ಬಿಜೆಪಿ ಕಾರ್ಯಕರ್ತರು ತಳಬುಡ ಇಲ್ಲದಂತೆ ಆರೋಪ ಮಾಡುತ್ತಿದ್ದಾರೆ. ಉಪನಗರ ರೈಲು ಯೋಜನೆಗೆ ₹17 ಸಾವಿರ ಕೋಟಿಯಲ್ಲಿ ರಾಜ್ಯದ ಪಾಲು ಇದೆ. ಬಿಜೆಪಿ ಆಡಳಿತಕ್ಕೆ ಬಂದ ನಂತರ ನಿರುದ್ಯೋಗ ಹೆಚ್ಚಾಗಿದೆ. ಮೋದಿ ಸೇರಿದಂತೆ ಪಕ್ಷದಲ್ಲಿ ಹಲವರು ಸುಳ್ಳು ಹೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಜನಧನ್‌ ಖಾತೆಯಿಂದ ₹15 ಲಕ್ಷ ಜನರಿಗೆ ಬರಲಿಲ್ಲ. ₹50 ಕೋಟಿ ಕುಟುಂಬಕ್ಕೆ ಆರೋಗ್ಯ ಕಲ್ಪಿಸುವ ಯೋಜನೆಗೆ ಕೇಂದ್ರ ಬಜೆಟ್‌ನಲ್ಲಿ ಕೇವಲ ₹2 ಸಾವಿರ ಕೋಟಿ ಅನುದಾನ ಮೀಸಲಿಟ್ಟಿದ್ದಾರೆ. ಇದರಲ್ಲಿ ತಲಾ ಕುಟುಂಬಕ್ಕೆ ಲೆಕ್ಕ ಹಾಕಿದರೆ ₹40 ಮಾತ್ರ ಬರುತ್ತೆ. ಅಮಿತ್ ಶಾ ಮತ್ತು ಪ್ರಧಾನಿ ಮೋದಿ ಕಪಟ ನಾಟಕ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ದೇಶದಲ್ಲಿ ಎಲ್ಲರಿಗೂ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ ಎಂದು ಮೋದಿ ಹೇಳಿದ್ದಾರೆ. ಆದರೆ ಇದು ಇನ್ನೂ ಸರಿಯಾದ ಪ್ರಮಾಣದಲ್ಲಿ ಕಲ್ಪಸಿಕೊಟ್ಟಿಲ್ಲ. ನೋಟು ರದ್ದತಿಯಿಂದ ಸರತಿ ಸಾಲುನಿಂತು 150 ಕ್ಕೂ ಹೆಚ್ಚು ಜನ ಸತ್ತಿದ್ದಾರೆ. ಮಂಗಳೂರು ಕೋಮುಗಲಭೆಯಿಂದ ಹಲವಾರು ಜನ ಪ್ರಾಣ ಕಳೆದುಕೊಂಡಿದ್ದಾರೆ ಎಂದು ದೂರಿದರು.

ಸದಸ್ಯ ಸಿ.ಕೆ. ರಾಮಚಂದ್ರಪ್ಪ, ಕೆಪಿಸಿಸಿ ಜಿಲ್ಲಾ ಘಟಕ ಕಾರ್ಯಕಾರಿ ಸಮಿತಿ ಸದಸ್ಯ ಭುವನಹಳ್ಳಿ ಮುನಿರಾಜು, ವಿಜಯಪುರ ಬ್ಲಾಕ್ ಕಾಂಗ್ರೆಸ್ ಘಟಕ ಉಪಾಧ್ಯಕ್ಷ ಡೆವಿಡ್ ನಾರಾಯಣಸ್ವಾಮಿ, ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಘಟಕ ಉಪಾಧ್ಯಕ್ಷ ಪುರುಷೋತ್ತಮ್ ಕುಮಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.