ADVERTISEMENT

ಸಾರಿಗೆ ಮುಷ್ಕರ: ವಿಮಾನ ಪ್ರಯಾಣಿಕರಿಗೂ ತಟ್ಟಿದ ಬಿಸಿ!

ದುಪ್ಪಟ್ಟು ಬಾಡಿಗೆ: ಟ್ಯಾಕ್ಸಿಗಳಿಗೆ ಸುಗ್ಗಿ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2021, 2:38 IST
Last Updated 8 ಏಪ್ರಿಲ್ 2021, 2:38 IST
ಜನರು ಮತ್ತು ಬಸ್‌ ಇಲ್ಲದೆ ಬಿಕೋ ಎನ್ನುತ್ತಿರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿರುವ ಬಿಎಂಟಿಸಿ ಬಸ್‌ ನಿಲ್ದಾಣ  
ಜನರು ಮತ್ತು ಬಸ್‌ ಇಲ್ಲದೆ ಬಿಕೋ ಎನ್ನುತ್ತಿರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿರುವ ಬಿಎಂಟಿಸಿ ಬಸ್‌ ನಿಲ್ದಾಣ     

ದೇವನಹಳ್ಳಿ: ಸಾರಿಗೆ ನೌಕರರ ಮುಷ್ಕರದ ಬಿಸಿ ಇಲ್ಲಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಯಾಣಿಕರಿಗೂ ತಟ್ಟಿತು. ಬಿಎಂಟಿಸಿ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ಪರದಾಡಬೇಕಾಯಿತು.

ಮಂಗಳವಾರ ಸಂಜೆಯಿಂದಲೇ ವಿಮಾನ ನಿಲ್ದಾಣಕ್ಕೆ ವಾಯುವಜ್ರ ಸೇರಿದಂತೆ ಬಿಎಂಟಿಸಿ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಬುಧವಾರ ಬಿಎಂಟಿಸಿ ಮತ್ತು ಖಾಸಗಿ ಬಸ್‌ಗಳು ವಿಮಾನ ನಿಲ್ದಾಣದ ಕಡೆಗೆ ಸುಳಿಯಲಿಲ್ಲ. ಇದರಿಂದಾಗಿ ಟ್ಯಾಕ್ಸಿ ಚಾಲಕರು ಕೇಳಿದಷ್ಟು ಹಣ ತೆತ್ತು ಪ್ರಯಾಣಿಕರು ಮನೆ ಸೇರಿಕೊಂಡರು.

ಎರಡರಿಂದ ಮೂರು ಪಟ್ಟು ದುಬಾರಿ ಬಾಡಿಗೆ ತೆರಲು ಸಾಧ್ಯವಾಗದ ಕೆಲವು ಪ್ರಯಾಣಿಕರು, ಸ್ನೇಹಿತರು ಮತ್ತು ಕುಟುಂಬದ ಸದಸ್ಯರಿಗೆ‌ ಕರೆ ಮಾಡಿ ವಾಹನ ತರಿಸಿಕೊಂಡು ಅದರಲ್ಲಿ ತೆರಳಿದರು.

ADVERTISEMENT

‘ವಿಮಾನ ನಿಲ್ದಾಣಕ್ಕೆ ಪ್ರತಿದಿನ ಬೆಂಗಳೂರು ನಗರ ಸೇರಿದಂತೆ ವಿವಿಧೆಡೆಯಿಂದ 60 ಬಸ್‌‌ 300 ಟ್ರಿಪ್‌ ಕಾರ್ಯಾಚರಣೆ ನಡೆಸುತ್ತವೆ. ಸಾರಿಗೆ ನೌಕರರ ಮುಷ್ಕರದಿಂದಾಗಿ ಒಂದೂ ಬಿಎಂಟಿಸಿ ಬಸ್‌ ಈ ಕಡೆಗೆ ಮುಖ ಮಾಡಿಲ್ಲ’ ಎಂದು ಬಸ್‌ ನಿಲ್ದಾಣದ ಭದ್ರತಾ ಸಿಬ್ಬಂದಿ ಪವನ್ ಚವ್ಹಾಣ್ ಹೇಳಿದರು.

‘ದೆಹಲಿಯಿಂದ ಈಗಷ್ಟೇ ಬಂದಿದ್ದೇನೆ. ರಾಜಮಹಲ್ ಪ್ಯಾಲೇಸ್‌ ಗುಟ್ಟಹಳ್ಳಿಗೆ ಹೋಗಬೇಕು. ಟ್ಯಾಕ್ಸಿಯವರು ₹ 1,800 ಬಾಡಿಗೆ ಕೇಳುತ್ತಿದ್ದಾರೆ’ ಎಂದುಪ್ರಯಾಣಿಕ ರಾಜೇಶ್ ಕುಮಾರ್ ಬೇಸರ ವ್ಯಕ್ತಪಡಿಸಿದರು.

‘ಲಾಕ್‌ಡೌನ್ ಸಮಯದಲ್ಲಿ ನಮ್ಮ ಪರಿಸ್ಥಿತಿ ಹೇಗಿತ್ತು ಎಂದು ಯಾರೊಬ್ಬರೂ ಕೇಳಲಿಲ್ಲ. ಪ್ರಸ್ತುತ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಿದೆ. ಟೋಲ್ ದುಬಾರಿಯಾಗಿದೆ. ನಮ್ಮ ನೋವು ಕೇಳುವವರು ಯಾರು’ ಎಂದು ಟ್ಯಾಕ್ಸಿ ಚಾಲಕರು ಪ್ರಶ್ನಿಸಿದರು. ಪ್ರಯಾಣಿಕರಿಂದ ಹೆಚ್ಚಿನ ಬಾಡಿಗೆ ವಸೂಲಿಯನ್ನು ಅವರು ಸಮರ್ಥಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.