ADVERTISEMENT

‘ಮತ ಪರಿವರ್ತಿಸಿದರೆ ಜೆಡಿಎಸ್‌ ಅಧಿಕಾರಕ್ಕೆ’

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2018, 9:32 IST
Last Updated 12 ಫೆಬ್ರುವರಿ 2018, 9:32 IST

ವಿಜಯಪುರ: ಜೆಡಿಎಸ್‌ನ ಎಚ್.ಡಿ.ಕುಮಾರಸ್ವಾಮಿ ಅವರ ಮೇಲೆ ಜನರಿಗಿರುವ ಅಭಿಮಾನವನ್ನು ಮತಗಳನ್ನಾಗಿ ಪರಿವರ್ತನೆ ಮಾಡಿದಾಗ ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲು ಸಾಧ್ಯವಾಗುತ್ತದೆ ಎಂದು ಜೆಡಿಎಸ್‌ನ ಚನ್ನರಾಯಪಟ್ಟಣ ಹೋಬಳಿ ಘಟಕದ ಅಧ್ಯಕ್ಷ ಮುನಿರಾಜು ಹೇಳಿದರು.

ಚನ್ನರಾಯಪಟ್ಟಣ ಹೋಬಳಿ ನಲ್ಲೂರು ಗಂಗಾದೇವಿ ದೇವಾಲಯದ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಚನ್ನರಾಯಪಟ್ಟಣ ಹೋಬಳಿಯ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಪರಿಶಿಷ್ಟ ಘಟಕದ ಪದಾಧಿ ಕಾರಿಗಳ ಆಯ್ಕೆ ಸಭೆಯಲ್ಲಿ ಅವರು ಮಾತನಾಡಿದರು.

ಕುಮಾರಸ್ವಾಮಿ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡುವುದು, ವಿಧವಾ ವೇತನ, ವೃದ್ಧಾಪ್ಯ ವೇತನ, ಹೆಚ್ಚಿಸುವುದು, ರೈತರಿಗೆ ದಿನದ 24ಗಂಟೆ ವಿದ್ಯುತ್ ಪೂರೈಸುವುದು, ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುವುದು, ನೀರಾವರಿ ಯೋಜನೆಗಳಿಗೆ ₹85 ಸಾವಿರ ಕೋಟಿ ಅನುದಾನ ಮೀಸಲಿಡುವುದು ಸೇರಿದಂತೆ ಗ್ರಾಮಾಂತರ ಪ್ರದೇಶಗಳ ಅಭಿವೃದ್ಧಿಗಾಗಿ ಕೈಗೊಂಡಿರುವ ಯೋಜನೆಗಳ ಬಗ್ಗೆ ಪಕ್ಷದ ಕಾರ್ಯಕರ್ತರು ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದರು.

ADVERTISEMENT

ಪರಿಶಿಷ್ಟ ಜಾತಿ ಘಟಕದ ತಾಲ್ಲೂಕು ಅಧ್ಯಕ್ಷ ಹನುಮಂತಪ್ಪ ಮಾತನಾಡಿ, ರಾಜ್ಯದಲ್ಲಿ ಆಡಳಿತ ನಡೆಸಿದ ಯಾವ ಸರ್ಕಾರಗಳೂ, ಪರಿಶಿಷ್ಟ ಜನಾಂಗದ ಏಳಿಗೆಗಾಗಿ ಹೆಚ್ಚಿನ ಆದ್ಯತೆ ನೀಡಿರಲಿಲ್ಲ ಎಂದರು. ಕೇವಲ ಮತ ಬ್ಯಾಂಕುಗಳನ್ನಾಗಿ ಬಳಕೆ ಮಾಡಿಕೊಂಡರೆ ವಿನಃ ಅಭಿವೃದ್ಧಿಗಾಗಿ ಚಿಂತನೆ ನಡೆಸಿಲ್ಲ ಎಂದರು.

ಜೆಡಿಎಸ್ ನಾಯಕ ನಿಸರ್ಗ ಡಾ.ಎಲ್.ಎನ್.ನಾರಾಯಣಸ್ವಾಮಿ ಮಾತನಾಡಿ, 10 ವರ್ಷಗಳಲ್ಲಿ ರೈತ ವಿರೋಧಿ, ಭ್ರಷ್ಟ ಸರ್ಕಾರಗಳನ್ನು ಕಂಡಿದ್ದೇವೆ. ರಾಜ್ಯದಲ್ಲಿ ಆಗುತ್ತಿರುವ ದೌರ್ಜನ್ಯ ದಬ್ಬಾಳಿಕೆಗಳಿಂದಾಗಿ ಜನರು ಬೇಸತ್ತು ಹೋಗಿದ್ದಾರೆ. ಯುವಕರು ಕ್ರಿಯಶೀಲರಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು. ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷಕ್ಕಾಗಿ ದುಡಿಯುವ ಮುಖಂಡರು, ಕಾರ್ಯರ್ತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದರು.

ಪಕ್ಷದ ಕಡೆಗೆ ಮತಗಳನ್ನು ಸೆಳೆಯುವ ಕಲೆಯ ಬಗ್ಗೆ ಯುವಕರಿಗೆ ತರಬೇತಿ ನೀಡಬೇಕು. ಮುಖಂಡರಿಂದ ಜೆಡಿಎಸ್ ಅಲ್ಲ, ಜನರಿಂದ ಜೆಡಿಎಸ್ ಆಗಿದೆ ಎಂಬುದನ್ನು ಅರ್ಥ ಮಾಡಿಕೊಂಡು ಕೆಲಸ ಮಾಡಿ ಎಂದರು.

ಜೆಡಿಎಸ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಬಿ.ಕೆ.ಶಿವಪ್ಪ ಮಾತನಾಡಿ, ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿ, ವಿಧಾನಸಭೆಯಲ್ಲಿ ಜೆಡಿಎಸ್ ಶಾಸಕರ ಸಂಖ್ಯೆಯನ್ನು ಹೆಚ್ಚಿಸಬೇಕು ಎಂದರು. ಹೋಬಳಿಯ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಘಟಕಗಳ ಪದಾಧಿಕಾರಿಗಳಿಗೆ ನೇಮಕಾತಿ ಪತ್ರ ವಿತರಿಸಿದರು.

ಪರಿಶಿಷ್ಟ ಘಟಕದ ಜಿಲ್ಲಾ ಘಟಕದ ಅಧ್ಯಕ್ಷ ಕಗ್ಗಲಹಳ್ಳಿ ಗುರಪ್ಪ, ಮುಖಂಡರಾದ ತೆಲ್ಲೋ ಹಳ್ಳಿ ಶ್ರೀನಿವಾಸಮೂರ್ತಿ, ನಲ್ಲೂರು ರಾಜೇಶ್, ಕೆಂಪಣ್ಣ, ರೆಡ್ಡಿಹಳ್ಳಿ ಮುನಿರಾಜು, ಇಂದ್ರಾಣಿ, ಎಂ. ಶ್ರೀನಿವಾಸ್, ಕೃಷ್ಣಮೂರ್ತಿ, ಗಂಗವಾರ ಮನೋಹರ್, ಗಂಗವಾರ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜಣ್ಣ, ಮಂಜುಳಾ
ದೇವಿ, ದೇವನಾಯಕನಹಳ್ಳಿ ರಾಜಣ್ಣ, ರಾಜೇಶ್, ಕದಿರಪ್ಪ, ಮೂರ್ತಿ, ಹರಳೂರು ಮುನಿಯಪ್ಪ, ಐಬಸಾಪುರ ವೆಂಕಟೇಶ್ ಶಿವಾನಂದ ಇದ್ದರು.

ಘಟಕದ ತಾಲ್ಲೂಕು ಅಧ್ಯಕ್ಷ ಹನುಮಂತಪ್ಪ ಮಾತನಾಡಿ, ಕುಮಾರಸ್ವಾಮಿ ಅವರ 20 ತಿಂಗಳ ಅವಧಿಯಲ್ಲಿ ಅವರು ಕೈಗೊಂಡ ದಿಟ್ಟ ನಿರ್ಧಾರಗಳು ಇಂದಿನ ಸರ್ಕಾರಕ್ಕೆ ಮಾರ್ಗಸೂಚಿ ಎಂದರು.

ಕ್ಷೇತ್ರದಲ್ಲಿ ಶಾಸಕ ಪಿಳ್ಳಮುನಿಶಾಮಪ್ಪ ಅವರೂ ಕುಮಾರಸ್ವಾಮಿ ಅವರ ಹಾದಿಯಲ್ಲಿ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಆದ್ದರಿಂದ ಪಕ್ಷದ ಪ್ರತಿಯೊಬ್ಬ ಕಾರ್ಯರ್ತರು, ಬೂತ್ ಮಟ್ಟದಿಂದಲೇ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡು ಮುಂದಿನ ಚುನಾವಣೆಯಲ್ಲಿ ತಾಲ್ಲೂಕಿನಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಜೆಡಿಎಸ್ ಸರ್ಕಾರದ ಸ್ಥಾಪನೆಗೆ ಮುಂದಾಗಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.